ಶನಿವಾರ, ಸೆಪ್ಟೆಂಬರ್ 26, 2020
27 °C

ಬೆಳಗಾವಿ: ‘ವರ್ಚುವಲ್‌ ರಿಯಾಲಿಟಿ’ ಮೂಲಕ ಕಲಿಕೆ, ಸರ್ಕಾರಿ ಶಾಲೆ ಶಿಕ್ಷಕನ ಪ್ರಯೋಗ

ಎಂ. ಮಹೇಶ Updated:

ಅಕ್ಷರ ಗಾತ್ರ : | |

prajavani

ಬೆಳಗಾವಿ: ಕೋವಿಡ್ ಕಾರಣದಿಂದಾಗಿ ಶಾಲೆಗಳಿಂದ ದೂರ ಉಳಿದಿರುವ ಮಕ್ಕಳನ್ನು ಕಲಿಕೆಯತ್ತ ಆಕರ್ಷಿಸಲು ತಾಲ್ಲೂಕಿನ ಭೂತರಾಮನಹಟ್ಟಿಯ ನಮ್ಮೂರ ಕನ್ನಡ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ವಿಜ್ಞಾನ ಶಿಕ್ಷಕ ಬಸವರಾಜ ಸುಂಗಾರಿ ‘ವರ್ಚುವಲ್‌ ರಿಯಾಲಿಟಿ’ ವೇದಿಕೆ ಮೂಲಕ ಸೃಜನಶೀಲ ಚಟುವಟಿಕೆಗಳನ್ನು ನಡೆಸುತ್ತಿದ್ದಾರೆ.

‘ತ್ರಿಡಿ’ ತಂತ್ರಜ್ಞಾನದ ಪ್ರಾತ್ಯಕ್ಷಿಕೆ ಮೂಲಕ ವಿಡಿಯೊ ಮಾಡಿ ಬೋಧಿಸಬಹುದಾದ ಮೊಬೈಲ್‌ ಆ್ಯಪ್‌ ಒಂದರ ಸಹಾಯದಿಂದ ಮಕ್ಕಳಿಗೆ ವಿಷಯಗಳನ್ನು  ತಿಳಿಸುತ್ತಿದ್ದಾರೆ. ವಿಡಿಯೊಗಳನ್ನು, ಪೋಷಕರಿಂದ ಸಂಗ್ರಹಿಸಿದ ಮೊಬೈಲ್‌ ಫೋನ್‌ ನಂಬರ್‌ಗಳಿಗೆ ವಾಟ್ಸ್‌ಆ್ಯಪ್‌ ಮಾಡುತ್ತಿದ್ದಾರೆ. ಸ್ಮಾರ್ಟ್ ಮೊಬೈಲ್ ಫೋನ್‌ ಇಲ್ಲದ ವಿದ್ಯಾರ್ಥಿಗಳು ಸಹಪಾಠಿಗಳ ಬಳಿಗೆ ಬಂದು ವೀಕ್ಷಿಸುತ್ತಿದ್ದಾರೆ. 4, 5 ಹಾಗೂ 6ನೇ ತರಗತಿ ಮಕ್ಕಳಿಗೆ ಮಕ್ಕಳು ಅಥವಾ ಅವರ ಪೋಷಕರ ನಂಬರ್‌ಗಳಿಂದ ವಾಟ್ಸ್‌ಆ್ಯಪ್‌ ಗ್ರೂಪ್‌ ಮಾಡಿದ್ದು ಅವುಗಳಿಗೆ ವಿಡಿಯೊ ಕಳುಹಿಸುತ್ತಿದ್ದಾರೆ. ಶಾಲೆಯ ಫೇಸ್‌ಬುಕ್ ಪುಟದಲ್ಲೂ ಹಂಚಿಕೊಳ್ಳುತ್ತಿದ್ದಾರೆ.

ಆನೆ, ಚಂದ್ರಗ್ರಹಣ, ಸೌರವ್ಯೂಹ, ನಕ್ಷತ್ರಪುಂಜಗಳು ವಿಷಯಗಳಿಗೆ ಸಂಬಂಧಿಸಿದ ವಿಡಿಯೊಗಳನ್ನು ಸಿದ್ಧಪಡಿಸಿ, ಮಕ್ಕಳಿಗೆ ಸೃಜನಶೀಲವಾಗಿ ತಿಳಿಸಿಕೊಡಲು ಯತ್ನಿಸುತ್ತಿದ್ದಾರೆ.‌

ಮಕ್ಕಳ ಮಿದುಳಿಗೆ ಲಾಕ್‌ಡೌನ್‌ ಇಲ್ಲ: ಕೋವಿಡ್ ಲಾಕ್‌ಡೌನ್ ಸಂದರ್ಭದಲ್ಲಿ, ‘ಮಕ್ಕಳ ಮಿದುಳಿಗೆ ಲಾಕ್‌ಡೌನ್‌ ಇಲ್ಲ’ ಕಾರ್ಯಕ್ರಮದ ಮೂಲಕ ವಿದ್ಯಾರ್ಥಿಗಳನ್ನು ಮನೆಯಿಂದಲೇ ಹಲವು  ಚಟುವಟಿಕೆಗಳನ್ನು ಮಾಡಿಸಿದ್ದರು. ಚಿತ್ರಕಲೆ, ವಿಜ್ಞಾನ ಮಾದರಿಗಳ ತಯಾರಿಕೆಯಲ್ಲಿ ಚಿಣ್ಣರು ತೊಡಗಿದ್ದರು.

‘ವಿಜ್ಞಾನ ವಿಷಯಗಳನ್ನು ವಿದ್ಯಾರ್ಥಿಗಳಿಗೆ ಕಲಿಸುವುದು ಕಷ್ಟ. ಕೆಲವರಿಗೆ ಚಿತ್ರಗಳ ಅಥವಾ ಚಾರ್ಟ್‌ಗಳ ಮೂಲಕ ತೋರಿಸಿದರೂ ಸರಿಯಾಗಿ ಅರ್ಥವಾಗುವುದಿಲ್ಲ. ಆದರೆ, ಮೂರು ಆಯಾಮಗಳ ವರ್ಚುವಲ್‌ ರಿಯಾಲಿಟಿ (ವಿ.ಆರ್‌) ವಿಡಿಯೊಗಳನ್ನು ವೀಕ್ಷಿಸಿದರೆ ಪಠ್ಯ ವಿಷಯವನ್ನು ಅವರು ಸುಲಭವಾಗಿ ಅರ್ಥ ಮಾಡಿಕೊಳ್ಳಬಲ್ಲರು. ಅಲ್ಲದೇ ಆಸಕ್ತಿಯಿಂದಲೂ ನೋಡುತ್ತಾರೆ. ಶಾಲೆಗಳಿಗೆ ರಜೆ ಇರುವುದರಿಂದ ಮಕ್ಕಳು ಕಲಿಕೆಯಲ್ಲಿ ಹಿಂದುಳಿಯದಿರಲೆಂದು ಈ ಪ್ರಯೋಗ ಮಾಡುತ್ತಿದ್ದೇನೆ’ ಎಂದು ಸುಂಗಾರಿ ‘ಪ್ರಜಾವಾಣಿ’ಗೆ ತಿಳಿಸಿದರು.

‘ಮಕ್ಕಳಿಂದ ಉತ್ತಮ ಪ್ರತಿಕ್ರಿಯೆ ಬರುತ್ತಿದೆ. ಅವರ ಕಲಿಕೆಗೆ ಪೂರಕವಾದ ಮತ್ತಷ್ಟು ವಿಷಯಗಳನ್ನು ತಿಳಿಸುವ ಉದ್ದೇಶವಿದೆ. ಪ್ರಾಣಿಗಳೊಂದಿಗೇ ಇರುವಂತೆ,  ಸೌರಮಂಡಲದಲ್ಲಿ ನಿಂತಂತೆ ಎನಿಸುವ ವಿಡಿಯೊಗಳನ್ನು ಮಕ್ಕಳು ಕುತೂಹಲದಂದ ವೀಕ್ಷಿಸಿ, ಆ ವಿಷಯಗಳನ್ನು ತಿಳಿದುಕೊಳ್ಳುತ್ತಾರೆ. ಯಾವ ವಿಷಯದ ವಿಡಿಯೊ ಕಳುಹಿಸುತ್ತೀರಿ ಎಂದು ಮಕ್ಕಳು ಗ್ರೂಪಲ್ಲಿ ಕೇಳುತ್ತಿರುತ್ತಾರೆ’ ಎನ್ನುತ್ತಾರೆ ಅವರು.

‘ಶಿಕ್ಷಕರು ಕಳುಹಿಸುವ ವಿಡಿಯೊಗಳು ವಿಷಯ ಅರ್ಥ ಮಾಡಿಕೊಳ್ಳಲು ಸಹಕಾರಿಯಾಗಿವೆ’ ಎಂದು ವಿದ್ಯಾರ್ಥಿ ಮಾರುತಿ ಹೇಳಿದ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು