ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸೋಬಾನೆ ಪದಗಳ ಕಣಜ ಕಾಳವ್ವ

ಜಾನಪದ ಕಲೆ ಉಳಿಸುತ್ತಿರುವ ಗ್ರಾಮೀಣ ಪ್ರತಿಭೆ
Last Updated 4 ಡಿಸೆಂಬರ್ 2021, 8:03 IST
ಅಕ್ಷರ ಗಾತ್ರ

ಮೂಡಲಗಿ (ಬೆಳಗಾವಿ ಜಿಲ್ಲೆ): ‘ಆರುತಿ ಹಿಡಲ್ಯಾಕ ಸೂರ್ಯ ಚಂದ್ರನ ಮಡದಿ ಮಾಡತ್ತಾಳ ಮಗನ ಮದುವೀಯ... ಸೋ ಎನ್ನಿರೇ, ಸೋಬಾನ... ಎನ್ನಿರೆ...’ ಇದು ಮೂಡಲಗಿಯಲ್ಲಿ ಕಾಳವ್ವ ಬಸಯ್ಯ ಮಠಪತಿ ಅಜ್ಜಿಯ ಕಂಚಿನ ಕಂಠದಿಂದ ತೇಲಿ ಬರುವ ಸೋಬಾನೆ ಹಾಡಿನ ಪಲ್ಲವಿ. ಹೀಗೆ ನೂರಾರು ಸೋಬಾನೆ ಪದಗಳಿಗೆ ಧ್ವನಿಯಾಗುವ ಅವರು ಆ ಹಾಡುಗಳ ಕಣಜವೇ ಆಗಿದ್ದಾರೆ.

ಮದುವೆ, ಸೀಮಂತ, ನಿಶ್ಚಿತಾರ್ಥ, ಒಳಕಲ್ಲು ಪೂಜೆ, ಹಂದರಗಂಬದ ಪೂಜೆ, ನಾಮಕರಣ ಹೀಗೆ... ಹಲವು ಸಂಪ್ರದಾಯಿಕ ಕಾರ್ಯಕ್ರಮಗಳಿಗೆ ಸಂಬಂಧಿಸಿದಂತೆ ಸೋಬಾನೆ ಹಾಡುಗಳನ್ನು ಹಾಡಿ ಕಾರ್ಯಕ್ರಮಕ್ಕೆ ಮೆರಗು ತುಂಬುತ್ತಾರೆ. ಎಲ್ಲರ ಗಮನವನ್ನೂ ಸೆಳೆಯುತ್ತಾರೆ. ಹಿಂದಿನ ಸಂಸ್ಕೃತಿಯನ್ನು ಇಂದಿನ ಪೀಳಿಗೆಗೂ ದಾಟಿಸುತ್ತಿದ್ದಾರೆ.

ಮದುವೆಯಲ್ಲಿ ಬೀಗರನ್ನು ಬರಮಾಡಿಕೊಳ್ಳುವುದರಿಂದ ಹಿಡಿದು, ಸುರಗಿ, ಅರಿಸಿನ ಶಾಸ್ತ್ರ, ಮಾಂಗಲ್ಯಧಾರಣೆ ಸೇರಿದಂತೆ ಹಂತ ಹಂತವಾಗಿ ಸರಣಿಯಾಗಿ ಹಾಡುಗಳನ್ನು ಹಾಡುತ್ತಾರೆ. ಅವರ ಸ್ಮರಣಾ ಶಕ್ತಿ ಅಗಾಧವಾದದ್ದು.

ಮದುವೆ ಕಾರ್ಯಕ್ರಮದಲ್ಲಿ ಮದುಮಕ್ಕಳ ಹೆಸರು, ಮದುಮಕ್ಕಳ ತಂದೆ, ತಾಯಿ ಹೆಸರು ಮತ್ತು ಮನೆ ದೇವರು, ಊರು ದೇವರ ಹೆಸರುಗಳನ್ನು ಹಾಡುಗಳಲ್ಲಿ ಸೇರಿಸಿ ಹಾಡುವ ಮೂಲಕ ಮದುವೆ ಮನೆಯವರೆಲ್ಲರ ಮೊಗದಲ್ಲಿ ಖುಷಿ ತುಂಬವ ಗತ್ತುಗಾರಿಕೆ ಅಜ್ಜಿಗಿದೆ.

60 ವರ್ಷಗಳಿಂದ ಹಾಡುಗಳನ್ನು ಹಾಡುತ್ತಿರುವ ಕಾಳವ್ವ ಅಜ್ಜಿಗೆ ಸದ್ಯ 90 ವರ್ಷ ವಯಸ್ಸು. ಸೋಬಾನೆ ಹಾಡುವುದಕ್ಕೆ ದಣಿವು ಎನ್ನುವುದೇ ಇಲ್ಲ ಎನ್ನುತ್ತಾರೆ. ಹತ್ತಾರು ಸೋಬಾನೆ ಪದಗಳನ್ನು ಸ್ವತಃ ಕಟ್ಟಿದ್ದಾರೆ! ಮದುವೆ ಹಂಗಾಮಿನಲ್ಲಿ ಕಾಳವ್ವ ಅಜ್ಜಿಗೆ ಬಿಡುವು ಎನ್ನುವುದೇ ಇರುವುದಿಲ್ಲ. ಎಲ್ಲರ ಮದುವೆ, ಸೀಮಂತಕ್ಕೆ ಅಜ್ಜಿ ಹಾಡುಗಳು ಬೇಕು.

‘ಈಗಿನ ಹುಡಗ್ಯಾರು ನನ್ನ ಜೊತೆ ಹಾಡಾ ಕಲೀಬೇಕು. ಬರೀ ಮೊಬೈಲ್‌ ಫೋನ್‌ ಹಿಡಕೊಂದು ಕೂಡ್ರತಾವ’ ಎಂದು ಹೇಳುವ ಅವರಿಗೆ ಸೋಬಾನ ಹಾಡುಗಳನ್ನು ಹೊಸ ಪೀಳಿಗೆ ಮುಂದುವರಿಸಬೇಕು ಎನ್ನುವ ಕಳಕಳಿ ಅಜ್ಜಿಗೆ ಇದೆ.

ಅವರಿಗೆ ಐವರು ಪುತ್ರರು ಹಾಗೂ ಪುತ್ರಿ ಇದ್ದಾರೆ. ಮಧುಮೇಹ ನ್ಯೂನತೆ ಇಲ್ಲ. ‘ನಮ್ಮವ್ವ ಪತ್ರಿ ಮಾರಿ, ಜೋಳಗಿ ಹಾಕಿ ಕಷ್ಟಪಟ್ಟು ನಮ್ಮನ್ನೆಲ್ಲ ಬೆಳಿಸಿದ್ದಾರೀ’ ಎಂದು ಬೆಂಗಳೂರಿನಲ್ಲಿರುವ ಚಿತ್ರಕಲಾವಿದ ಶಿವಬೋಧ ಮಠಪತಿ ತಾಯಿ ಕಷ್ಟವನ್ನು ನೆನಪಿಸಿಕೊಂಡರು.

‘‌ಮನೆ, ಮನೆಗೆ, ಕಲ್ಯಾಣ ಮಂಟಪಗಳಿಗೆ ಹೋಗಿ ಹಾಡುಗಳನ್ನು ಹೇಳವುದರ ಮೂಲಕ ಜಾನಪದ ಕಲೆಯನ್ನು ಉಳಿಸಿಕೊಂಡು ಬಂದಿದ್ದಾರೆ. ಅಂಥವರನ್ನು ಸಂಸ್ಕೃತಿ ಇಲಾಖೆಯವರು ಗುರುತಿಸಿ ಸರ್ಕಾರದ ಸೌಲಭ್ಯ ಕಲ್ಪಿಸಬೇಕಾಗಿದೆ’ ಎನ್ನುತ್ತಾರೆ ಗ್ರಾಮಸ್ಥರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT