ಮಂಗಳವಾರ, ಮೇ 24, 2022
23 °C

ಬೈಲಹೊಂಗಲ: ಉನ್ನತ ಶಿಕ್ಷಣಕ್ಕೆ ನೆರವಾಗುವ ಶಿಕ್ಷಕ

ರವಿ ಎಂ.ಹುಲಕುಂದ Updated:

ಅಕ್ಷರ ಗಾತ್ರ : | |

Prajavani

ಬೈಲಹೊಂಗಲ: ಯಾವುದೇ ಸಾಧನೆ ಹಿಂದೆ ಪರಿಶ್ರಮ ಅಡಗಿರುತ್ತದೆ. ಒಂದಷ್ಟು ನೋವು ಮೇಲೇರಲು ಮೆಟ್ಟಿಲಾಗಿರುತ್ತದೆ. ಆದ ಅವಮಾನಗಳು ಬದುಕು ಕಟ್ಟಿಕೊಳ್ಳಲು ಅಪರೂಪದ ಅನುಭವಗಳನ್ನು ಧಾರೆ ಎರೆದಿರುತ್ತವೆ. ಇವೆಲ್ಲದರ ಸಹಾಯದಿಂದ ಮೇಲೆ ಬಂದಿರುವ ಪ್ರತಿಭೆ ನಾಗೇಶ್ ಜೆ.ನಾಯಕ. 

ಮೂಲತಃ ಸವದತ್ತಿಯವರಾದ ಅವರು, ಬೈಲಹೊಂಗಲ ತಾಲ್ಲೂಕಿನ ಉಡಿಕೇರಿ ಗ್ರಾಮದ ರಾಮಲಿಂಗೇಶ್ವರ ಪ್ರೌಢಶಾಲೆಯಲ್ಲಿ ಶಿಕ್ಷಕರಾಗಿ ಕಳೆದ 18 ವರ್ಷಗಳಿಂದ ಕಾರ್ಯನಿರ್ವಹಿಸುತ್ತಿದ್ದಾರೆ. ಕಾವ್ಯ, ಗಜಲ್, ಕಥೆ, ಹನಿಗವಿತೆ, ವ್ಯಕ್ತಿಚಿತ್ರಣ, ಅಂಕಣ ಬರಹ, ಬಿಡಿ ಬರಹಗಳನ್ನು ಬರೆಯುತ್ತಾ ಸಾಹಿತ್ಯ ರಚನೆಯನ್ನು ಪ್ರವೃತ್ತಿಯನ್ನಾಗಿಸಿಕೊಂಡಿದ್ದಾರೆ.

10ನೇ ತರಗತಿಯಲ್ಲಿ ಅತಿ ಹೆಚ್ಚು ಅಂಕ ಗಳಿಸುವ ಬಡ ಮತ್ತು ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಪ್ರತಿ ವರ್ಷ ದಾನಿಗಳಿಂದ ಧನಸಹಾಯ ಒದಗಿಸುತ್ತಲೇ ಉನ್ನತ ಶಿಕ್ಷಣಕ್ಕೆ ನೆರವಾಗುತ್ತಿದ್ದಾರೆ. ‘ಬದುಕನ್ನು ಕಟ್ಟಿಕೊಳ್ಳಲು ನಾನು ಅನುಭವಿಸಿದ ಕಷ್ಟಗಳು ಸಾಹಿತ್ಯ ರಚನೆಗೆ ಸ್ಫೂರ್ತಿಯಾಗಿವೆ’ ಎನ್ನುತ್ತಾರೆ ನಾಗೇಶ್. 

‘ಕಷ್ಟಗಳು ನಮಗೆ ಉತ್ತಮ ಅನುಭವಗಳನ್ನು ಕಟ್ಟಿಕೊಡುತ್ತವೆ. ಸಾಧನೆಗೆ ಮೆಟ್ಟಿಲುಗಳಾಗುತ್ತವೆ. ಯಾವತ್ತೂ ದುಃಖದ ಬೆನ್ನು ಕೊಡಬೇಡಿ’ ಎಂದು ಆತ್ಮವಿಶ್ವಾಸದಿಂದ ನುಡಿಯುತ್ತಾರೆ.

ಇದುವರೆಗೆ ಅವರು ಹದಿನೆಂಟು ಕೃತಿಗಳನ್ನು ರಚಿಸಿ ಸಾಹಿತ್ಯ ಲೋಕದಲ್ಲಿ ಹೆಸರು ಮಾಡಿದ್ದಾರೆ. ‘ನೀನೊಂದು ಮುಗಿಯದ ಸಂಭ್ರಮ’ ಕವನಸಂಕಲನ (2009), ‘ಪ್ರೀತಿಯಿಂದ ಪ್ರೀತಿಗೆ’ ಅಂಕಣ ಬರಹ (2010), ‘ಭರವಸೆಗಳ ಬೆನ್ನೇರಿ’ ಕವನಸಂಕಲನ (2012), ‘ಪುಟ್ಟ ಪದ್ಯಗಳು’ ಹನಿಗವನ ಸಂಕಲನ (2013). ‘ಕವಿ ಸಮಯ’ ಅಂಕಣ ಬರಹ (2013), ‘ಮಠದೊಳಗಣ ಬೆಕ್ಕು’ ಕಥಾಸಂಕಲನ (2015) ‘ಒಲವ ತುಂತುರು’ (2020) ಹನಿಗವನ ಸಂಕಲನ, ‘ಗರೀಬನ ಜೋಳಿಗೆ’ (2020) ಗಜಲ್‌ ಸಂಕಲನ, ‘ಹಸಿ ನೆಲದ ಹಾಡು’ (2020) ಗಜಲ್‌ ವಿಮರ್ಶಾ ಸಂಕಲನ ರಚಿಸಿದ್ದಾರೆ.

ನಾಡಿನ ಹೆಸರಾಂತ ಪತ್ರಿಕೆಗಳಲ್ಲಿ ಕವಿತೆ, ಅಂಕಣ, ಕಥೆ, ಬರಹಗಳು ಪ್ರಕಟಿತವಾಗಿವೆ. ತಾಲ್ಲೂಕು, ಜಿಲ್ಲಾಮಟ್ಟದ 6ನೇ ಸಾಹಿತ್ಯ ಸಮ್ಮೇಳನ, 76, 77ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನ, ಮೂಡಬಿದಿರೆಯಲ್ಲಿ ನಡೆದ 9ನೇ ಆಳ್ವಾಸ್ ನುಡಿಸಿರಿ ಸಮ್ಮೇಳನದ ಕವಿ ಸಮಯ, ಮೈಸೂರು, ಬೆಳಗಾವಿಯಲ್ಲಿ ನಡೆದ ಅಖಿಲ ಭಾರತ ದಲಿತ ಸಾಹಿತ್ಯ ಸಮ್ಮೇಳನ, ರನ್ನ ಉತ್ಸವ, ಕಿತ್ತೂರು ಉತ್ಸವ, ಹಂಪಿ ಉತ್ಸವ, ಬೀದರ ಜನಪರ ಉತ್ಸವ ಹೀಗೆ ರಾಜ್ಯದ ವಿವಿಧ ಭಾಗಗಳಲ್ಲಿ ಕವಿತೆ ವಾಚಿಸಿದ್ದಾರೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು