ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪಶ್ಚಿಮ ಘಟ್ಟದ ಕಾಡಿನಲ್ಲಿ ಗಣತಿ ಕಾರ್ಯ: ಅಲ್ಲಲ್ಲಿ ಹುಲಿ ಸಂಚಾರ ಪತ್ತೆ

Last Updated 8 ಫೆಬ್ರುವರಿ 2022, 19:30 IST
ಅಕ್ಷರ ಗಾತ್ರ

ಖಾನಾಪುರ: ಅರಣ್ಯ ಇಲಾಖೆಯಿಂದ ತಾಲ್ಲೂಕಿನ ಕಾನನದಲ್ಲಿ ಇಲಾಖೆ ವಿವಿಧ ಸಂಘ ಸಂಸ್ಥೆಗಳು ಮತ್ತು ಪ್ರಾಣಿಪ್ರಿಯರ ಸಹಭಾಗಿತ್ವದಲ್ಲಿ ಫೆ.4ರಿಂದ ಆರಂಭವಾಗಿರುವ ಹುಲಿ ಗಣತಿ ಬುಧವಾರ (ಫೆ.9) ಮುಕ್ತಾಯಗೊಳ್ಳಲಿದೆ.

ಉತ್ತರ ಕನ್ನಡ ಜಿಲ್ಲೆಯ ದಾಂಡೇಲಿ ಅಭಯಾರಣ್ಯದ ಜೊತೆಗೆ ನೆರೆಯ ಮಹಾರಾಷ್ಟ್ರ ಮತ್ತು ಗೋವಾ ರಾಜ್ಯಗಳ ಜೊತೆ ಗಡಿ ಹಂಚಿಕೊಂಡಿರುವ ತಾಲ್ಲೂಕಿನ 90 ಹೆಕ್ಟೇರ್ ಅರಣ್ಯ ಪ್ರದೇಶದಲ್ಲಿ ಹುಲಿ ಸೇರಿದಂತೆ ಹಲವು ವನ್ಯಜೀವಿಗಳು ಸ್ವಚ್ಛಂದವಾಗಿ ವಿಹರಿಸುತ್ತಿವೆ. ಅರಣ್ಯ ಇಲಾಖೆ ತಾಲ್ಲೂಕಿನ ಅರಣ್ಯ ಪ್ರದೇಶವನ್ನು 6 ಪ್ರಾದೇಶಿಕ ವಲಯಗಳಲ್ಲಿ ವಿಂಗಡಿಸಿದೆ. ಖಾನಾಪುರ, ಕಣಕುಂಬಿ, ಭೀಮಗಡ, ಲೋಂಡಾ ಮತ್ತು ನಾಗರಗಾಳಿ ವಲಯಗಳಲ್ಲಿ ಹುಲಿಗಳ ಚಲನವಲನವಿದ್ದು, ಗೋಲಿಹಳ್ಳಿ ವಲಯದಲ್ಲಿ ಹುಲಿ ಹೊರತುಪಡಿಸಿ ಉಳಿದ ವನ್ಯಜೀವಿಗಳು ಕಂಡುಬಂದಿವೆ.

ಪ್ರಾಥಮಿಕ ಮಾಹಿತಿಯಂತೆ ಭೀಮಗಡ, ನಾಗರಗಾಳಿ ಮತ್ತು ಕಣಕುಂಬಿ ಅರಣ್ಯ ವಲಯಗಳಲ್ಲಿ ಪ್ರತ್ಯೇಕವಾಗಿ ಹುಲಿಗಳು ಕಂಡುಬಂದಿವೆ. ಇವುಗಳು ಆಹಾರ ಅರಸಿ ಖಾನಾಪುರ ಮತ್ತು ಲೋಂಡಾ ಅರಣ್ಯದಲ್ಲಿ ಸಂಚರಿಸುತ್ತವೆ. ಹೀಗಾಗಿ ಮೂರು ವಲಯಗಳಲ್ಲಿ ಹುಲಿಗಳ ಆವಾಸಸ್ಥಾನದ ಕುರುಹುಗಳಿವೆ. ಉಳಿದೆರಡು ವಲಯಗಳಲ್ಲಿ ಹುಲಿಗಳು ಆಗಾಗ ಬಂದುಹೋಗುತ್ತವೆ ಎಂದು ಅಂದಾಜಿಸಲಾಗಿದೆ.

ರಾಷ್ಟ್ರೀಯ ಪ್ರಾಣಿ ಹುಲಿಗಳ ಬಗ್ಗೆ ಅಧ್ಯಯನ ನಡೆಸಿ ಅವುಗಳ ಸಂತತಿ ವೃದ್ಧಿಗೆ ಪೂರಕ ವಾತಾವರಣ ನಿರ್ಮಿಸುವ ನಿಟ್ಟಿನಲ್ಲಿ ಅರಣ್ಯ ಇಲಾಖೆ ಯೋಜಿಸಿದೆ. ಹುಲಿಯು ಸಂವೇದನಶೀಲ ಪ್ರಾಣಿಯಾಗಿದ್ದು, ನಿರ್ಧರಿತ ಸ್ಥಳದಲ್ಲಿ ವಾಸ, ಬೇಟೆ, ಆಹಾರ ಸೇವನೆ, ಸಂತಾನೋತ್ಪತ್ತಿ ನಡೆಸುತ್ತದೆ ಎನ್ನುವುದು ಪರಿಣಿತರು ನೀಡುವ ಮಾಹಿತಿ. ಇದನ್ನು ಹಿನ್ನೆಲೆಯಾಗಿಟ್ಟುಕೊಂಡು ಗಣತಿ ನಡೆಸಲಾಗಿದೆ ಎಂದು ತಿಳಿದುಬಂದಿದೆ.

‘ಇಲಾಖೆಯ ನಿಯಮಗಳ ಪ್ರಕಾರ ಹುಲಿಗಳ ಗಣತಿ ಕಾರ್ಯ ಮೂರು ಹಂತಗಳಲ್ಲಿ ನಡೆಯುತ್ತಿದೆ. ಈಗಾಗಲೇ 2 ಹಂತ ಮುಗಿದಿದೆ. 3ನೇ ಹಂತದ ಗಣತಿ ಶೀಘ್ರದಲ್ಲೇ ಮುಗಿಯಲಿದೆ. ಬಳಿಕ ಎಲ್ಲ ವಲಯಗಳ ಅರಣ್ಯ ಅಧಿಕಾರಿಗಳು ಮತ್ತು ಸಿಬ್ಬಂದಿ ಗಣತಿ ವಿವರಗಳನ್ನು ಕ್ರೋಢೀಕರಿಸಿ ಹಿರಿಯ ಅಧಿಕಾರಿಗಳಿಗೆ ನೀಡಲಾಗುವುದು. ಸದ್ಯಕ್ಕೆ ಗಣತಿ ಪ್ರಕ್ರಿಯೆಯ ಬಗ್ಗೆ ಹೆಚ್ಚಿನ ಮಾಹಿತಿ‌ ನೀಡುವುದು ಸಾಧ್ಯವಿಲ್ಲ’ ಎಂದು ಅಧಿಕಾರಿಯೊಬ್ಬರು ತಿಳಿಸಿದರು.

‘ಅರಣ್ಯ ಇಲಾಖೆಯ ಹಿರಿಯ ಅಧಿಕಾರಿಗಳ ಕೋರಿಕೆ ಮೇರೆಗೆ ಹುಲಿ ಗಣತಿ ಕಾರ್ಯದಲ್ಲಿ ಭಾಗವಹಿಸಿ ಹುಲಿಯ ಚಲನವಲನದ ಬಗ್ಗೆ ಮಾಹಿತಿ ಸಂಗ್ರಹಿಸುವ ಕಾರ್ಯದಲ್ಲಿ ತೊಡಗಿದ್ದೆವು. ಈ ಅವಕಾಶ‌ ದೊರೆತಿದ್ದಕ್ಕೆ ಹೆಮ್ಮೆ ಇದೆ’ ಎಂದು ಇಲ್ಲಿನ ಲಯನ್ಸ್ ಕ್ಲಬ್ ಅಧ್ಯಕ್ಷ ಮಲ್ಲೇಶಪ್ಪ ಬೆನಕಟ್ಟಿ ಪ್ರತಿಕ್ರಿಯಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT