ಭೂತರಾಮನಹಟ್ಟಿ ಉದ್ಯಾನದಲ್ಲಿ ಹುಲಿ ಸಫಾರಿ!

7
₹ 2 ಕೋಟಿ ಅನುದಾನ ತೆಗೆದಿಟ್ಟ ಮಹಾನಗರ ಪಾಲಿಕೆ;

ಭೂತರಾಮನಹಟ್ಟಿ ಉದ್ಯಾನದಲ್ಲಿ ಹುಲಿ ಸಫಾರಿ!

Published:
Updated:

ಬೆಳಗಾವಿ:  ಇಲ್ಲಿಗೆ ಸಮೀಪದ ಭೂತರಾಮನಹಟ್ಟಿಯಲ್ಲಿರುವ ರಾಣಿ ಚನ್ನಮ್ಮ ಉದ್ಯಾನದಲ್ಲಿ ಹುಲಿ ಸಫಾರಿ ಆರಂಭಿಸಲು ಮಹಾನಗರ ಪಾಲಿಕೆ ಹಾಗೂ ಅರಣ್ಯ ಇಲಾಖೆ ಮುಂದಾಗಿವೆ. ಸದ್ಯದಲ್ಲಿಯೇ ಪ್ರಸ್ತಾವನೆ ಸಿದ್ಧಪಡಿಸಿ, ವನ್ಯಜೀವ ಮಂಡಳಿ, ರಾಜ್ಯ ಹಾಗೂ ಕೇಂದ್ರ ಸರ್ಕಾದ ಒಪ್ಪಿಗೆಗೆ ಕಳುಹಿಸಿಕೊಡಲಿವೆ. ಒಪ್ಪಿಗೆ ದೊರೆತರೆ 8–9 ತಿಂಗಳಿನಲ್ಲಿಯೇ ಹುಲಿ ಸಫಾರಿ ಆರಂಭಗೊಳ್ಳುವ ಸಾಧ್ಯತೆ ಇದೆ.

ಭೂತರಾಮನಹಟ್ಟಿ ಉದ್ಯಾನಕ್ಕೆ ಶಶಿಧರ ಕುರೇರ ಅವರ ಜೊತೆಗೆ ಮಹಾನಗರ ಪಾಲಿಕೆಯ ಎಂಜಿನಿಯರ್‌ ಆರ್‌.ಎಸ್‌. ನಾಯಕ, ಡಿಸಿಎಫ್‌ ಎಂ.ವಿ. ಅಮರನಾಥ ಸೇರಿದಂತೆ ಇತರ ಅಧಿಕಾರಿಗಳು ಸೋಮವಾರ ಭೇಟಿ ನೀಡಿ, ವೀಕ್ಷಿಸಿದರು.

ಸುಮಾರು 5,000 ಎಕರೆ ವಿಸ್ತೀರ್ಣವನ್ನು ಈ ಉದ್ಯಾನ ಹೊಂದಿದ್ದು, ಬೆಟ್ಟ ಗುಡ್ಡ ಹಾಗೂ ಕಾಡಿನಿಂದ ಸುತ್ತುವರಿದಿದೆ. ಈಗಾಗಲೇ ಸಣ್ಣ ಪ್ರಮಾಣದಲ್ಲಿ ಪ್ರಾಣಿ ಸಂಗ್ರಹಾಲಯ ಇಲ್ಲಿದೆ. ಮೊಸಳೆ, ಜಿಂಕೆ, ನವಿಲು ಸೇರಿದಂತೆ ವಿವಿಧ ಪ್ರಾಣಿ– ಪಕ್ಷಿಗಳು ಇಲ್ಲಿವೆ. ಇದನ್ನು ಇನ್ನಷ್ಟು ಅಭಿವೃದ್ಧಿಪಡಿಸಿ, ಹುಲಿ, ಜಿಂಕೆ, ಚಿರತೆ ಸೇರಿದಂತೆ ವಿವಿಧ ಪ್ರಾಣಿಗಳನ್ನು ತಂದಿಡುವ ಯೋಚನೆ ಇದೆ.

ಮುಖ್ಯಮಂತ್ರಿಗಳ ನಗರೋತ್ಥಾನ ಯೋಜನೆಯಡಿ ಎರಡು ವರ್ಷಗಳ ಹಿಂದೆ ಬೆಳಗಾವಿ ಮಹಾನಗರ ಪಾಲಿಕೆಗೆ ₹ 100 ಕೋಟಿ ಬಿಡುಗಡೆಯಾಗಿತ್ತು. ಈ ಹಣದಲ್ಲಿ ₹ 2 ಕೋಟಿ ಹಣವನ್ನು ಪ್ರಾಣಿ ಸಂಗ್ರಹಾಲಯದ ಅಭಿವೃದ್ಧಿಗಾಗಿ ಮೀಸಲು ಇಡಲಾಗಿದೆ. ಈ ಹಣದಲ್ಲಿ ಉದ್ಯಾನದ ಸುತ್ತಲೂ 8 ಮೀಟರ್‌ ಎತ್ತರದ ಗೋಡೆ ನಿರ್ಮಿಸುವುದು, ಪ್ರಾಣಿಗಳಿಗೆ ಪಂಜರ ನಿರ್ಮಿಸುವುದು ಸೇರಿದೆ.

‘ಪಾಲಿಕೆಯ ಅನುದಾನದ ಜೊತೆಗೆ ಅರಣ್ಯ ಇಲಾಖೆಯು ಕೂಡ ಹಣ ವೆಚ್ಚ ಮಾಡಲಿದೆ. ಪ್ರಾಣಿಗಳನ್ನು ತರುವುದು, ಅವುಗಳ ನಿರ್ವಹಣೆಯನ್ನು ನೋಡಿಕೊಳ್ಳಲಿದೆ. ನಾವು ಅಂದುಕೊಂಡಂತೆ ಸರ್ಕಾರದಿಂದ ಹಾಗೂ ವನ್ಯಜೀವಿ ಮಂಡಳಿಯಿಂದ ಅನುಮತಿ ದೊರೆತರೆ 8–9 ತಿಂಗಳಿನಲ್ಲಿ ಹುಲಿ ಸಫಾರಿ ಆರಂಭಗೊಳ್ಳಲಿದೆ’ ಎಂದು ಮಹಾನಗರ ಪಾಲಿಕೆ ಆಯುಕ್ತ ಶಶಿಧರ ಕುರೇರ ತಿಳಿಸಿದರು.

 

Tags: 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !