ಬೆಳಗಾವಿ: ಸ್ವಾತಂತ್ರ್ಯೋತ್ಸವದ ಅಂಗವಾಗಿ ಜಿಲ್ಲಾಡಳಿತ, ಮಹಾನಗರ ಪಾಲಿಕೆ ಹಾಗೂ ವಿವಿಧ ಇಲಾಖೆಗಳ ಆಶ್ರಯದಲ್ಲಿ ನಗರದಲ್ಲಿ ಬುಧವಾರ ಸಂಚರಿಸಿದ ‘ಹರ್ ಘರ್ ತಿರಂಗಾ’ ಜಾಥಾ ಗಮನಸೆಳೆಯಿತು. ಇಲ್ಲಿನ ಮಹಾಂತೇಶ ನಗರದ ಕನಕದಾಸ ವೃತ್ತ ಬಳಿಯ ಕೋಟೆ ಕೆರೆಯಿಂದ ಆರಂಭವಾದ ರ್‍ಯಾಲಿ, ಅಶೋಕ ವೃತ್ತ, ಸಂಗೊಳ್ಳಿ ರಾಯಣ್ಣ ವೃತ್ತದ ಮಾರ್ಗವಾಗಿ ಸಂಚರಿಸಿ ರಾಣಿ ಚನ್ನಮ್ಮನ ವೃತ್ತ ತಲುಪಿತು.
ವಿವಿಧ ಶಾಲಾ–ಕಾಲೇಜುಗಳ ವಿದ್ಯಾರ್ಥಿಗಳು, ನೌಕರರು ದೇಶಭಕ್ತಿ ಸಾರುವ ಘೋಷಣೆ ಕೂಗುತ್ತ, ಹಾಡುಗಳನ್ನು ಹಾಡುತ್ತ 3 ಕಿ.ಮೀ ಉತ್ಸಾಹದಿಂದ ಹೆಜ್ಜೆ ಹಾಕಿದರು. 45 ಮೀಟರ್ ಉದ್ದದ ರಾಷ್ಟ್ರಧ್ವಜ ಹಿಡಿದು ಸಾಗಿ ಗಮನಸೆಳೆದರು.
ಮೇಯರ್ ಸವಿತಾ ಕಾಂಬಳೆ, ‘ನಮ್ಮ ದೇಶದ ಬಗ್ಗೆ ಪ್ರತಿಯೊಬ್ಬ ಭಾರತೀಯರಿಗೂ ಹೆಮ್ಮೆ ಇರಬೇಕು. ಯಾವುದೇ ರಾಷ್ಟ್ರೀಯ ಹಬ್ಬವನ್ನು ಸಂತಸದಿಂದ ಆಚರಿಸಬೇಕು. ರಾಷ್ಟ್ರ ಕಟ್ಟುವ ಕೆಲಸಕ್ಕೆ ಎಲ್ಲರೂ ಕೈಜೋಡಿಸಬೇಕು’ ಎಂದು ಕರೆ ನೀಡಿದರು.
ಪಾಲಿಕೆ ಆಯುಕ್ತ ಅಶೋಕ ದುಡಗುಂಟಿ, ‘ದೇಶಪ್ರೇಮ ಜಾಗೃತಗೊಳಿಸುವ ನಿಟ್ಟಿನಲ್ಲಿ ಈ ಜಾಥಾ ಆಯೋಜಿಸಲಾಗಿದೆ. ಇದರಲ್ಲಿ ಸುಮಾರು 1 ಸಾವಿರ ವಿದ್ಯಾರ್ಥಿಗಳು, ಪಾಲಿಕೆ ಸದಸ್ಯರು, ನೌಕರರು ಪಾಲ್ಗೊಂಡಿದ್ದಾರೆ’ ಎಂದರು.
ಉಪಮೇಯರ್ ಆನಂದ ಚವ್ಹಾಣ, ಪಾಲಿಕೆ ಉಪ ಆಯುಕ್ತರಾದ ಉದಯಕುಮಾರ ತಳವಾರ, ರೇಷ್ಮಾ ತಾಳಿಕೋಟಿ, ಲಕ್ಷ್ಮಿ ಸುಳಗೇಕರ, ನಗರ ವಲಯದ ಕ್ಷೇತ್ರ ಶಿಕ್ಷಣಾಧಿಕಾರಿ ಲೀಲಾವತಿ ಹಿರೇಮಠ, ಸ್ಕೇಟಿಂಗ್ ತರಬೇತುದಾರ ಸೂರ್ಯಕಾಂತ ಹಿಂಡಲಗೇಕರ ಇತರರಿದ್ದರು. ವಿವಿಧ ಸಂಘ–ಸಂಸ್ಥೆಯವರು ಜಾಥಾ ಯಶಸ್ಸಿಗೆ ಕೈಜೋಡಿಸಿದರು.
ಬೆಳಗಾವಿಯಲ್ಲಿ ಬುಧವಾರ ಸಂಚರಿಸಿದ ‘ಹರ್ ಘರ್ ತಿರಂಗಾ’ ಜಾಥಾದಲ್ಲಿ ಶಾಲಾ–ಕಾಲೇಜು ವಿದ್ಯಾರ್ಥಿಗಳು ಮತ್ತು ಶಿಕ್ಷಕರು 45 ಮೀಟರ್ ಉದ್ದದ ಧ್ವಜ ಹಿಡಿದು ಸಾಗಿದರು
–ಪ್ರಜಾವಾಣಿ ಚಿತ್ರ