ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಒಂದೇ ದಿನ 14 ಮಂದಿ ಅಂತ್ಯಸಂಸ್ಕಾರ!

ಕೋವಿಡ್‌ನಿಂದ ಮೃತರಾದವರು ಇಬ್ಬರೇ: ಅಧಿಕಾರಿ
Last Updated 30 ಏಪ್ರಿಲ್ 2021, 13:06 IST
ಅಕ್ಷರ ಗಾತ್ರ

ಬೆಳಗಾವಿ: ಇಲ್ಲಿನ ಸದಾಶಿವನಗರ ಸ್ಮಶಾನದಲ್ಲಿ ಶುಕ್ರವಾರ ಒಂದೇ ದಿನ ಏಕಕಾಲದಲ್ಲಿ ಏಳು ಸೇರಿದಂತೆ ಒಟ್ಟು ಬರೋಬ್ಬರಿ 14 ಮೃತದೇಹಗಳ ಅಂತ್ಯಸಂಸ್ಕಾರ ನೆರವೇರಿಸಲಾಗಿದೆ. ‘ಇದರಲ್ಲಿ ಕೋವಿಡ್‌–19ನಿಂದ ಮೃತಪಟ್ಟವರು ಇಬ್ಬರಷ್ಟೆ’ ಎನ್ನುವುದು ಅಧಿಕಾರಿಗಳ ಹೇಳಿಕೆಯಾಗಿದೆ.

ಸ್ಮಶಾನದ ನಿಗದಿತ ಜಾಗ ಸಾಲದೆ ಆವರಣದ ಅಲ್ಲಲ್ಲಿ ಕಟ್ಟಿಗೆಗಳಿಂದ ಚಿತೆಗಳನ್ನು ಸಿದ್ಧಪಡಿಸಿ ಅಲ್ಲಿನ ಸಿಬ್ಬಂದಿ ಅಂತ್ಯಕ್ರಿಯೆ ನೆರವೇರಿಸುತ್ತಿದ್ದುದು ಕಂಡುಬಂತು. ಕೋವಿಡ್ ಹರಡುವಿಕೆ ನಿಯಂತ್ರಿಸುವುದಕ್ಕಾಗಿ ಕರ್ಫ್ಯೂ ಜಾರಿಗೊಳಿಸಿರುವುದರಿಂದ ಕುಟುಂಬದಲ್ಲಿ ಕೆಲವರಿಗೆ ಮಾತ್ರವೇ ಸ್ಮಶಾನ ಪ್ರವೇಶಕ್ಕೆ ಆವಕಾಶ ನೀಡಲಾಗಿತ್ತು. ಅವರ ಆಕ್ರಂದನ ಮುಗಿಲು ಮುಟ್ಟಿತು. ಕೋವಿಡ್‌ನಿಂದ ಹಾಗೂ ಶಂಕಿತ ಕೋವಿಡ್‌ನಿಂದ ಮೃತರಾದವರನ್ನು ಸಿಬ್ಬಂದಿಯು ಪಿಪಿಇ ಕಿಟ್‌ ಧರಿಸಿ ಸರ್ಕಾರದ ಮಾರ್ಗಸೂಚಿ ಪ್ರಕಾರ ಅಂತ್ಯಕ್ರಿಯೆ ನೆರವೇರಿಸುತ್ತಿದ್ದ ದೃಶ್ಯ ಕಂಡುಬಂತು.

‘ಕೋವಿಡ್ ಪರೀಕ್ಷೆ ಮಾಡಿಸದೆ ಕೆಲವರು ಖಾಸಗಿ ಆಸ್ಪತ್ರೆಗಳಿಗೆ ದಾಖಲಾಗುತ್ತಿದ್ದಾರೆ. ಅಲ್ಲಿ ಚಿಕಿತ್ಸೆಗೆ ಸ್ಪಂದಿಸದೆ ಮೃತರಾದವರನ್ನು ಕೋವಿಡ್ ಶಂಕಿತರು ಎಂದು ಪರಿಗಣಿಸಲಾಗುತ್ತದೆ’ ಎಂದು ಅಧಿಕಾರಿಯೊಬ್ಬರು ತಿಳಿಸಿದರು.

ದೊಡ್ಡ ಪ್ರಮಾಣದಲ್ಲಿ ಅಂತ್ಯಸಂಸ್ಕಾರ ನಡೆದಿರುವುದು ಆತಂಕಕ್ಕೆ ಮತ್ತು ಹಲವು ಅನುಮಾನಗಳಿಗೆ ಕಾರಣವಾಗಿದೆ.

ಈ ಬಗ್ಗೆ ಪ್ರತಿಕ್ರಿಯಿಸಿದ ಮಹಾನಗರಪಾಲಿಕೆ ಆರೋಗ್ಯಾಧಿಕಾರಿ, ‘ಸದಾಶಿವನಗರ ಸ್ಮಶಾನದಲ್ಲಿ ಒಂದೇ ದಿನ 14 ಮೃತದೇಹಗಳ ಅಂತ್ಯಸಂಸ್ಕಾರ ನಡೆದಿರುವುದು ನಿಜ. ಆದರೆ, ಇವರಲ್ಲಿ ಇಬ್ಬರಷ್ಟೆ ಕೋವಿಡ್‌ನಿಂದ ಸಾವಿಗೀಡಾದವರು. ವಯೋಸಹಜವಾಗಿ, ಇತರ ಆರೋಗ್ಯ ತೊಂದರೆಯಿಂದ ನಿಧನರಾದವರೂ ಇದರಲ್ಲಿದ್ದಾರೆ. ಖಾಸಗಿ ಆಸ್ಪತ್ರೆಗಳಲ್ಲಿ ನಿಧನರಾದ ಕೋವಿಡ್ ಶಂಕಿತರು ಕೂಡ ಇದ್ದಾರೆ. ಕೋವಿಡ್ ಹರಡದಂತೆ ನೋಡಿಕೊಳ್ಳುವ ಉದ್ದೇಶದಿಂದ ಇಲ್ಲಿ ಕೋವಿಡ್ ಮಾರ್ಗಸೂಚಿ ಪ್ರಕಾರ ಅಂತ್ಯಕ್ರಿಯೆ ನಡೆಸಲಾಗಿದೆ. ಇವರಲ್ಲಿ ಜಿಲ್ಲೆಯ ವಿವಿಧೆಡೆಯ ಹಾಗೂ ನೆರೆಯ ಮಹಾರಾಷ್ಟ್ರದವರೂ ಇದ್ದಾರೆ’ ಎಂದು ತಿಳಿಸಿದರು.

‘ಇತ್ತೀಚೆಗೆ, ಸದಾಶಿವನಗರ ಸ್ಮಶಾನದಲ್ಲಿ ಸರಾಸರಿ 10 ಮೃತದೇಹಗಳ ಅಂತ್ಯಸಂಸ್ಕಾರ ನಡೆಯುತ್ತಿದೆ. ಎಲ್ಲದಕ್ಕೂ ಕೋವಿಡ್ ಕಾರಣವಲ್ಲ’ ಎಂದು ಸ್ಪಷ್ಟಪಡಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT