ಗುರುವಾರ , ಡಿಸೆಂಬರ್ 5, 2019
20 °C
ಮತ ಎಣಿಕೆ ಸಿಬ್ಬಂದಿಗೆ ತರಬೇತಿ ಕಾರ್ಯಕ್ರಮ

ನಿಷ್ಪಕ್ಷಪಾತವಾಗಿ ಕೆಲಸ ನಿರ್ವಹಿಸಲು ಸೂಚನೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಬೆಳಗಾವಿ: ‘ಡಿ. 9ರಂದು ನಡೆಯಲಿರುವ ಮತ ಎಣಿಕೆಗೆ ನಿಯೋಜಿಸಲಾಗಿರುವ ಅಧಿಕಾರಿಗಳು ಮತ್ತು ಸಿಬ್ಬಂದಿ ನಿಷ್ಪಕ್ಷಪಾತವಾಗಿ ಕಾರ್ಯನಿರ್ವಹಬೇಕು. ಎಲ್ಲ ಪಕ್ಷದ ಏಜೆಂಟರ ವಿಶ್ವಾಸವನ್ನು ಗಳಿಸಿ ಪ್ರಕ್ರಿಯೆಯನ್ನು ಸುಗಮವಾಗಿ ಪೂರ್ಣಗೊಳಿಸಬೇಕು’ ಎಂದು ಗೋಕಾಕ ಮತ ಕ್ಷೇತ್ರದ ಸಾಮಾನ್ಯ ವೀಕ್ಷಕಿ ಪಿ.ಎ. ಶೋಭಾ ಸೂಚಿಸಿದರು.

ಮತ ಎಣಿಕೆ ಸಿಬ್ಬಂದಿಗೆ ಇಲ್ಲಿನ ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿ ಭಾನುವಾರ ಆಯೋಜಿಸಿದ್ದ ತರಬೇತಿ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

‘ಅಧಿಕಾರಿಗಳು ಮತ್ತು ಸಿಬ್ಬಂದಿ ಸರಿಯಾದ ಸಮಯಕ್ಕೆ ಹಾಜರಿರಬೇಕು. ಮತ ಎಣಿಕೆಗೆ ನಿಯೋಜಿಸಿದ ಸಿಬ್ಬಂದಿ ಯಾವುದೇ ಕಾರಣಕ್ಕೂ ಮೊಬೈಲ್ ತರಬಾರದು. ಎಲ್ಲರಿಗೂ ಫಲಿತಾಂಶದ ಬಗ್ಗೆ ಕುತೂಹಲ ಇರುವುದರಿಂದ ಅಭ್ಯರ್ಥಿಗಳ ಏಜೆಂಟರಿಗೆ ಪ್ರತಿ ಸುತ್ತಿನ ಮತ ಎಣಿಕೆ ಬಗ್ಗೆ ಖಾತ್ರಿಪಡಿಸಬೇಕು. ಚುನಾವಣೆಯನ್ನು ನಿಷ್ಪಕ್ಷಪಾತವಾಗಿ ಹಾಗೂ ಪಾರದರ್ಶಕತೆಯಿಂದ ನಡೆಸಲು ಜಿಲ್ಲಾ ಚುನಾವಣಾಧಿಕಾರಿ ಎಲ್ಲ ರೀತಿಯ ಕ್ರಮ ಕೈಗೊಂಡಿದ್ದಾರೆ. ಅವರಿಗೆ ಸಹಕರಿಸಬೇಕು’ ಎಂದರು.

ಕಾಗವಾಡ ಮತಕ್ಷೇತ್ರದ ಸಾಮಾನ್ಯ ವೀಕ್ಷಕ ಕೃಷ್ಣಕುಮಾರ್ ನಿರಾಳ, ‘ಮತ ಎಣಿಕೆ ಸಂದರ್ಭದಲ್ಲಿ ಏಜೆಂಟರು ಪ್ರಸ್ತಾಪಿಸುವ ಸಂದೇಹಗಳನ್ನು ತಾಳ್ಮೆಯಿಂದ ಪರಿಶೀಲಿಸಿ ಬಗೆಹರಿಸಬೇಕು. ಪ್ರತಿ ಸುತ್ತಿನ ಮತ ಎಣಿಕೆ ಬಳಿಕ ಕಳಿಸಲಾಗುವ ಮಾಹಿತಿಯನ್ನು ಚುನಾವಣಾಧಿಕಾರಿಗಳು ಪರಿಶೀಲಿಸಬೇಕು. ದೋಷ ಕಂಡುಬಂದರೆ ಸರಿಪಡಿಸಬಹುದು’ ಎಂದು ತಿಳಿಸಿದರು.

ಅಥಣಿ ಮತ ಕ್ಷೇತ್ರದ ಸಾಮಾನ್ಯ ವೀಕ್ಷಕಿ ಸಿರಿ ಅತ್ತಾಡ ಮಾತನಾಡಿದರು.

‘ಎಲ್ಲರೂ ದಕ್ಷತೆ ಮತ್ತು ಸ್ಥಿತಪ್ರಜ್ಞರಾಗಿ ಕಾರ್ಯನಿರ್ವಹಿಸಬೇಕು’ ಎಂದು ಜಿಲ್ಲಾ ಚುನಾವಣಾಧಿಕಾರಿ ಡಾ.ಎಸ್.ಬಿ. ಬೊಮ್ಮನಹಳ್ಳಿ ತಿಳಿಸಿದರು.

‘ಪ್ರಜಾಪ್ರಭುತ್ವದಲ್ಲಿ ಚುನಾವಣೆಗೆ ಪ್ರಾಮುಖ್ಯತೆ ಇದೆ. ಇದನ್ನು ಮುಂದುವರಿಸಿಕೊಂಡು ಹೊಣೆಗಾರಿಕೆ ನಮ್ಮ ಮೇಲಿದೆ. ಸಿಬ್ಬಂದಿಗೆ ಅಗತ್ಯವಿರುವ ಎಲ್ಲ ಸೌಲಭ್ಯಗಳನ್ನು ಒದಗಿಸಲಾಗುವುದು. ಯಾವುದೇ ಲೋಪದೋಷಗಳಿಗೆ ಆಸ್ಪದವಿಲ್ಲದಂತೆ ನೋಡಿಕೊಳ್ಳಬೇಕು. ಎಣಿಕೆಯ ಪ್ರತಿ ದೃಶ್ಯವನ್ನೂ ಸಿಸಿಟಿವಿ ಮತ್ತು ವೆಬ್ ಕ್ಯಾಮೆರಾ ಮೂಲಕ ಆಯೋಗದವರು ಹಾಗೂ ಸಾಮಾನ್ಯ ವೀಕ್ಷಕರು ಗಮನಿಸುತ್ತಿರುತ್ತಾರೆ’ ಎಂದರು.

ರಾಷ್ಟ್ರಮಟ್ಟದ ಮಾಸ್ಟರ್ ಟ್ರೇನರ್ ಎಸ್.ಎಲ್. ಶಿರಗಾಂವಕರ ತರಬೇತಿ ನೀಡಿದರು.

ನಗರ ಪೊಲೀಸ್ ಆಯುಕ್ತ ಬಿ.ಎಸ್. ಲೋಕೇಶ್ ಕುಮಾರ್, ಗೋಕಾಕ ಕ್ಷೇತ್ರದ ಚುನಾವಣಾಧಿಕಾರಿ ಟಿ. ಭೂಬಾಲನ್, ಕಾಗವಾಡದ ಗೋಪಾಲಕೃಷ್ಣ ಸಣ್ಣತಂಗಿ, ಅಥಣಿ ಕ್ಷೇತ್ರದ ಜಿಲಾನಿ ಮೊಕಾಶಿ, ಹೆಚ್ಚುವರಿ ಜಿಲ್ಲಾಧಿಕಾರಿ ಸತೀಶ್‌ಕುಮಾರ್ ಇದ್ದರು.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು