ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಲವಲವಿಕೆಯಿಂದ ಬೋಧಿಸಿ: ಉಪನ್ಯಾಸಕರಿಗೆ ಸಲಹೆ

ಪಿಯುಸಿ ಉಪನ್ಯಾಸಕರಿಗೆ ತರಬೇತಿ ಕಾರ್ಯಾಗಾರ
Last Updated 17 ಸೆಪ್ಟೆಂಬರ್ 2019, 14:29 IST
ಅಕ್ಷರ ಗಾತ್ರ

ಬೆಳಗಾವಿ: ‘ವಿದ್ಯಾರ್ಥಿಗಳ ಗುಣಮಟ್ಟದ ಶಿಕ್ಷಣ ನೀಡುವ ನಿಟ್ಟಿನಲ್ಲಿ ಉಪನ್ಯಾಸಕರು ಮಮಕಾರ ಮತ್ತು ಸೃಜನಶೀಲವಾಗಿ ಬೋಧಿಸಬೇಕು’ ಎಂದು ಡಿಡಿಪಿಯು ರಾಜಶೇಖರ ಪಟ್ಟಣಶೆಟ್ಟಿ ತಿಳಿಸಿದರು.

ಪದವಿ ಪೂರ್ವ ಶಿಕ್ಷಣ ಇಲಾಖೆ, ಡಿಡಿಪಿಯು ಕಾರ್ಯಾಲಯ ಮತ್ತು ಜೈನ ವಾಣಿಜ್ಯ ಮತ್ತು ವಿಜ್ಞಾನ ಪಿಯು ಕಾಲೇಜು ಸಹಯೋಗದಲ್ಲಿ ಮಂಗಳವಾರದಿಂದ 10 ದಿನಗಳವರೆಗೆ ಸರ್ಕಾರಿ ಪಿಯು ಕಾಲೇಜುಗಳ ಉಪನ್ಯಾಸಕರಿಗೆ ಹಮ್ಮಿಕೊಂಡಿರುವ ತಾಂತ್ರಿಕ ತರಬೇತಿ ಕಾರ್ಯಾಗಾರವನ್ನು ಉದ್ಘಾಟಿಸಿ ಅವರು ಮಾತನಾಡಿದರು.

‘ಕಲಿಕೆ ಮತ್ತು ಕಲಿಸುವಿಕೆಯ ಗುಣಾತ್ಮಕ ಮಾನಸಿಕ ಸಿದ್ಧತೆಯೊಂದಿಗೆ ತರಗತಿ ಕೊಠಡಿ ಪ್ರವೇಶಿಸಬೇಕು. ಪೂರ್ವ ಸಿದ್ಧತೆಯೊಂದಿಗೆ ಆತ್ಮೀಯ ಸ್ವಭಾವದಿಂದ ಬೋಧಿಸುವುದನ್ನು ರೂಢಿಸಿಕೊಂಡರೆ ವಿದ್ಯಾರ್ಥಿಗಳು ಕಲಿಕೆಯಲ್ಲಿ ವಿಶೇಷ ಆಸಕ್ತಿ ತೋರಿಸುತ್ತಾರೆ. ಇದಕ್ಕಾಗಿ ವೈಯಕ್ತಿಕ ಶಿಸ್ತು, ಸಮಯಪಾಲನೆಯ ಗುಣಗಳನ್ನು ಪಾಲಿಸಬೇಕು. ಸರ್ಕಾರಿ ಕಾಲೇಜುಗಳಿಗೆ ಸಾಮಾನ್ಯ ವಿದ್ಯಾರ್ಥಿಗಳು ಬರುತ್ತಾರೆ. ಹೀಗಾಗಿ, ಅವರ ಮಾನಸಿಕ ಸ್ಥಿತಿ ಗಮನದಲ್ಲಿರಿಸಿಕೊಂಡು ಕಠಿಣ ವಿಷಯಗಳನ್ನು ಅತ್ಯಂತ ಸರಳವಾಗಿ ತಿಳಿಸಿಕೊಡಬೇಕು. ಲವಲವಿಕೆಯಿಂದ ಪಾಠ ಮಾಡಬೇಕು’ ಎಂದು ಸಲಹೆ ನೀಡಿದರು.

ತರಬೇತಿ ಸಂಯೋಜಕ ಮತ್ತು ಸರಸ್ವತಿ ಕಾಲೇಜಿನ ಪ್ರಾಚಾರ್ಯ ಬಿ.ವೈ. ಹನ್ನೂರ, ‘ಪರಿಣಾಮಕಾರಿ ಬೋಧನೆಗೆ ಆಧುನಿಕ ತಾಂತ್ರಿಕತೆಯ ವಿವಿಧ ಆವಿಷ್ಕಾರಗಳನ್ನು ಸಂದರ್ಭನುಸಾರ ಬಳಸಿಕೊಳ್ಳಬೇಕು’ ಎಂದು ತಿಳಿಸಿದರು.

ಅಧ್ಯಕ್ಷತೆ ವಹಿಸಿದ್ದ ಜೈನ ಪಿಯು ಕಾಲೇಜಿನ ಪ್ರಾಚಾರ್ಯರಾದ ಕೆ.ಬಿ. ರೋಹಿಣಿ, ‘ಗುಣಮಟ್ಟದ ಶಿಕ್ಷಣ ನೀಡುವಲ್ಲಿ ತಾಂತ್ರಿಕತೆಯ ಅಳವಡಿಕೆ ಪ್ರಮುಖ ಪಾತ್ರ ವಹಿಸುತ್ತಿದೆ. ಅದರತ್ತ ಹೆಚ್ಚು ಗಮನಹರಿಸುವ ಅಗತ್ಯವಿದೆ’ ಎಂದು ಅಭಿಪ್ರಾಯಪಟ್ಟರು.

ಉಪನ್ಯಾಸಕರಾದ ಆರ್.ಪಿ. ಕಾಂಬಳೆ ಮತ್ತು ವಿನೋದ ಜಾಧವ ಸಂಪನ್ಮೂಲ ವ್ಯಕ್ತಿಗಳಾಗಿ ಪಾಲ್ಗೊಂಡಿದ್ದರು.

ಸಂಪನ್ಮೂಲ ವ್ಯಕ್ತಿ ಆರ್.ಎಸ್. ನಂದಗಾಂವ ಸ್ವಾಗತಿಸಿದರು. ಉಪನ್ಯಾಸಕ ಕೆ.ಎನ್. ದೊಡ್ಡಮನಿ ನಿರೂಪಿಸಿದರು. ಬೈಲಹೊಂಗಲದ ಉಪನ್ಯಾಸಕ ಬಿ.ಎಂ. ಕೊಳವಿ ವಂದಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT