ಗುರುವಾರ , ಏಪ್ರಿಲ್ 15, 2021
31 °C
ರಸ್ತೆಗಿಳಿಯದ ಸರ್ಕಾರಿ ಬಸ್‌ಗಳು; ಸಾಲಲಿಲ್ಲ ಪರ್ಯಾಯ ವ್ಯವಸ್ಥೆ

ಸಾರಿಗೆ ನೌಕರರ ಮುಷ್ಕರ: ಪ್ರಯಾಣಿಕರ ಪರದಾಟ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಬೆಳಗಾವಿ: ಆರನೇ ವೇತನ ಆಯೋಗದ ಶಿಫಾರಸು ಅನ್ವಯಗೊಳಿಸುವಂತೆ ಆಗ್ರಹಿಸಿ ಸಾರಿಗೆ ನೌಕರು ಮುಷ್ಕರ ಆರಂಭಿಸಿರುವುದರಿಂದಾಗಿ, ನಗರವೂ ಸೇರಿದಂತೆ ಜಿಲ್ಲೆಯಾದ್ಯಂತ ಮಂಗಳವಾರ ಬಸ್‌ಗಳು ರಸ್ತೆಗೆ ಇಳಿಯಲಿಲ್ಲ. ಇದರಿಂದ ಪ್ರಯಾಣಿಕರು ಪರದಾಡಬೇಕಾಯಿತು.

ಇಲ್ಲಿನ ಕೇಂದ್ರ ಬಸ್‌ ನಿಲ್ದಾಣದ 200 ಮೀಟರ್ ಪ್ರದೇಶದಲ್ಲಿ ನಿಷೇಧಾಜ್ಞೆ ಜಾರಿಗೊಳಿಸಿದ್ದರಿಂದ ನೌಕರರು ಅಥವಾ ಸಿಬ್ಬಂದಿ ಪ್ರತಿಭಟನೆ ಅಥವಾ ಧರಣಿ ನಡೆಸಲಿಲ್ಲ. ಕೆಲಸದಿಂದ ದೂರ ಉಳಿದು ತಮ್ಮ ಪ್ರತಿಭಟನೆ ದಾಖಲಿಸಿದರು. ಪ್ರಯಾಣಿಕರಿಗೆ ಅನುಕೂಲ ಕಲ್ಪಿಸಲು ಜಿಲ್ಲಾಡಳಿತ ಪರ್ಯಾಯ ವ್ಯವಸ್ಥೆ  ಮಾಡಿತು. ಎನ್‌ಡಬ್ಲ್ಯುಕೆಆರ್‌ಟಿಸಿ ಬಸ್ ನಿಲ್ದಾಣಕ್ಕೆ ಬರಲು ಖಾಸಗಿ ಬಸ್‌ಗಳಿಗೆ ಅವಕಾಶ ನೀಡಲಾಗಿತ್ತು.

ಕೆಲವು ಮಾರ್ಗಗಳಲ್ಲಿ ಖಾಸಗಿ ಬಸ್‌ಗಳನ್ನು ಓಡಿಸಲಾಯಿತು. ಆದರೆ, ಹಳ್ಳಿ ಹಳ್ಳಿಗಳಿಗೂ ಸಂಪರ್ಕ ಕಲ್ಪಿಸುವ ಸರ್ಕಾರಿ ಸಾರಿಗೆ ಇಲ್ಲದೆ ಜನರು ತೊಂದರೆ ಅನುಭವಿಸಿದರು. ವಿಶೇಷವಾಗಿ ಶಾಲಾ– ಕಾಲೇಜುಗಳಿಗೆ ಬರುವುದಕ್ಕಾಗಿ ಸರ್ಕಾರಿ ಬಸ್‌ಗಳನ್ನೇ ಅವಲಂಬಿಸಿದ್ದ ವಿದ್ಯಾರ್ಥಿಗಳು, ಶಿಕ್ಷಕರು ಹಾಗೂ ಬೋಧಕೇತರ ಸಿಬ್ಬಂದಿ ಪರ್ಯಾಯ ವ್ಯವಸ್ಥೆಗೆ ಪರದಾಡಿದರು.

ಜಿಲ್ಲೆಯಲ್ಲಿ ಬೆಳಗಾವಿ ಮತ್ತು ಚಿಕ್ಕೋಡಿ ವಿಭಾಗಗಳಿದ್ದು, 13 ಡಿಪೊಗಳಿವೆ. ಅಲ್ಲಿಂದ ಬೆರಳೆಣಿಕೆಯ ಬಸ್‌ಗಳಷ್ಟೆ ನಿಲ್ದಾಣಕ್ಕೆ ಬಂದಿದ್ದವು. ಬೆಳಗಾವಿ ವಿಭಾಗವೊಂದರಲ್ಲೇ 640 ಬಸ್‌ಗಳು ಕಾರ್ಯಾಚರಿಸಬೇಕಿತ್ತು. ಇವುಗಳಲ್ಲಿ ಕೊಲ್ಹಾಪುರ, ಚಿಕ್ಕೋಡಿ, ಹುಬ್ಬಳ್ಳಿ ಕಡೆಗೆ ಐದು ಬಸ್‌ಗಳಷ್ಟೆ ಸಂಚರಿಸಿದವು. ಕೆಲವು ಮಾರ್ಗಗಳಲ್ಲಿ ಕೆಲವು ಖಾಸಗಿ ಬಸ್‌ಗಳು ಸಂಚರಿಸಿವೆ’ ಎಂದು ಎನ್‌ಡಬ್ಯ್ಲ್ಯುಕೆಆರ್‌ಟಿಸಿ ವಿಭಾಗೀಯ ನಿಯಂತ್ರಣಾಧಿಕಾರಿ ಮಹಾದೇವಪ್ಪ ಮುಂಜಿ ‘ಪ್ರಜಾವಾಣಿ’ಗೆ ತಿಳಿಸಿದರು.

‘ನಮ್ಮ ಸಿಬ್ಬಂದಿಯನ್ನು ಚಾಲಕರು ಹಾಗೂ ನಿರ್ವಾಹಕರ ಮನೆಗಳಿಗೂ ಕಳುಹಿಸಿ, ಮನವೊಲಿಸಲು ಯತ್ನಿಸಿದೆವು. ಆದರೆ, ಅವರು ಮನೆಗಳಲ್ಲಿ ಸಿಗಲಿಲ್ಲ. ಕೆಲಸಕ್ಕೆ ಹಾಜರಾಗದೆ ದೂರ ಉಳಿದಿದ್ದಾರೆ. ಸರ್ಕಾರದಿಂದ ಯಾವ ನಿರ್ದೇಶನ ಬರುತ್ತದೆಯೋ ಅದರಂತೆ ಮುಂದಿನ ಕ್ರಮ ಕೈಗೊಳ್ಳಲಾಗುವುದು’ ಎಂದು ಹೇಳಿದರು.

ಅಧಿಕಾರಿಗಳ ಸೂಚನೆ ಮೇರೆಗೆ ಕೆಲಸಕ್ಕೆ ಹಾಜರಾದ ಚಾಲಕರೊಬ್ಬರು ಹೆಲ್ಮೆಟ್ ಧರಿಸಿ ಬಸ್‌ ಓಡಿಸಿದ್ದು ಗಮನಸೆಳೆಯಿತು. ಅವರು ಸಮವಸ್ತ್ರ ಧರಿಸಿರಲಿಲ್ಲ. ಹೀಗಾಗಿ, ಅವರು ಸಾರಿಗೆ ನೌಕರರೋ ಅಲ್ಲವೋ ಎನ್ನುವ ಗೊಂದಲವೂ ಮೂಡಿತು.

ಮಾರ್ಕೆಟ್ ಠಾಣೆ ಇನ್‌ಸ್ಪೆಕ್ಟರ್‌ ಸಂಗಮೇಶ ಶಿವಯೋಗಿ ನೇತೃತ್ವದಲ್ಲಿ ಪೊಲೀಸರು ಭದ್ರತೆ ಒದಗಿಸಿದರು. ಸಂಚರಿಸಿದ ಕೆಲವೇ ಬಸ್‌ಗಳಿಗೆ ಕೇಂದ್ರ ಬಸ್ ನಿಲ್ದಾಣದಿಂದ ಪುಣೆ-ಬೆಂಗಳೂರು ರಾಷ್ಟ್ರೀಯ ಹೆದ್ದಾರಿವರೆಗೆ ಪೊಲೀಸ್ ಭದ್ರತೆ ನೀಡಲಾಯಿತು.

ನೌಕರರ ಮುಷ್ಕರ ಹಿನ್ನೆಲೆಯಲ್ಲಿ, ಕೆಲವು ಆಟೊರಿಕ್ಷಾ ಚಾಲಕರು ದುಪ್ಪಟ್ಟು ಬಾಡಿಗೆ ಪಡೆಯುತ್ತಿದ್ದ ದೃಶ್ಯ ಕಂಡುಬಂತು. ಹಚ್ಚಿನ ಹಣ ಕೇಳಿದ ಆಟೊರಿಕ್ಷಾ ಚಾಲಕರೊಬ್ಬರೊಂದಿಗೆ ಮಹಿಳೆಯೊಬ್ಬರು ವಾಗ್ವಾದ ನಡೆಸಿದರು. ಪೊಲೀಸರು ಇಬ್ಬರನ್ನೂ ಸಮಾಧಾನಪಡಿಸಿದರು.

ರಾಣಿ ಚನ್ನಮ್ಮ ವಿಶ್ವವಿದ್ಯಾಲಯದ ಪರೀಕ್ಷೆಗಳನ್ನು ಮುಂದೂಡಲಾಗಿತ್ತು.

ಮುಂಜಾಗ್ರತಾ ಕ್ರಮವಾಗಿ ನಿಲ್ದಾಣಗಳ ಬಳಿ ಪೊಲೀಸರನ್ನು ನಿಯೋಜಿಸಲಾಗಿತ್ತು.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು