ಮಂಗಳವಾರ, ಆಗಸ್ಟ್ 9, 2022
23 °C

ಕನ್ಹಯ್ಯ ಲಾಲ್‌ ಹತ್ಯೆ ಖಂಡಿಸಿ ಮಾನವ ಸರಪಳಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಳಗಾವಿ: ರಾಜಸ್ಥಾನದ ಉದಯಪುರದಲ್ಲಿ ಕನ್ಹಯ್ಯ ಲಾಲ್ ಹತ್ಯೆ ಮಾಡಿರುವುದನ್ನು ಖಂಡಿಸಿ ಶ್ರೀರಾಮಸೇನೆ, ಭಜರಂಗ ದಳ ಹಾಗೂ ಬಿಜೆಪಿ ಗ್ರಾಮೀಣ ಜಿಲ್ಲಾ ಘಟಕದ ಕಾರ್ಯಕರ್ತರು ನಗರದಲ್ಲಿ ಗುರುವಾರ  ಪ್ರತಿಭಟನೆ ನಡೆಸಿದರು.

ಇಲ್ಲಿನ ರಾಣಿ ಚನ್ನಮ್ಮ ವೃತ್ತದಲ್ಲಿ ಮಾನವ ಸರಪಳಿ ನಿರ್ಮಿಸಿದ ಕಾರ್ಯಕರ್ತರು, ಹಂತಕರ ಪ್ರತಿಕೃತಿ ದಹಿಸಿ ಆಕ್ರೋಶ ವ್ಯಕ್ತಪಡಿಸಿದರು. ಕನ್ಹಯ್ಯ ಲಾಲ್ ಹಂತಕರಿಗೆ ಗಲ್ಲು ಶಿಕ್ಷೆ ವಿಧಿಸಬೇಕು ಎಂದು ಒತ್ತಾಯಿಸಿದರು.

ಬಿಜೆಪಿ ಗ್ರಾಮೀಣ ಜಿಲ್ಲಾ ಘಟಕದ ಅಧ್ಯಕ್ಷ ಸಂಜಯ ಪಾಟೀಲ, ‘ಕನ್ಹಯ್ಯ ಲಾಲ್ ಹತ್ಯೆ ಮಾನವತೆಗೆ ಮಾಡಿದ ದೊಡ್ಡ ಅಪಮಾನ. ಅಂಗಡಿಗೆ ನುಗ್ಗಿ ಟೈಲರ್ ಹತ್ಯೆಗೈದಿರುವುದು ಖಂಡನೀಯ. ಇದೇ ರೀತಿ ಪ್ರಧಾನಿ ಹತ್ಯೆಗೈಯುವುದಾಗಿಯೂ ಹಂತಕ ಹೇಳಿದ್ದಾನೆ. ಒಬ್ಬ ಮನುಷ್ಯನನ್ನು ಹತ್ಯೆಗೈಯುವಂತೆ ಯಾವ ಧರ್ಮವೂ ಹೇಳಿಲ್ಲ. ಈ ಹಂತಕ ಹಿಂದೂನೂ ಅಲ್ಲ, ಮುಸ್ಲಿಮನೂ ಅಲ್ಲ. ಆತನೊಬ್ಬ ಜಿಹಾದಿ. ಆತನಿಗೆ ಕಠಿಣ ಶಿಕ್ಷೆಯಾಗಬೇಕು’ ಎಂದು ಒತ್ತಾಯಿಸಿದರು.

‘ನೂಪುರ್‌ ಶರ್ಮಾ ಹೇಳಿಕೆ ನೀಡಿದ ನಂತರ ಕರ್ನಾಟಕದಲ್ಲಿ ಹಲವರು ರಸ್ತೆಗಿಳಿದು ಪ್ರತಿಭಟಿಸಿದರು. ಆದರೆ, ಹಿಂದೂ ವ್ಯಕ್ತಿಯ ಹತ್ಯೆ ಬಗ್ಗೆ ತುಟಿ ಬಿಚ್ಚುತ್ತಿಲ್ಲ. ನಮ್ಮ ದೇಶ ಭಕ್ತಿ ಎಷ್ಟು ಪ್ರಾಮಾಣಿಕತೆಯಿಂದ ಕೂಡಿದೆ ಎಂಬುದು ಇದರಿಂದ ಗೊತ್ತಾಗುತ್ತದೆ. ಚುನಾವಣೆ ಬಂದಾಗ ಎಲ್ಲ ಪಕ್ಷಗಳು ರಾಜಕೀಯ ಮಾಡಲಿ. ಆದರೆ, ಈಗ ಈ ರೀತಿ ವರ್ತಿಸುವುದು ಸರಿಯಲ್ಲ’ ಎಂದರು.

‘ನೀವು ನಿಜವಾದ ಭಾರತೀಯರಾಗಿದ್ದರೆ ಉದಯಪುರ ಘಟನೆ ಖಂಡಿಸಿ. ಇದನ್ನು ಖಂಡಿಸದವರು ನಾಲಾಯಕ್‘ ಎಂದು ಕಾಂಗ್ರೆಸ್‌ ವಿರುದ್ಧ ಹರಿಹಾಯ್ದ ಅವರು, ಮೊದಲು ನಾವೆಲ್ಲರೂ ಭಾರತೀಯರು ಎಂಬುದನ್ನು ಎಲ್ಲ ಪಕ್ಷದವರು ಅರ್ಥೈಸಿಕೊಳ್ಳಬೇಕು ಎಂದರು.

ಸಂಸದೆ ಮಂಗಲಾ ಅಂಗಡಿ, ಕೃಷ್ಣಭಟ್‌, ರವಿಕುಮಾರ್‌ ಕೋಕಿತಕರ್‌ ಇತರರು ನೇತತ್ವ ವಹಿಸಿದ್ದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು