ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬೆಳಗಾವಿ: ಕೈ ಮುಗಿದು ಕೋರಿದರು... ಕರೆ ತಂದರು...

ನಗರ ಸ್ಥಳೀಯ ಸಂಸ್ಥೆಗಳ ಚುನಾವಣೆ ಮತದಾನದ ನೋಟ
Last Updated 31 ಆಗಸ್ಟ್ 2018, 11:34 IST
ಅಕ್ಷರ ಗಾತ್ರ

ಬೆಳಗಾವಿ: ಮತದಾರರ ಮನವೊಲಿಸಲು ಕೊನೆ ಕ್ಷಣದ ಕಸರತ್ತು. ಮತಗಟ್ಟೆಗೆ ತೆರಳುವ ಮಾರ್ಗದ ಬದಿಯಲ್ಲಿ ನಿಂತು, ಕೈಮುಗಿದು ಮತಯಾಚಿಸಿದ ಅಭ್ಯರ್ಥಿಗಳು. ಮತಗಟ್ಟೆಗಳ ಬಳಿಗೆ ಕರೆತರಲು ವಾಹನದ ವ್ಯವಸ್ಥೆ. ಗುಂಪು ಗುಂಪಾಗಿ ಸೇರಿದ್ದ ರಾಜಕೀಯ ಪಕ್ಷಗಳ ಮುಖಂಡರು, ಕಾರ್ಯಕರ್ತರು. ಪೊಲೀಸರಿದ್ದರೂ ಕೆಲವೆಡೆ ಪಾಲನೆಯಾಗದ ನೀತಿಸಂಹಿತೆ!

– ಜಿಲ್ಲೆಯ 14 ವಿವಿಧ ನಗರ ಸ್ಥಳೀಯ ಸಂಸ್ಥೆಗಳಿಗೆ ಶುಕ್ರವಾರ ನಡೆದ ಚುನಾವಣೆಯಲ್ಲಿ ಕಂಡುಬಂದ ದೃಶ್ಯಗಳಿವು.

ತಮ್ಮ ಸ್ಥಳೀಯ ಸಂಸ್ಥೆಗಳ ಪ್ರತಿನಿಧಿಗಳ ಆಯ್ಕೆಗೆ ಮತದಾರರಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಯಿತು. ಬೆಳಿಗ್ಗೆಯಿಂದಲೂ ಬಿರುಸಿನ ಮತದಾನ ನಡೆಯಿತು. ಬಿಸಿಲು ಇರಲಿಲ್ಲ; ಮಳೆಯೂ ಬಿಡುವು ಕೊಟ್ಟಿದ್ದರಿಂದ, ಮತದಾರರು ಸರದಿಯಲ್ಲಿ ನಿಂತು ತಮ್ಮ ಹಕ್ಕು ಚಲಾಯಿಸಿದರು. ಇದೇ ಮೊದಲ ಬಾರಿಗೆ ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ ವಿದ್ಯುನ್ಮಾನ ಮತಯಂತ್ರಗಳನ್ನು (ಇವಿಎಂ) ಬಳಸಲಾಯಿತು.

ಕೆಲವು ಸ್ಥಳೀಯ ಸಂಸ್ಥೆಗಳಲ್ಲಿ ಕಾಂಗ್ರೆಸ್, ಬಿಜೆಪಿ, ಜೆಡಿಎಸ್‌ ಮೊದಲಾದ ಪ್ರಮುಖ ರಾಜಕೀಯ ಪಕ್ಷಗಳಿಂದ ಅಧಿಕೃತ ಅಭ್ಯರ್ಥಿಗಳು ಕಣದಲ್ಲಿದ್ದರು. ಕೆಲವೆಡೆ ಪಕ್ಷೇತರರಾಗಿ, ರಾಜಕೀಯ ಪಕ್ಷಗಳ ಬೆಂಬಲಿತರಾಗಿ ಕಣದಲ್ಲಿದ್ದರು. ಅಂತಹ ಕಡೆಗಳಲ್ಲಿ ಪಕ್ಷದ ಚಿಹ್ನೆ ಬದಲಿಗೆ, ತಮ್ಮ ನಿರ್ದಿಷ್ಟ ಸಂಖ್ಯೆಗೆ ಮತ ಹಾಕುವಂತೆ ಕೋರುತ್ತಿದ್ದುದು ಸಾಮಾನ್ಯವಾಗಿತ್ತು. ವೃದ್ಧರು ಕುಟುಂಬದವರ ಸಹಾಯದಿಂದ ಮತಗಟ್ಟೆಗಳಿಗೆ ಬಂದು, ಹಕ್ಕು ಚಲಾಯಿಸುವ ಮೂಲಕ ಕರ್ತವ್ಯ ಪ್ರಜ್ಞೆ ಮೆರೆದದ್ದು ವಿಶೇಷವಾಗಿತ್ತು.

ಮತದಾರರಿಗೆ ನಮಸ್ಕಾರ:ಸಂಕೇಶ್ವರ ಹಾಗೂ ಹುಕ್ಕೇರಿಯಲ್ಲಿ ಪುರಸಭೆಗೆ ಸ್ಪರ್ಧಿಸಿದ್ದ ಕೆಲವು ಅಭ್ಯರ್ಥಿಗಳು ಮತಗಟ್ಟೆಗೆ ಹೋಗುವ ರಸ್ತೆಯ ಬದಿಯಲ್ಲಿ ನಿಂತು ಕೈಮುಗಿದು ಮತ ಕೇಳಿದರು. ಮತ ಚಲಾಯಿಸಿ ಬರುತ್ತಿದ್ದವರಿಗೂ ನಮಸ್ಕರಿಸುತ್ತಿದ್ದುದು ಕಂಡುಬಂತು. ಕೆಲವು ಅಭ್ಯರ್ಥಿಗಳ ಬೆಂಬಲಿಗರು, ಮತದಾರರನ್ನು ಆಟೊರಿಕ್ಷಾ, ಕಾರು, ಟೆಂಪೊದಲ್ಲಿ ಕರೆದುಕೊಂಡು ಬಂದರು.

ಹುಕ್ಕೇರಿಯ 19 ಹಾಗೂ 20ನೇ ವಾರ್ಡ್‌ನ ಮತಗಟ್ಟೆಗಳನ್ನು ಸರ್ಕಾರಿ ಶಾಲೆಯಲ್ಲಿ ಸ್ಥಾ‍ಪಿಸಲಾಗಿತ್ತು. ಇಲ್ಲಿ ಬೆಳಿಗ್ಗೆ ಬಿರುಸಿನ ಮತದಾನ ನಡೆಯಿತು. ನಂತರ ನೀರಸವಾಗಿತ್ತು. ಸಂಜೆ ಚುರುಕು ಪಡೆದುಕೊಂಡಿತು. ಈ ಮತಗಟ್ಟೆಯ 100 ಮೀ.ವ್ಯಾಪ್ತಿಯಲ್ಲಿಯೇ ಕೆಲವು ಅಭ್ಯರ್ಥಿಗಳು ತಮ್ಮ ಬೆಂಬಲಿಗರು, ಕಾರ್ಯಕರ್ತರು ಹಾಗೂ ಮತದಾರರಿಗೆ ಅವಲಕ್ಕಿ ಹಾಗೂ ಚಹಾ ವ್ಯವಸ್ಥೆ ಮಾಡಿದ್ದರು! ಸಮೀಪದಲ್ಲಿಯೇ ಇದ್ದ ಪೊಲೀಸರು, ಮಾದರಿ ನೀತಿಸಂಹಿತೆ ಉಲ್ಲಂಘನೆ ಆಗುತ್ತಿರುವುದನ್ನು ಕಂಡರೂ ಕಾಣದಂತೆ ಇದ್ದರು! ಪಟ್ಟಣದ ಹೋಟೆಲ್‌ಗಳೆಲ್ಲವೂ ತುಂಬಿ ತುಳುಕಿದವು.

ಪೊಲೀಸರು ಗಮನಿಸಲಿಲ್ಲ!:ಜಿಲ್ಲಾ ಉಸ್ತುವಾರಿ ಸಚಿವ ರಮೇಶ ಜಾರಕಿಹೊಳಿ ತವರು ಗೋಕಾಕದಲ್ಲಿ ನಗರಸಭೆ ಚುನಾವಣೆಯ ಬಿಸಿ ಜೋರಾಗಿಯೇ ಇತ್ತು. ಅಲ್ಲಿ ಅಭ್ಯರ್ಥಿಗಳು ರಾಜಕೀಯ ಪಕ್ಷದಿಂದ ಅಧಿಕೃತವಾಗಿ ಸ್ಪರ್ಧಿಸಿರಲಿಲ್ಲ. ಇದರಿಂದಾಗಿ ತಮ್ಮ ಸಂಖ್ಯೆಯನ್ನು ಹೇಳಿ ಮತ ಕೇಳುತ್ತಿದ್ದರು. ಮತಗಟ್ಟೆ ಸಮೀಪದಲ್ಲಿಯೇ ಗುಂಪು ಗುಂಪಾಗಿ ನಿಂತು ಮತ ಕೋರುತ್ತಿದ್ದರು.

ಚಿಕ್ಕೋಡಿಯಲ್ಲಿ ವಿಧಾನಪರಿಷತ್‌ ವಿರೋಧಪಕ್ಷದ ಮುಖ್ಯ ಸಚೇತಕ ಮಹಾಂತೇಶ ಕವಟಗಿಮಠ ಪತ್ನಿಯೊಂದಿಗೆ ಸರದಿಯಲ್ಲಿ ನಿಂತು ಚಲಾಯಿಸಿದರು.

16ನೇ ವಾರ್ಡ್‌ನ ಮತದಾರರಾದ ರಮೇಶ ಜಾರಕಿಹೊಳಿ ಪುತ್ರ ಅಮರನಾಥ ಜೊತೆ ದ್ವಿಚಕ್ರವಾಹನದಲ್ಲಿ ಬಂದು 34ನೇ ಮತಗಟ್ಟೆಯಲ್ಲಿ ಹಕ್ಕು ಚಲಾಯಿಸಿದರು. ದ್ವಿಚಕ್ರವಾಹನ ಸವಾರಿ ಮಾಡುತ್ತಿದ್ದ ಅಮರನಾಥ ಹೆಲ್ಮೆಟ್‌ ಧರಿಸಿರಲಿಲ್ಲ; ಆ ವಾಹನದ ನಂಬರ್‌ ಪ್ಲೇಟ್‌ ಕೂಡ ಇರಲಿಲ್ಲ! ಇದ್ಯಾವುದನ್ನೂ ಪೊಲೀಸರು ಗಮನಿಸಲಿಲ್ಲ! ಕೊಣ್ಣೂರು ಪುರಸಭೆಯಲ್ಲೂ ಮತದಾರರು ಸರದಿಯಲ್ಲಿ ನಿಂತು ಮತ ಚಲಾಯಿಸಿದರು.

ಮತಗಟ್ಟೆಗಳ ಬಳಿ ಮುಂಜಾಗ್ರತಾ ಕ್ರಮವಾಗಿ ಪೊಲೀಸ್‌ ಬಂದೋಬಸ್ತ್‌ ಮಾಡಲಾಗಿತ್ತು.

ಮತದಾರರಿಗೆ ‘ನೋಟ’ (ಮೇಲಿನ ಯಾರೊಬ್ಬರಿಗೂ ತಮ್ಮ ಮತ ಇಲ್ಲ) ಅವಕಾಶ ಕಲ್ಪಿಸಲಾಗಿತ್ತು. ನಗರ ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ ಒಂದೇ ವಾರ್ಡಿನಲ್ಲಿ ಒಂದೇ ಹೆಸರಿನ ಅಭ್ಯರ್ಥಿಗಳು ಸ್ಪರ್ಧಿಸುವ ಸಾಧ್ಯತೆಗಳು ಇರುವುದರಿಂದಾಗಿ, ಅಭ್ಯರ್ಥಿಗಳನ್ನು ಗುರುತಿಸಲು ಮತಪತ್ರದಲ್ಲಿ ಅವರ ಹೆಸರಿನ ಮುಂದೆ ಅವರ ವೃತ್ತಿ ಅಥವಾ ವಿಳಾಸ ಮುದ್ರಿಸಲಾಗುತ್ತಿತ್ತು. ಆದರೂ ಮತದಾರರಿಗೆ ಗೂಂದಲ ಉಂಟಾಗುವುದನ್ನು ತಪ್ಪಿಸಲು ಮತಪತ್ರದಲ್ಲಿ ಎಲ್ಲ ಅಭ್ಯರ್ಥಿಗಳ ಹೆಸರಿನ ಮುಂದೆ ಅವರ ಇತ್ತೀಚಿನ ಭಾವಚಿತ್ರ ಮುದ್ರಿಸಲಾಗಿತ್ತು. ಇವು ಈ ಬಾರಿಯ ಚುನಾವಣೆಯ ವಿಶೇಷಗಳಾಗಿದ್ದವು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT