ಗುರುವಾರ, 12 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಸರ್ಕಾರದ ಸೌಲಭ್ಯಕ್ಕಾಗಿ ಒಗ್ಗಟ್ಟಾಗಿ: ಶೆಟ್ಟರ್‌

ಬಣಜಿಗ ಸಮಾಜದ ಪ್ರತಿಭಾ ಪುರಸ್ಕಾರ
Published 21 ಆಗಸ್ಟ್ 2024, 15:44 IST
Last Updated 21 ಆಗಸ್ಟ್ 2024, 15:44 IST
ಅಕ್ಷರ ಗಾತ್ರ

ರಾಮದುರ್ಗ: ‘ವೀರಶೈವ ಲಿಂಗಾಯತ ಒಳಪಂಗಡಗಳು ಸಮಾಜದ ಪ್ರತಿಭಾವಂತರಿಗೆ ಹಾಗೂ ಸಾಧಕರಿಗೆ ಪ್ರೋತ್ಸಾಹಿಸಲು ಪ್ರೇರಣೆ ನೀಡಬೇಕು’ ಎಂದು ಬೆಳಗಾವಿ ಸಂಸದ ಜಗದೀಶ ಶೆಟ್ಟರ್‌ ಹೇಳಿದರು.

ಇಲ್ಲಿನ ಕರ್ನಾಟಕ ಬಣಜಿಗ ಸಮಾಜದ ಕ್ಷೇಮಾಭಿವೃದ್ಧಿ ಸಂಘ ಹಮ್ಮಿಕೊಂಡಿದ್ದ ಪ್ರತಿಭಾ ಪುರಸ್ಕಾರ, ಸನ್ಮಾನ ಸಮಾರಂಭ ಉದ್ಘಾಟಿಸಿ ಮಾತನಾಡಿ, ‘ಸರ್ಕಾರದ ಸೌಲಭ್ಯಕ್ಕಾದರೂ ಲಿಂಗಾಯತ ಸಮಾಜವನ್ನು ಒಟ್ಟಾಗಿಸುವ ಕಾರ್ಯ ಮಾಡಬೇಕು’ ಎಂದರು.

‘ರಾಜ್ಯದಲ್ಲಿ ಬಣಜಿಗ ಸಮಾಜದ ಎಲ್ಲ ತಾಲ್ಲೂಕು ಘಟಕಗಳು ಕ್ರಿಯಾಶೀಲವಾಗಿ ಕೆಲಸ ಮಾಡುತ್ತಿವೆ. ಆದರೆ ರಾಜ್ಯ ಘಟಕದ ಸಂಘಟನೆಯಲ್ಲಿ ಕೊರತೆ ಇದೆ. ಅದನ್ನು ಶೀಘ್ರದಲ್ಲಿ ಶಮನಗೊಳಿಸಿ ರಾಜ್ಯದಲ್ಲಿ ಮತ್ತೆ ಸಂಘಟನೆಗೆ ಚುರುಕುಗೊಳಿಸಲು ಪ್ರಯತ್ನಿಸಲಾಗುವುದು’ ಎಂದು ಹೇಳಿದರು.

‘ಬೆಳಗಾವಿ ಜನ ಹುಬ್ಬಳ್ಳಿಯಿಂದ ಬಂದ ನನಗೆ ಆಶಿರ್ವಾದ ಮಾಡಿದ್ದಾರೆ. ನಿಮ್ಮೆಲ್ಲರ ಪ್ರೀತಿ ವಿಶ್ವಾಸಕ್ಕೆ ಋಣಿಯಾಗಿದ್ದೇನೆ. ದಿ.ಸುರೇಶ ಅಂಗಡಿಯವರ ಕಾರ್ಯಗಳನ್ನು ಪೂರ್ತಿಗೊಳಿಸಿ ಧಾರವಾಡ– ಬೆಳಗಾವಿ ರೈಲು ಸಂಪರ್ಕ ಕೆಲಸ ಮತ್ತು ಸವದತ್ತಿ ಹಾಗೂ ರಾಮದುರ್ಗಕ್ಕೆ ರೈಲು ಸಂಪರ್ಕ ಕಲ್ಪಿಸಲು ಕೇಂದ್ರ ರೇಲ್ವೆ ಸಚಿವರಿಗೆ ಮನವಿ ಮಾಡಿದ್ದೇನೆ’ ಎಂದು ತಿಳಿಸಿದರು.

ಕಾರ್ಯಕ್ರಮ ಉದ್ಘಾಟಿಸಿದ ವಿಧಾನ ಸಭೆಯ ಮುಖ್ಯಸಚೇತಕ ಅಶೋಕ ಪಟ್ಟಣ ಮಾತನಾಡಿ, ‘ಲಿಂಗಾಯತ ಒಳ ಪಂಗಡಗಳು ಕೇವಲ ಸಮಾವೇಶ, ಸಭೆ ಸಮಾರಂಭ ಮಾಡದೇ ಸಮಾಜದಲ್ಲಿ ಆರ್ಥಿಕ ಮತ್ತು ಶೈಕ್ಷಣಿಕವಾಗಿ ಹಿಂದುಳಿದ ಜನರನ್ನು ಗುರುತಿಸಿ ಮುಖ್ಯವಾಹಿನಿಗೆ ತರಲು ಶ್ರಮಿಸಬೇಕು’ ಎಂದರು.

ತಾಳಿಕೋಟಿಯ ಪ್ರೌಢಶಾಲಾ ಶಿಕ್ಷಕ ಅಶೋಕ ಹಂಚಳಿ ಉಪನ್ಯಾಸ ನೀಡಿದರು. ತಾಲ್ಲೂಕು ಘಟಕದ ಅಧ್ಯಕ್ಷ ಗುರುಸಿದ್ಧಪ್ಪ ಮುತ್ತೂರ ಅಧ್ಯಕ್ಷತೆ ವಹಿಸಿದ್ದರು. ಮಾಜಿ ಶಾಸಕ ಮಹಾದೇವಪ್ಪ ಯಾದವಾಡ, ಮಹಿಳಾ ಘಟಕದ ಅಧ್ಯಕ್ಷೆ ಪ್ರಭಾವತಿ ಪುಠಾಣಿ, ಯುವ ಘಟಕದ ಅಧ್ಯಕ್ಷ ರಾಜು ಬೆಂಬಳಗಿ, ಗೋಕಾಕದ ಹರ್ಷಿತಾ ಸವಣೂರ ಇದ್ದರು.

ಮಹೇಶ ದೇಶನೂರ, ಶೇಖರಪ್ಪ ಯಾದವಾಡ, ಬಸವಣ್ಣೆಪ್ಪ ಹುದ್ದಾರ, ಶಶಿಧರ ಮಾಳವಾಡ  ಅವರಿಗೆ ‘ಕಾಯಕ ರತ್ನ’ ಪ್ರಶಸ್ತಿ ನೀಡಿ ಗೌರವಿಸಲಾಯಿತು.

ಈರಣ್ಣ ಬುಡ್ಡಾಗೋಳ ಸ್ವಾಗತಿಸಿದರು. ಪ್ರೊ.ಎಸ್.ಎಂ.ಸಕ್ರಿ ಪ್ರಾಸ್ತಾವಿಕ ಮಾತನಾಡಿದರು. ದಿವ್ಯಾ ಬಟಕುರ್ಕಿ ಕಾರ್ಯಕ್ರಮ ನಿರೂಪಿಸಿದರು. ಸಿದ್ದು ಹದ್ಲಿ ವಂದಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT