ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ದೈಹಿಕ ಶಿಕ್ಷಣ ಶಿಕ್ಷಕರ ನೇಮಕಾತಿಗೆ ಆಗ್ರಹ

Last Updated 9 ಸೆಪ್ಟೆಂಬರ್ 2022, 13:07 IST
ಅಕ್ಷರ ಗಾತ್ರ

ಬೆಳಗಾವಿ: ರಾಜ್ಯದ ದೈಹಿಕ ಶಿಕ್ಷಣ ಶಿಕ್ಷಕರ ವೃಂದ ಮತ್ತು ನೇಮಕಾತಿ ನಿಯಮಗಳ ತಿದ್ದುಪಡಿ ಆದೇಶವನ್ನು ಬೇಗನೇ ನೀಡಬೇಕು ಹಾಗೂ ದೈಹಿಕ ಶಿಕ್ಷಣ ಶಿಕ್ಷಕರ ನೇಮಕಾತಿ ಪ್ರಕ್ರಿಯೆ ಆರಂಭಿಸಬೇಕು ಎಂಬುದೂ ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ, ಕರ್ನಾಟಕ ರಾಜ್ಯ ದೈಹಿಕ ಶಿಕ್ಷಣ ಶಿಕ್ಷಕರ ಸಂಘದ ಜಿಲ್ಲಾ ಘಟಕದಿಂದ ನಗರದಲ್ಲಿ ಶುಕ್ರವಾರ ಪ್ರತಿಭಟನೆ ನಡೆಸಲಾಯಿತು.

ಇಲ್ಲಿನ ಹೆಚ್ಚುವರಿ ಜಿಲ್ಲಾಧಿಕಾರಿ ಅಶೋಕ ದುಡಗುಂಟಿ ಅವರ ಮೂಲಕ ಮುಖ್ಯಮಂತ್ರಿ ಹಾಗೂ ಶಿಕ್ಷಣ ಸಚಿವರಿಗೆ ಮನವಿ ಕೂಡ ಸಲ್ಲಿಸಲಾಯಿತು. ಹಲವು ವರ್ಷಗಳಿಂದ ಈ ಬೇಡಿಕೆಗೆ ಸರ್ಕಾರ ಕಿವಿಗೊಟ್ಟಿಲ್ಲ. ಈ ಬಾರಿ ಶಿಕ್ಷಕರ ದಿನಾಚರಣೆ ಸಂದರ್ಭದಲ್ಲಾದರೂ ಸಚಿವರು ಭರವಸೆ ನೀಡಬಹುದು ಎಂಬ ನಿರೀಕ್ಷೆ ಹುಸಿಯಾಗಿದೆ ಎಂದು ಮನವಿಯಲ್ಲಿ ಬೇಸರ ವ್ಯಕ್ತಪಡಿಸಿದ್ದಾರೆ.

ರಾಜ್ಯದ ದೈಹಿಕ ಶಿಕ್ಷಣದ ಅಭಿವೃದ್ಧಿಗಾಗಿ ಸರ್ಕಾರ 2006ರಲ್ಲಿ ಪ್ರೊ.ಎಲ್.ಆರ್. ವೈದ್ಯನಾಥನ್ ನೇತೃತ್ವದ ಸಮಿತಿ ರಚಿಸಿತು. ಈ ಸಮಿತಿಯ ವರದಿ ಪರಿಶೀಲಿಸಲು ಡಾ.ಆನಂದ್ ನಾಡಗೀರ ಅಧ್ಯಕ್ಷತೆಯ ಸಮಿತಿ ರಚಿಸಲಾಯಿತು. ಈ ಸಮಿತಿ ಕೂಡ ಕೂಲಂಕಷವಾಗಿ ಪರಿಶೀಲಿಸಿ 14 ಅಂಶಗಳನ್ನು ಶಿಫಾರಸು ಮಾಡಿದೆ. ಅದರಲ್ಲಿನ 13 ಅಂಶಗಳನ್ನು ಸರ್ಕಾರ ಜಾರಿಗೊಳಿಸಿದೆ. 14ನೇ ಅಂಶವಾದ ದೈಹಿಕ ಶಿಕ್ಷಣ ಶಿಕ್ಷಕರ ಪದನಾಮವನ್ನು ‘ಸಹ ಶಿಕ್ಷಕ (ದೈಹಿಕ ಶಿಕ್ಷಣ)’ ಎಂದು ಪರಿಗಣಿಸಿ ಸಹ ಶಿಕ್ಷಕರಿಗೆ ದೊರೆಯುವ ಎಲ್ಲಾ ಸೌಲಭ್ಯಗಳನ್ನು ಇವರಿಗೂ ನೀಡಬೇಕು ಎಂಬ ಅಂಶ ಇನ್ನೂ ಪರಿಗಣಿಸಿಲ್ಲ ಎಂದು ಬೇಸರ ವ್ಯಕ್ತಪಡಿಸಿದ್ದಾರೆ.

14ನೇ ಅಂಶವನ್ನೂ ಪರಿಗಣಿಸುವ ಮೂಲಕ ದೈಹಿಕ ಶಿಕ್ಷಣ ಶಿಕ್ಷಕರೂ ಮುಖ್ಯಶಿಕ್ಷಕರ ಹುದ್ದೆಗೆ ಬಡ್ತಿ ಪಡೆಯುವಂತೆ ಮಾಡಬೇಕು. ಈಗಾಗಲೇ ದೇಶದ ಬೇರೆಬೇರೆ ರಾಜ್ಯಗಳಲ್ಲಿ ಈ ಕ್ರಮ ಜಾರಿಯಲ್ಲಿದೆ ಎಂದು ತಿಳಿಸಿದ್ದಾರೆ.

ಒಂದು ತಿಂಗಳ ಒಳಗಾಗಿ ಸರ್ಕಾರ ವೃಂದ ಮತ್ತು ನೇಮಕಾತಿ ತಿದ್ದುಪಡಿ ಆದೇಶ ಮಾಡಬೇಕು. ಪ್ರಾಥಮಿಕ, ಪ್ರೌಢಶಾಲೆ ಹಾಗೂ ಪದವಿಪೂರ್ವ ಕಾಲೇಜುಗಳಿಗೆ ದೈಹಿಕ ಶಿಕ್ಷಣ ಶಿಕ್ಷಕರ/ ಉಪನ್ಯಾಸಕರ ನೇಮಕಾತಿ ಮಾಡಬೇಕು. ಕೇಂದ್ರ ಸರ್ಕಾರವು ಫಿಟ್ ಇಂಡಿಯಾ ಮತ್ತು ಖೇಲೋ ಇಂಡಿಯಾ ಕ್ರೀಡಾ, ಯೋಗ ಶಿಕ್ಷಣಕ್ಕೆ ಆದ್ಯತೆ ನೀಡಿದೆ. ಇವುಗಳ ಪರಿಣಾಮಕಾರಿ ಅನುಷ್ಠಾನಕ್ಕೆ ದೈಹಿಕ ಶಿಕ್ಷಣ ಶಿಕ್ಷಕರು ಅಗತ್ಯ. ಪ್ರಾಥಮಿಕ ಶಾಲೆಗಳಲ್ಲಿ ದೈಹಿಕ ಶಿಕ್ಷಣ ಶಿಕ್ಷಕರನ್ನು ನೇಮಕಾತಿ ಮಾಡಿಕೊಳ್ಳಲು ಮಕ್ಕಳ ಸಂಖ್ಯೆಯ ಮಾನದಂಡ ನಿಗದಿಪಡಿಸಿರುವ ಕಾರಣ ಬಹುತೇಕ ಪ್ರಾಥಮಿಕ ಶಾಲೆಗಳಲ್ಲಿ ಹುದ್ದೆ ಸೃಜನೆಯಾಗಿಲ್ಲ. ಈ ನಿಯಮಗಳನ್ನು ಸಡಿಸಿಲಿ ಹುದ್ದೆ ಸೃಜನೆ ಮಾಡಬೇಕು ಎಂದೂ ಆಗ್ರಹಿಸಿದ್ದಾರೆ.

ಸಂಘದ ಜಿಲ್ಲಾ ಘಟಕದ ಗೌರವಾಧ್ಯಕ್ಷ ಆರ್‌.ವಿ. ಒಂಟಗೋಡಿ, ಪ್ರಧಾನ ಕಾರ್ಯದರ್ಶಿ ಬಿ.ಜಿ.ಹಿರೇಮಠ, ರಾಜ್ಯ ಘಟಕದ ಪದಾಧಿಕಾರಿ ಸಾಧನಾ ಬದ್ರಿ, ಖಜಾಂಚಿ ಹಣಮಂತ ಮಾಸ್ತಿಹೊಳಿ, ಸಹ ಕಾರ್ಯದರ್ಶಿ ಸಚಿನ ಗುಡಚಿ, ಸಂಘಟನಾ ಕಾರ್ಯದರ್ಶಿ ಎಸ್.ಎ.ಮರಕಟ್ಟಿ ಇತರರು ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT