ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಾಲುಬಾಯಿ ರೋಗ ಲಸಿಕೆ ತಪ್ಪದೇ ಹಾಕಿಸಿ

ಪಲ್ಸ್ ಪೋಲಿಯೊ ಮಾದರಿಯಲ್ಲಿ ಅನುಷ್ಠಾನಕ್ಕೆ ಸಿಇಒ ದರ್ಶನ್ ಸೂಚನೆ
Last Updated 4 ಜನವರಿ 2023, 15:39 IST
ಅಕ್ಷರ ಗಾತ್ರ

ಬೆಳಗಾವಿ: ‘ರಾಷ್ಟ್ರೀಯ ಜಾನುವಾರು ರೋಗ ನಿಯಂತ್ರಣದಡಿ ಜಿಲ್ಲೆಯಾದ್ಯಂತ ಜನವರಿ 5ರಿಂದ 31ರವರೆಗೆ ಮೂರನೇ ಸುತ್ತಿನ ಕಾಲುಬಾಯಿ ರೋಗ ಲಸಿಕಾ ಅಭಿಯಾನ ಆಯೋಜಿಸಲಾಗುತ್ತಿದೆ. ಇದ್ನು ಪಲ್ಸ್ ಪೋಲಿಯೊ ಮಾದರಿಯಲ್ಲಿ ಯಶಸ್ವಿಗೊಳಿಸಬೇಕು’ ಎಂದು ಜಿಲ್ಲಾ ಪಂಚಾಯ್ತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಎಚ್.ವಿ.ದರ್ಶನ್ ತಿಳಿಸಿದರು.

ಜಿಲ್ಲಾ ಪಂಚಾಯತ್‌ ಸಭಾಂಗಣದಲ್ಲಿ ಬುಧವಾರ ನಡೆದ ಜಿಲ್ಲಾ ಮಟ್ಟದ ನಿರ್ವಹಣಾ ಸಮಿತಿ ಮೂರನೇ ಸುತ್ತಿನ ಕಾಲುಬಾಯಿ ರೋಗ ಲಸಿಕಾ ಅಭಿಯಾನದ ಪೂರ್ವಸಿದ್ಧತಾ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

‘ಈಗಾಗಲೇ ಪ್ರತಿ ಗ್ರಾಮ ಪಂಚಾಯಿತಿ ಮಟ್ಟದಲ್ಲಿ ತರಬೇತಿ ಹೊಂದಿರುವ ಪಶು ಸಖಿಯರನ್ನು ನಿಯೋಜಿಸಿದ್ದು, ಲಸಿಕಾ ಅಭಿಯಾನ ಪ್ರಚುರ ಪಡಿಸಲು ಅವರ ಸೇವೆಯನ್ನು ಬಳಸಿಕೊಳ್ಳಬೇಕು. ಸದ್ಯಕ್ಕೆ ಜಿಲ್ಲೆಯಲ್ಲಿ 13,31,950 ಡೋಸ್‌ ಕಾಲುಬಾಯಿ ಬೇನೆ ರೋಗದ ಲಸಿಕೆ ಲಭ್ಯವಿದ್ದು, ಸರ್ಕಾರದ ಮಾರ್ಗಸೂಚಿ ಪ್ರಕಾರ ಒಬ್ಬ ಲಸಿಕದಾರ ಪ್ರತಿ ದಿನ ಒಂದು ಬ್ಲಾಕ್‌ನಲ್ಲಿ 100 ರಿಂದ 120 ಜಾನುವಾರುಗಳಿಗೆ ಲಸಿಕೆ ನೀಡಬೇಕು’ ಎಂದರು.

‘ನಿಗದಿತ ಗುರಿಯಂತೆ 13 ಲಕ್ಷ ಜಾನುವಾರುಗಳಿಗೆ ಲಸಿಕೆ ಹಾಕಲು ಅಗತ್ಯ ಸಿದ್ಧತೆ ಮಾಡಿಕೊಳ್ಳಬೇಕು. ಲಸಿಕೆ ಮತ್ತಿತರ ಸಲಕರಣೆಗಳನ್ನು ಶಿಥಲೀಕರಣ ಯಂತ್ರದಲ್ಲಿ ಸಂರಕ್ಷಿಸಿ ಪ್ರತಿ ದಿನ ಅಗತ್ಯ ಇರುವ ಲಸಿಕೆಯನ್ನು ವ್ಯಾಕ್ಸಿನ್‌ ಕ್ಯಾರಿಯರ್‌ ಬಳಸಿ ಲಸಿಕೆ ಮಾಡಲು ಸೂಕ್ತ ಕ್ರಮ ವಹಿಸುವಂತೆ’ ಅಧಿಕಾರಿಗಳಿಗೆ ಸೂಚನೆ ನೀಡಿದರು.

ಟ್ಯಾಗ್ ಅಳವಡಿಕೆ: ಸಭೆಯಲ್ಲಿ ಮಾಹಿತಿ ನೀಡಿದ ಪಶುಪಾಲನಾ ಮತ್ತು ಪಶುವೈದ್ಯಕೀಯ ಇಲಾಖೆಯ ಉಪ ನಿರ್ದೇಶಕ ಡಾ.ರಾಜೀವ್ ಎನ್. ಕೂಲೇರ, ಪ್ರತಿ ಜಾನುವಾರುಗಳ ಕಿವಿಗಳಿಗೆ ಟ್ಯಾಗ್ ಅಳವಡಿಸುವ ಮೂಲಕ ಲಸಿಕಾ‌ ಪ್ರಗತಿಯನ್ನು ‘ಇನಾಫ್‌ ಪೋರ್ಟಲ್’ನಲ್ಲಿ ಪ್ರತಿ ದಿನ ನಮೂದಿಸಲಾಗುತ್ತದೆ ಎಂದರು.

‘ವರ್ಷದಲ್ಲಿ ಎರಡು ಬಾರಿ ಲಸಿಕಾ ಕಾರ್ಯಕ್ರಮ ನಡೆಸಲಾಗುತ್ತಿದೆ. ಜಿಲ್ಲೆಯಲ್ಲಿ ಎಮ್ಮೆ, ಹಸು ಸೇರಿದಂತೆ 13 ಲಕ್ಷಕ್ಕೂ ಅಧಿಕ ಜಾನುವಾರುಗಳಿದ್ದು, ಎಲ್ಲಾ ಜಾನುವಾರುಗಳಿಗೆ ಲಸಿಕೆ ಹಾಕಲಾಗುತ್ತಿದೆ. ಪ್ರತಿದಿನ ಕನಿಷ್ಠ 70 ಸಾವಿರ ಲಸಿಕಾ ಗುರಿ ಹೊಂದಲಾಗಿದೆ. ಜಿಲ್ಲೆಯಲ್ಲಿ ಸದ್ಯಕ್ಕೆ 13.41 ಲಕ್ಷ ಲಸಿಕೆಗಳು ಲಭ್ಯವಿರುತ್ತವೆ. ಕಳೆದ ಬಾರಿ ಶೇ 87ಕ್ಕೂ ಅಧಿಕ ಗುರಿಸಾಧನೆ ಮಾಡಲಾಗಿತ್ತು’ ಎಂದು ಹೇಳಿದರು.

ಪ್ರಚಾರ ಸಾಮಗ್ರಿ ಬಿಡುಗಡೆ: ಕಾಲುಬಾಯಿ ರೋಗ ನಿಯಂತ್ರಣ ಲಸಿಕಾ ಅಭಿಯಾನ ಕುರಿತು ಜಾಗೃತಿ ಮೂಡಿಸುವ ಪೋಸ್ಟರ್, ಕರಪತ್ರ ಮತ್ತಿತರ ಪ್ರಚಾರ ಸಾಮಗ್ರಿಗಳನ್ನು ದರ್ಶನ್ ಬಿಡುಗಡೆಗೊಳಿಸಿದರು.

ಜಿಲ್ಲಾ ನಗರಾಭಿವೃದ್ಧಿ ಕೋಶದ ಪ್ರತಿನಿಧಿಗಳು, ಉಪ ನಿರ್ದೇಶಕರು, ಸಾರ್ವಜನಿಕ ಶಿಕ್ಷಣ ಇಲಾಖೆ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ಮಹೇಶ್ ಕೋಣಿ, ಪಶುಪಾಲನಾ ಇಲಾಖೆಯ ಮುಖ್ಯ ಪಶುವೈದ್ಯಾಧಿಕಾರಿ (ಆಡಳಿತ) ಕೆ.ಎಂ.ಎಫ್. ಪ್ರತಿನಿಧಿಗಳು ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT