ಶನಿವಾರ, ನವೆಂಬರ್ 23, 2019
17 °C

13.13 ಲಕ್ಷ ಜಾನುವಾರುಗಳಿಗೆ ಲಸಿಕೆ

Published:
Updated:
Prajavani

ಬೆಳಗಾವಿ: ರಾಷ್ಟ್ರೀಯ ಕಾಲು ಬಾಯಿ ರೋಗ ನಿಯಂತ್ರಣ ಕಾರ್ಯಕ್ರಮ ಅಡಿಯಲ್ಲಿ ಪಶುಪಾಲನೆ ಮತ್ತು ಪಶುವೈದ್ಯಕೀಯ ಸೇವಾ ಇಲಾಖೆ ವತಿಯಿಂದ ಜಾನುವಾರುಗಳಿಗೆ ಉಚಿತವಾಗಿ 16ನೇ ಸುತ್ತಿನ ಲಸಿಕೆ ಹಾಕುವ ಕಾರ್ಯಕ್ರಮಕ್ಕೆ ಜಿಲ್ಲಾ ಪಂಚಾಯ್ತಿ ಅಧ್ಯಕ್ಷೆ ಆಶಾ ಐಹೊಳೆ ಹಾಗೂ ಉತ್ತರ ಕ್ಷೇತ್ರದ ಶಾಸಕ ಅನಿಲ ಬೆನಕೆ ಸೋಮವಾರ ಚಾಲನೆ ನೀಡಿದರು.

‘ನ. 4ರವರೆಗೆ ಪ್ರತಿ ದಿನ ಬೆಳಿಗ್ಗೆ 7ರಿಂದ 11 ನಡೆಯಲಿದೆ. ಜಿಲ್ಲೆಯಲ್ಲಿರುವ ಒಟ್ಟು 13.13 ಲಕ್ಷ ದನ, ಎಮ್ಮೆ ಮತ್ತು ಹಂದಿಗಳಿಗೆ ಉಚಿತವಾಗಿ ಲಸಿಕೆ ಹಾಕಲಾಗುವುದು. 682 ಲಸಿಕೆದಾರರನ್ನು ಒಳಗೊಂಡ 103 ತಂಡಗಳನ್ನು ರಚಿಸಲಾಗಿದೆ. ಅವರು ರೈತರ ಮನೆ ಬಾಗಿಲಿಗೆ ತೆರಳಿ ಲಸಿಕೆ ನೀಡಲಿದ್ದಾರೆ’ ಎಂದು ಇಲಾಖೆಯ ಉಪನಿರ್ದೇಶಕ ಡಾ.ಅಶೋಕ ಕೊಳ್ಳಾ ತಿಳಿಸಿದ್ದಾರೆ.

‘ಸಾವಿರಾರು ರಾಸುಗಳನ್ನು ಸಾವಿಗೀಡು ಮಾಡಬಹುದಾದ ಕಾಲು ಬಾಯಿ ರೋಗವನ್ನು ನಿಯಂತ್ರಿಸಲು ರೈತರು ಹಾಗೂ ಹೈನುಗಾರರು ತಪ್ಪದೇ ಲಸಿಕೆ ಕೊಡಿಸಬೇಕು. ಹೆಚ್ಚಿನ ಮಾಹಿತಿಗೆ ಸಮೀಪದ ಪಶುವೈದ್ಯಕೀಯ ಸಂಸ್ಥೆಗಳನ್ನು ಸಂಪರ್ಕಿಸಬಹುದಾಗಿದೆ’ ಎಂದು ಮಾಹಿತಿ ನೀಡಿದ್ದಾರೆ.

ಪ್ರತಿಕ್ರಿಯಿಸಿ (+)