‘ಕಾರ್ಗಿಲ್‌ ಯೋಧರಿಗೆ ದೇಣಿಗೆ ನೀಡಿದ್ದಕ್ಕೆ ಖುಷಿಪಟ್ಟಿದ್ದರು’

7
ವಾಜಪೇಯಿಗೆ ಶ್ರದ್ಧಾಂಜಲಿ

‘ಕಾರ್ಗಿಲ್‌ ಯೋಧರಿಗೆ ದೇಣಿಗೆ ನೀಡಿದ್ದಕ್ಕೆ ಖುಷಿಪಟ್ಟಿದ್ದರು’

Published:
Updated:
Deccan Herald

ಬೆಳಗಾವಿ: ‘ಕಾರ್ಗಿಲ್‌ ಯುದ್ಧದ ಸಂದರ್ಭದಲ್ಲಿ ಶಿಕ್ಷಣ ಸಂಸ್ಥೆಗಳಿಂದ, ವಿದ್ಯಾರ್ಥಿಗಳಿಂದ ಹಾಗೂ ಸಾರ್ವಜನಿಕರಿಂದ ನಾವು ದೇಣಿಗೆ ಸಂಗ್ರಹಿಸಿ ನೀಡಿದಾಗ ಅಂದಿನ ಪ್ರಧಾನಿ ಅಟಲ್‌ ಬಿಹಾರಿ ವಾಜಪೇಯಿ ತುಂಬಾ ಖುಷಿಪಟ್ಟಿದ್ದರು’ ಎಂದು ರಾಜ್ಯಸಭಾ ಸದಸ್ಯ, ಕೆಎಲ್‌ಇ ಕಾರ್ಯಾಧ್ಯಕ್ಷ ಪ್ರಭಾಕರ ಕೋರೆ ಸ್ಮರಿಸಿದರು.

ಇಲ್ಲಿನ ಕನ್ನಡ ಸಾಹಿತ್ಯ ಭವನದಲ್ಲಿ ಶುಕ್ರವಾರ ಬಿಜೆಪಿ ಹಮ್ಮಿಕೊಂಡಿದ್ದ ಶ್ರದ್ಧಾಂಜಲಿ ಸಭೆಯಲ್ಲಿ ಅವರು ಮಾತನಾಡಿದರು.

ಯುವಕರಿಂದ ವಿಶೇಷವಾಗಿ ವಿದ್ಯಾರ್ಥಿಗಳಿಂದ ದೇಣಿಗೆ ಸಂಗ್ರಹಿಸಿದ್ದರಿಂದ ಅವರಲ್ಲಿಯೂ ದೇಶಪ್ರೇಮ, ರಾಷ್ಟ್ರೀಯತೆ ಜಾಗೃತವಾಗುತ್ತದೆ ಎಂದು ವಾಜಪೇಯಿ ಆ ಸಂದರ್ಭದಲ್ಲಿ ಹೇಳಿದ್ದರು. ಹಣ ಸಂಗ್ರಹಿಸಿರುವುದಕ್ಕಿಂತ ವಿದ್ಯಾರ್ಥಿಗಳಲ್ಲಿ ದೇಶಪ್ರೇಮ ಜಾಗೃತಿಗೊಳಿಸಿರುವುದು ಅವರಿಗೆ ಇಷ್ಟವಾಗಿತ್ತು ಎಂದು ನೆನೆದರು.

ಬಿಜೆಪಿ ಸ್ಥಾಪಕರಲ್ಲಿ ಒಬ್ಬರಾಗಿದ್ದ ವಾಜಪೇಯಿ ಅವರು ಪಕ್ಷವನ್ನು ಅಧಿಕಾರಕ್ಕೆ ತರಲು ಸಾಕಷ್ಟು ಶ್ರಮ ಪಟ್ಟಿದ್ದಾರೆ. ಹಲವು ಜನಪರ ಹೋರಾಟಗಳನ್ನೂ ನಡೆಸಿದ್ದರು. ಅವರು ಪ್ರಧಾನಿಯಾಗಿದ್ದಾಗ ನಾನು ಕಾಂಗ್ರೆಸ್‌ನಲ್ಲಿದ್ದೆ. ಆದರೂ ಅವರು ನನ್ನ ಜೊತೆ ಚೆನ್ನಾಗಿದ್ದರು. ಪಕ್ಷಾತೀತವಾಗಿ ಎಲ್ಲರ ಜೊತೆ ಉತ್ತಮ ಬಾಂಧವ್ಯ ಹೊಂದಿದ್ದರು ಎಂದು ಹೇಳಿದರು.

ತಮ್ಮ ಬದುಕಿನ ಉದ್ದಕ್ಕೂ ಮೌಲ್ಯಯುತ ರಾಜಕಾರಣ ಮಾಡಿದರು. ಪಕ್ಷದ ಕಾರ್ಯಕರ್ತರಿಗೆ, ಯುವಕರಿಗೆ ಮಾರ್ಗದರ್ಶಕರಾಗಿದ್ದರು ಎಂದು ಸ್ಮರಿಸಿದರು.

ಸಂಸದ ಸುರೇಶ ಅಂಗಡಿ ಮಾತನಾಡಿ, ಪೋಖ್ರಾನ್‌ ಪರಮಾಣು ಪರೀಕ್ಷೆ ಮಾಡುವ  ಮೂಲಕ ದೇಶದ ಶಕ್ತಿಯನ್ನು ಇಡೀ ವಿಶ್ವಕ್ಕೆ ವಾಜಪೇಯಿ ಅವರು ಪರಿಚಯಿಸಿದರು. ಜಗತ್ತಿನ ಧೀಮಂತ ನಾಯಕರಲ್ಲಿ ಇವರು ಕೂಡ ಒಬ್ಬರಾಗಿದ್ದಾರೆ ಎಂದು ಸ್ಮರಿಸಿದರು. 

2004ರಲ್ಲಿ ನಾನು ಲೋಕಸಭಾ ಕ್ಷೇತ್ರದಿಂದ ಸ್ಪರ್ಧಿಸಿದ್ದಾಗ ನನ್ನ ಪರ ಚುನಾವಣಾ ಪ್ರಚಾರ ಮಾಡಲು ಬೆಳಗಾವಿಗೆ ಬಂದಿದ್ದರು. ಆಗ ಅವರ ಜೊತೆ ನಿಕಟ ಸಂಪರ್ಕಕ್ಕೆ ಬಂದೆ. ಅವರ ನಡೆನುಡಿಯಿಂದ ಸಾಕಷ್ಟು ಪ್ರಭಾವಿತನಾದೆ. ವಾಜಪೇಯಿ ಅವರು ಪ್ರಧಾನಿಯಾಗಿದ್ದ ಸಂದರ್ಭದಲ್ಲಿ ರಾಜ್ಯದಲ್ಲಿ ಕಾಂಗ್ರೆಸ್‌ ಸರ್ಕಾರವಿತ್ತು. ಎಸ್‌.ಎಂ. ಕೃಷ್ಣ ಮುಖ್ಯಮಂತ್ರಿಯಾಗಿದ್ದರು. ಆ ಸಂದರ್ಭದಲ್ಲಿ ರಾಜ್ಯದಲ್ಲಿ ಭೀಕರ ಬರಗಾಲ ಆವರಿಸಿತ್ತು. ಅಂತಹ ಸಂದರ್ಭದಲ್ಲಿ ವಾಜಪೇಯಿ ಅವರು ಕಾಂಗ್ರೆಸ್‌ ಆಡಳಿತವಿರುವ ರಾಜ್ಯವೆಂದು ನಿರ್ಲಕ್ಷಿಸದೆ 2 ಲಕ್ಷ ಟನ್‌ ಅಕ್ಕಿ ಪೂರೈಸಿದರು’ ಎಂದು ಹೇಳಿದರು.

ವಾಜಪೇಯಿ ಅವರು 24 ಪಕ್ಷಗಳನ್ನು ಒಟ್ಟಿಗೆ ಸೇರಿಸಿಕೊಂಡು ಸುಮಾರು ನಾಲ್ಕುವರೆ ವರ್ಷಗಳ ಕಾಲ ಸರ್ಕಾರ ನಡೆಸಿದರು. ತಮ್ಮ ಅಧಿಕಾರಾವಧಿಯಲ್ಲಿ ನದಿ ಜೋಡಣೆ ಕಾರ್ಯ ಆರಂಭಗೊಳ್ಳಲಿಲ್ಲ ಎಂದು ತುಂಬಾ ನೊಂದುಕೊಂಡಿದ್ದರು. ಅವರ ತತ್ವಾದರ್ಶಗಳು ಎಲ್ಲರಿಗೂ ಮಾದರಿಯಾಗಲಿ. ಅವರು ಹಾಕಿಕೊಟ್ಟ ಮಾರ್ಗದಲ್ಲಿ ನಡೆಯೋಣ. ವಾಜಪೇಯಿ ಮತ್ತೊಮ್ಮೆ ಹುಟ್ಟಿಬರಲಿ ಎಂದು ಹಾರೈಸಿದರು.

ಬಿಜೆಪಿ ಮುಖಂಡರಾದ ರಾಜೇಂದ್ರ ಹರಕುಣಿ, ಉಜ್ವಲಾ ಬಡವಣಾಚೆ, ಎಂ.ಬಿ. ಝಿರಲಿ, ರಾಜು ಚಿಕ್ಕನಗೌಡರ, ಇತರರು ಭಾಗವಹಿಸಿದ್ದರು.

ಬರಹ ಇಷ್ಟವಾಯಿತೆ?

 • 1

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !