ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

’ವಾಲ್ಮೀಕಿ ಮೀಸಲಾತಿ: ಹೋರಾಟ ತೀವ್ರಗೊಳಿಸಲು ನಿರ್ಧಾರ‘

Last Updated 17 ಮೇ 2022, 11:15 IST
ಅಕ್ಷರ ಗಾತ್ರ

ಬೆಳಗಾವಿ: ‘ವಾಲ್ಮೀಕಿ ಸಮಾಜಕ್ಕೆ ಹೆಚ್ಚುವರಿ ಮೀಸಲಾತಿಗಾಗಿ ಮುಂದಿನ ದಿನಗಳಲ್ಲಿ ಹೋರಾಟ ತೀವ್ರಗೊಳಿಸಲು ನಿರ್ಧರಿಸಲಾಗಿದೆ. ಏನಾದರೂ ಅವಘಡ ಸಂಭವಿಸಿದರೆ ಅದಕ್ಕೆ ಬಿಜೆಪಿ ಸರ್ಕಾರವೆ ಹೊಣೆಯಾಗಬೇಕಾಗುತ್ತದೆ’ ಎಂದು ವಾಲ್ಮೀಕಿ ಸಮಾಜ ಜಿಲ್ಲಾ ಘಟಕದ ಅಧ್ಯಕ್ಷ ರಾಜಶೇಖರ ತಳವಾರ ಎಚ್ಚರಿಕೆ ನೀಡಿದರು.

ಇಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಂಗಳವಾರ ಮಾತನಾಡಿದ ಅವರು, ‘ಸ್ವಾಭಿಮಾನಿ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ ಹೆಚ್ಚುವರಿ ಮೀಸಲಾತಿ ಹೋರಾಟ ಕ್ರಿಯಾ ಸಮಿತಿ ವತಿಯಿಂದ ಹೋರಾಟ ನಡೆಸಲಾಗುತ್ತಿದೆ. 93 ದಿನಗಳಿಂದ ಬೆಂಗಳೂರಿನ ಸ್ವಾತಂತ್ರ್ಯ ಉದ್ಯಾನದಲ್ಲಿ ರಾಜನಹಳ್ಳಿ ವಾಲ್ಮೀಕಿ ಗುರುಪೀಠದ ಪೀಠಾಧಿಪತಿ ಪ್ರಸನ್ನಾನಂದಪುರಿ ಸ್ವಾಮೀಜಿ ಸತ್ಯಾಗ್ರಹ ಕೈಗೊಂಡಿದ್ದರೂ ಸರ್ಕಾರ ಸ್ಪಂದಿಸದಿರುವುದು ಖಂಡನೀಯ’ ಎಂದರು.

‘ದಲಿತ ಸಮುದಾಯದ ಏಳಿಗೆಗೆ ಪೂರಕವಾಗಿ ಶಿಕ್ಷಣ ಹಾಗೂ ಉದ್ಯೋಗದಲ್ಲಿ ಮೀಸಲಾತಿ ಹೆಚ್ಚಿಸಬೇಕು ಎನ್ನುವ ನ್ಯಾಯಮೂರ್ತಿ ಎಚ್.ಎನ್. ನಾಗಮೋಹನ್‌ದಾಸ್‌ ವರದಿಯ ಶಿಫಾರಸುಗಳನ್ನು ಜಾರಿಗೊಳಿಸಬೇಕು. ಈ ನಿಟ್ಟಿನಲ್ಲಿ ಕ್ರಿಯಾ ಸಮಿತಿಯಿಂದ ರಾಜ್ಯದಾದ್ಯಂತ ಪ್ರವಾಸ ಮಾಡಿ ಜನ ಜಾಗೃತಿ ಅಭಿಯಾನ ಕೈಗೊಂಡಿದ್ದಾರೆ’ ಎಂದು ತಿಳಿಸಿದರು.

‘ಹಲವು ದಿನಗಳ ಹಿಂದೆ ಜಲಸಂಪನ್ಮೂಲ ಸಚಿವ ಗೋವಿಂದ ಕಾರಜೋಳ ಅವರ ನೇತೃತ್ವದಲ್ಲಿ ಸರ್ಕಾರದ ಪ್ರತಿನಿಧಿಗಳು ಶ್ರೀಗಳನ್ನು ಭೇಟಿಯಾಗಿ, ಹದಿನೈದು ದಿನಗಳ ಒಳಗೆ ಹೆಚ್ಚುವರಿ ಮೀಸಲಾತಿಯ ಭರವಸೆ ನೀಡಿದ್ದರು. ಅವರ ಮಾತು ಹುಸಿಯಾಗಿದೆ. ಮುಖ್ಯಮಂತ್ರಿ ವಚನ ಭ್ರಷ್ಟರಾಗಿದ್ದಾರೆ. ಬಿಜೆಪಿ ಸರ್ಕಾರ ದಲಿತ ಸಮುದಾಯದ ಕತ್ತು ಹಿಸುಕುವ ಕೆಲಸ ಮಾಡುತ್ತಿದೆ’ ಎಂದು ದೂರಿದರು.

‘ಮೇ 20ರಂದು ಸ್ವಾಮೀಜಿ ಅವರಿಗೆ ನೈತಿಕ ಬೆಂಬಲ ವ್ಯಕ್ತಪಡಿಸಿ ರಾಷ್ಟ್ರೀಯ ಹೆದ್ದಾರಿ ತಡೆದು ಪ್ರತಿಭಟನೆ ನಡೆಸಿ, ಜಿಲ್ಲಾಧಿಕಾರಿ ಕಚೇರಿಗೆ ಮನವಿ ಸಲ್ಲಿಸಲಾಗುವುದು’ ಎಂದರು.

ಸಮಾಜದ ಜಿಲ್ಲಾ ಘಟಕದ ಪ್ರಧಾನ ಕಾರ್ಯದರ್ಶಿ ದಿನೇಶ್ ಚಂದ್ರಶೇಖರ ಬಾಗಡೆ, ಮುಖಂಡರಾದ ಹೂವಪ್ಪ ಕಲ್ಲೂರ, ಸುನೀಲ್‌ ಸನಕೆ, ಬಸವರಾಜ ದೊಡಮನಿ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT