ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ರಾಮಾಯಣ ಮನುಕುಲದ ದಾರಿದೀಪ’

ಜಿಲ್ಲಾಡಳಿತದಿಂದ ಮಹರ್ಷಿ ವಾಲ್ಮೀಕಿ ಜಯಂತ್ಯುತ್ಸವ
Last Updated 31 ಅಕ್ಟೋಬರ್ 2020, 13:54 IST
ಅಕ್ಷರ ಗಾತ್ರ

ಬೆಳಗಾವಿ: ‘ರಾಮಾಯಣ ಮಾನವ ಕುಲದ ದಾರಿದೀಪವಾಗಿದೆ. ಪ್ರತಿಯೊಂದು ಸಮಸ್ಯೆಗಳಿಗೂ ಅದರಲ್ಲಿ ಪರಿಹಾರವಿದೆ’ ಎಂದು ನಿಪ್ಪಾಣಿಯ ವಿಎಸ್‌ಎಂ ಕಾಲೇಜಿನ ಉಪನ್ಯಾಸಕ ಡಾ.ನಿಂಗಪ್ಪ ಎಸ್. ಮಾದಣ್ಣವರ ತಿಳಿಸಿದರು.

ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ಮಹಾನಗರ ಪಾಲಿಕೆ ಹಾಗೂ ಪರಿಶಿಷ್ಟ ಪಂಗಡಗಳ ಕಲ್ಯಾಣ ಇಲಾಖೆ ಆಶ್ರಯದಲ್ಲಿ ಇಲ್ಲಿನ ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿ ಶನಿವಾರ ಆಯೋಜಿಸಿದ್ದ ಮಹರ್ಶಿ ವಾಲ್ಮೀಕಿ ಜಯಂತ್ಯುತ್ಸವದಲ್ಲಿ ಉಪನ್ಯಾಸ ನೀಡಿದರು.

‘ರಾಮಾಯಣದಲ್ಲಿ ಬರುವು ಅರಣ್ಯ ಸನ್ನಿವೇಶವನ್ನು ಎಲ್ಲರೂ ಅರ್ಥ ಮಾಡಿಕೊಂಡರೆ ದೇಶದಲ್ಲಿ ರೈತರ ಆತ್ಮಹತ್ಯೆ ಪ್ರಕರಣಗಳನ್ನು ತಡೆಯಬಹುದು. ಪರಿಸರಕ್ಕೆ ಧಕ್ಕೆ ಆಗದಂತೆ ಎಲ್ಲರೂ ನೋಡಿಕೊಂಡರೆ ಮಾನವ ಕುಲದ ಆರೋಗ್ಯದ ಮೇಲೆ ಯಾವುದೇ ಕೆಟ್ಟ ಪರಿಣಾಮ ಆಗುವುದಿಲ್ಲ’ ಎಂದು ಅಭಿಪ್ರಾಯಪಟ್ಟರು.

‘ರಾಮಾಯಣದಲ್ಲಿರುವ ಆದರ್ಶಗಳನ್ನು ಕಟ್ಟುನಿಟ್ಟಾಗಿ ಪಾಲಿಸಿದರೆ ದೇಶದಲ್ಲಿ ಯಾವುದೇ ಭಯಾನಕ ರೋಗಗಳು ಬರುತ್ತಿರಲಿಲ್ಲ. ಭಾರತೀಯರಾಗಿ ನಾವೆಲ್ಲರೂ ಒಂದಾಗಿ ಬಾಳುವುದನ್ನು ಕಲಿಯಬೇಕು’ ಎಂದರು.

‘ವಾಲ್ಮೀಕಿ ಅವರನ್ನು ಒಂದು ಸಮಾಜಕ್ಕೆ ಸೀಮಿತಗೊಳಿಸಬಾರದು. ಅವರ ತತ್ವಗಳನ್ನು ಎಲ್ಲರೂ ಪಾಲನೆ ಮಾಡಬೇಕು’ ಎಂದು ಸಲಹೆ ನೀಡಿದರು.

ಸಾನ್ನಿಧ್ಯ ವಹಿಸಿದ್ದ ಚರಂತೇಶ್ವರ ವಿರಕ್ತಮಠದ ಶರಣಬಸವ ದೇವರು, ‘ಭಾರತ ವಿವಿಧತೆಯಲ್ಲಿ ಏಕತೆ ಕಾಣುವ ದೇಶ. ಎಲ್ಲರೂ ಒಂದಾದರೆ ಗಲಭೆಗಳು ನಡೆಯಲಾರವು. ಬಲಹೀನರನ್ನು ಹೆದರಿಸಬಾರದು. ಅವರನ್ನು ಎಲ್ಲರ ಜತೆ ಬೆಳೆಯಲು ಬಿಡಬೇಕು. ಇದಕ್ಕಾಗಿ ಮಹಾಪುರುಷರ ಆದರ್ಶ ಪಾಲಿಸಬೇಕು’ ಎಂದು ಆಶಿಸಿದರು.

ಜಿಲ್ಲಾ ಪಂಚಾಯಿತಿ ಅಧ್ಯಕ್ಷೆ ಆಶಾ ಐಹೊಳೆ, ಉಪಾಧ್ಯಕ್ಷ ಅರುಣ ಕಟಾಂಬಳೆ, ಎಪಿಎಂಸಿ ಅಧ್ಯಕ್ಷ ಯುವರಾಜ ಕದಂ, ಜಿಲ್ಲಾಧಿಕಾರಿ ಎಂ.ಜಿ. ಹಿರೇಮಠ, ಜಿಲ್ಲಾ ಪಂಚಾಯಿತಿ ಸಿಇಒ ದರ್ಶನ ಎಚ್.ವಿ., ನಗರ ಪೊಲೀಸ್ ಆಯುಕ್ತ ಕೆ. ತ್ಯಾಗರಾಜನ್, ಹೆಚ್ಚುವರಿ ಜಿಲ್ಲಾಧಿಕಾರಿ ಅಶೋಕ ದುಡಗುಂಟಿ, ಮಹಾನಗರ ಪಾಲಿಕೆ ಆಯುಕ್ತ ಜಗದೀಶ ಕೆ.ಎಚ್., ಸಮಾಜ ಕಲ್ಯಾಣ ಇಲಾಖೆ ಜಂಟಿ ನಿರ್ದೇಶಕಿ ಡಾ.ಉಮಾ ಸಾಲಿಗೌಡರ ಇದ್ದರು.

ಇದಕ್ಕೂ ಮುನ್ನ, ಕೋಟೆ ಕರೆ ಬಳಿಯಿಂದ ಮೆರವಣಿಗೆ ನಡೆಯಿತು. ಶಾಸಕ ಅನಿಲ ಬೆನಕೆ, ಜಿಲ್ಲಾ ಪಂಚಾಯಿತಿ ಉಪಾಧ್ಯಕ್ಷ ಅರುಣ ಕಟಾಂಬಳೆ ಮೊದಲಾದವರು ಫೋಟೊಗೆ ಪೂಜೆ ಸಲ್ಲಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT