ಮೌಲ್ಯಯುತ ಶಿಕ್ಷಣ ಇಂದಿನ ಅಗತ್ಯ

7
ಎಸ್‌ಕೆಇ ಸೊಸೈಟಿ ಸಂಸ್ಥಾಪನಾ ದಿನಾಚರಣೆ

ಮೌಲ್ಯಯುತ ಶಿಕ್ಷಣ ಇಂದಿನ ಅಗತ್ಯ

Published:
Updated:
Deccan Herald

ಬೆಳಗಾವಿ: ಮೌಲ್ಯಯುತ ಶಿಕ್ಷಣ ಇಂದಿನ ಅಗತ್ಯವಾಗಿದೆ ಎಂದು ನಿವೃತ್ತ ಐಪಿಎಸ್ ಅಧಿಕಾರಿ ಟಿ.ಜಿ. ಕೃಷ್ಣಭಟ್‌ ಹೇಳಿದರು.

ಇಲ್ಲಿನ ಆರ್‌ಪಿಡಿ ಕಾಲೇಜಿನ ಕೆ.ಎಂ. ಗಿರಿ ಸಭಾಂಗಣದಲ್ಲಿ ಸೋಮವಾರ ನಡೆದ ದಕ್ಷಿಣ ಕೊಂಕಣ ಶಿಕ್ಷಣ (ಎಸ್‌ಕೆಇ) ಸೊಸೈಟಿಯ ಸಂಸ್ಥಾಪನಾ ದಿನಾಚರಣೆ ಕಾರ್ಯಕ್ರಮದಲ್ಲಿ ‘ಮೌಲ್ಯ ನಿರ್ಮಾಣ ಹಾಗೂ ಉದ್ಯೋಗ ಅವಕಾಶಗಳು’ ಕುರಿತು ಅವರು ಉಪನ್ಯಾಸ ನೀಡಿದರು.

‘ಮೌಲ್ಯಗಳ ಮಹತ್ವ ಅರಿಯದೆ ಸಮಾಜದಲ್ಲಿ ಸುಸ್ಥಿರ ಅಭಿವೃದ್ಧಿ ಅಸಾಧ್ಯ. ಪಠ್ಯಪುಸ್ತಕದಲ್ಲಿ ಈ ವಿಷಯ ಅಳವಡಿಸಬೇಕು’ ಎಂದು ಸಲಹೆ ನೀಡಿದರು.

‘ಉತ್ತಮ ವ್ಯಕ್ತಿತ್ವ ಹಾಗೂ ಸಂಸ್ಕಾರ ರೂಢಿಸಿಕೊಳ್ಳುವುದು ಬಹಳ ಮುಖ್ಯ. ಹಿರಿಯರು ಮತ್ತು ಗುರುಗಳನ್ನು ಗೌರವಿಸುವ ಗುಣವನ್ನು ಯುವಜನರು ಅಳವಡಿಸಿಕೊಳ್ಳಬೇಕು. ಮಾನವೀಯ ಗುಣಗಳನ್ನು ಬೆಳೆಸಿಕೊಳ್ಳಬೇಕು. ಕಷ್ಟದಲ್ಲಿರುವವರ ಬಗ್ಗೆ ಅನುಕಂಪ ಹೊಂದಿರಬೇಕು. ಎಲ್ಲರೂ ನಮ್ಮವರೇ ಎಂದು ಭಾವಿಸಬೇಕು. ದೇಶದ ಶ್ರೀಮಂತ ಸಂಪ್ರದಾಯ, ಪರಂಪರೆ ಮುಂದುವರಿಸಿಕೊಂಡು ಹೋಗುವ ಜೊತೆಗೆ ಅಖಂಡತೆಯನ್ನು ಕಾಪಾಡಬೇಕು’ ಎಂದು ತಿಳಿಸಿದರು.

ಮಕ್ಕಳಿದ್ದಾಗಿನಿಂದಲೇ ತಿಳಿಸಬೇಕು: ‘ನಮ್ಮ ಮಾತೃ ಭೂಮಿ, ಮಾತೃಭಾಷೆಯನ್ನು ಯಾವುದೇ ಕಾರಣಕ್ಕೂ ಮರೆಯಬಾರದು. ಮಕ್ಕಳಿದ್ದಾಗಿನಿಂದಲೇ ಮೌಲ್ಯಗಳ ಬಗ್ಗೆ ತಿಳಿಸಿಕೊಡಬೇಕು. ನಮ್ಮ ಸಂಸ್ಕಾರ, ಸಂಸ್ಕೃತಿಗಳ ಬಗ್ಗೆ ಅರಿವು ಮೂಡಿಸಬೇಕು. ಮಕ್ಕಳು ಶಿಕ್ಷಕರು ಹೇಳುವುದನ್ನು ನಂಬುತ್ತಾರೆ, ಅನುಸರಿಸುತ್ತಾರೆ. ಹೀಗಾಗಿ ಶಿಕ್ಷಕರ ಮೇಲೆ ಬಹಳ ಜವಾಬ್ದಾರಿ ಇದೆ’ ಎಂದರು.

‘ಇತ್ತೀಚಿನ ವರ್ಷಗಳಲ್ಲಿ, ಸಣ್ಣಪುಟ್ಟ ಸೋಲುಗಳಿಗೂ ವಿದ್ಯಾರ್ಥಿಗಳು ಆತ್ಮಹತ್ಯೆ ಮಾಡಿಕೊಳ್ಳುವುದು ಕಂಡುಬರುತ್ತಿದೆ. ಸವಾಲುಗಳನ್ನು ಸಮರ್ಥವಾಗಿ ಎದುರಿಸುವ ಧೈರ್ಯವನ್ನು ಮಕ್ಕಳಲ್ಲಿ ಮೂಡಿಸುವ ಕೆಲಸವನ್ನು ಶಿಕ್ಷಕರು ಹಾಗೂ ಪೋಷಕರು ಮಾಡಬೇಕಾದ ಅಗತ್ಯವಿದೆ’ ಎಂದು ಅಭಿಪ್ರಾಯಪಟ್ಟರು.

‘ಕೇಂದ್ರ ಲೋಕಸೇವಾ ಆಯೋಗ ನಡೆಸುವ ನಾಗರಿಕ ಸೇವಾ ಪರೀಕ್ಷೆ ಎದುರಿಸಲು ವಿದ್ಯಾರ್ಥಿಗಳು ಸಜ್ಜಾಗಬೇಕು. ಪ‍್ರಚಲಿತ ವಿದ್ಯಮಾನಗಳ ಬಗ್ಗೆ ಅರಿವು ಹೊಂದಬೇಕು’ ಎಂದು ಕಿವಿಮಾತು ಹೇಳಿದರು.

ರಾಣಿ ಪಾರ್ವತಿದೇವಿ ಮೊಮ್ಮಗ ಖೇಮರಾಜ್ ಸಾವಂತ ಭೋಸಲೆ, ‘ಮಾನವೀಯ ಮತ್ತು ಸಮಾಜಮುಖಿ ಧೋರಣೆ ಹೊಂದಿದ ರಾಜ ಮನೆತನ ನಮ್ಮದು. ಈ ನಿಟ್ಟಿನಲ್ಲಿಯೇ ಶಿಕ್ಷಣ ಸಂಸ್ಥೆಗಳನ್ನು ಹುಟ್ಟು ಹಾಕಿ ಸಮಾಜ ಸೇವೆ ಸಲ್ಲಿಸುತ್ತಿದೆ’ ಎಂದು ತಿಳಿಸಿದರು.

ಈಚೆಗೆ ನಿಧನರಾದ ರಾಣಿ ಪಾರ್ವತಿದೇವಿ ಅವರಿಗೆ ಶ್ರದ್ಧಾಂಜಲಿ ಸಲ್ಲಿಸಲಾಯಿತು.

ಸಂಸ್ಥೆಯ ಅಧ್ಯಕ್ಷ ಸೇವಂತಿಲಾಲ್ ಶಹಾ, ಕಾರ್ಯದರ್ಶಿಗಳಾದ ಆರ್.ಬಿ. ದೇಶಪಾಂಡೆ ಇದ್ದರು.

ಸಂಸ್ಥೆ ಉಪಾಧ್ಯಕ್ಷ ಎಸ್.ವಿ. ಶಾನಭಾಗ ಅಧ್ಯಕ್ಷತೆ ವಹಿಸಿದ್ದರು. ಅನುಶಾ ಆಪ್ಟೆ ಸ್ವಾಗತಗೀತೆ ಹಾಡಿದರು. ಪ್ರೊ.ಎಸ್‌.ಎಸ್. ಶಿಂಧೆ ಸ್ವಾಗತಿಸಿದರು. ಪ್ರಾಚಾರ್ಯರಾದ ಅಚಲಾ ದೇಸಾಯಿ ಪರಿಚಯಿಸಿದರು. ಲತಾ ಕಿತ್ತೂರ ಪ್ರಾಸ್ತಾವಿಕ ಮಾತನಾಡಿದರು. ಆರ್.ವಿ. ಭಟ್ ವಂದಿಸಿದರು.

Tags: 

ಬರಹ ಇಷ್ಟವಾಯಿತೆ?

 • 1

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !