ಮಂಗಳವಾರ, ಮಾರ್ಚ್ 2, 2021
31 °C
ಅಂಗನವಾಡಿ ಕಾರ್ಯಕರ್ತೆಯರು ಮತ್ತು ಸಹಾಯಕಿಯರಿಂದ ಧರಣಿ

ವಿವಿಧ ಬೇಡಿಕೆ ಈಡೇರಿಕೆ ಆಗ್ರಹ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಬೆಳಗಾವಿ: ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ರಾಜ್ಯ ಅಂಗನವಾಡಿ ಕಾರ್ಯಕರ್ತೆಯರು ಮತ್ತು ಸಹಾಯಕಿಯರ ಫೆಡರೇಷನ್‌ನ ಜಿಲ್ಲಾ ಘಟಕದ ಸದಸ್ಯರು ಇಲ್ಲಿನ ಜಿಲ್ಲಾಧಿಕಾರಿ ಕಚೇರಿ ಆವರಣದಲ್ಲಿ ಶುಕ್ರವಾರ ಧರಣಿ ನಡೆಸಿದರು.

ಸಂಘದ ಉಪಾಧ್ಯಕ್ಷೆ ಮೀನಾಕ್ಷಿ ಕೋಟಗಿ ಮಾತನಾಡಿ, ‘ಸರ್ಕಾರಿ ಪ್ರಾಥಮಿಕ ಶಾಲೆಗಳಲ್ಲಿ ಎಲ್‌ಕೆಜಿ ಹಾಗೂ ಯುಕೆಜಿ ತರಗತಿಗಳನ್ನು ತೆರೆಯುವ ಬದಲು, ಅಂಗನವಾಡಿಗಳಲ್ಲೇ ಆರಂಭಿಸಬೇಕು. ಮಕ್ಕಳಿಗೆ ಇಂಗ್ಲಿಷ್‌ ಕಲಿಸುವ ಜ್ಞಾನ ಅಂಗನವಾಡಿಗಳ ಕಾರ್ಯಕರ್ತೆಯರಿಗೆ ಇದೆ. ಸರ್ಕಾರ ಕಾರ್ಯಕರ್ತೆಯರನ್ನು ಕೀಳಾಗಿ ಕಾಣಬಾರದು. ರಾಜ್ಯದಲ್ಲಿರುವ ಎಲ್ಲ ಅಂಗನವಾಡಿ ಕೇಂದ್ರಗಳು ಹಾಗೂ ಮಿನಿ ಅಂಗನವಾಡಿ ಕೇಂದ್ರಗಳನ್ನು ಕಿನ್ನರ ಗಾರ್ಡನಗಳನ್ನಾಗಿ ಮಾರ್ಪಡಿಸಿ ಇಂಗ್ಲಿಷ್‌ ನರ್ಸರಿ ಶಾಲೆಗಳನ್ನಾಗಿ ಪರಿವರ್ತಿಸಬೇಕು’ ಎಂದು ಒತ್ತಾಯಿಸಿದರು. 

‘ಎರಡೂವರೆ ವರ್ಷದ ಮಕ್ಕಳನ್ನು ಈ ಶಾಲೆಗಳಲ್ಲಿ ಸೇರಿಸಿಕೊಳ್ಳಲು ಸರ್ಕಾರ ಆದೇಶ ಹೊರಡಿಸಬೇಕು. ಪುಸ್ತಕ, ಸಮವಸ್ತ್ರ ಸೇರಿ ಮಕ್ಕಳಿಗೆ ಅಗತ್ಯ ಸಾಮಗ್ರಿಗಳನ್ನು ವಿತರಿಸಬೇಕು. ಅಂಗನವಾಡಿಯಿಂದ ಪ್ರಮಾಣಪತ್ರ ನೀಡುವ ಮಕ್ಕಳನ್ನು ಮಾತ್ರ ಪ್ರಾಥಮಿಕ ಶಾಲೆಗಳಿಗೆ ಸೇರಿಸಿಕೊಳ್ಳುವಂತೆ ನಿಯಮ ರೂಪಿಸಬೇಕು’ ಎಂದು ಆಗ್ರಹಿಸಿದರು.

ಗೌರವಧನ ಹೆಚ್ಚಿಸಿ: ‘ಕಾರ್ಯಕರ್ತೆಯರು ಹಾಗೂ ಸಹಾಯಕಿಯರಿಗೆ ಸೇವಾ ಅವಧಿಯ ಆಧಾರದ ಮೇಲೆ ಗೌರವಧನ (ವೇತನ) ನೀಡಬೇಕು. ಅಂಗನವಾಡಿಯ ನಿವೃತ್ತ ನೌಕರರಿಗೆ ಅನೇಕ ವರ್ಷಗಳಿಂದ ಪಿಂಚಣಿ ಕೊಟ್ಟಿಲ್ಲ. ಇದರಿಂದ ಅವರ ಕುಟುಂಬ ನಿರ್ವಹಣೆಗೆ ದುಸ್ತರವಾಗಿದೆ. ಹೀಗಾಗಿ, ಕೂಡಲೇ ಪಿಂಚಣಿ ಹಣವನ್ನು ಕೊಡಬೇಕು. ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಅವರು ಚುನಾವಣೆಯ ಪ್ರಣಾಳಿಕೆಯಲ್ಲಿ ಘೋಷಿಸಿರುವಂತೆ ಅಂಗನವಾಡಿಯ ನಿವೃತ್ತ ನೌಕರರಿಗೆ ಪ್ರತಿ ತಿಂಗಳು 6,000 ಪಿಂಚಣಿ ನೀಡಬೇಕು. ಈ ಬಗ್ಗೆ ಪಸಕ್ತ ಬಜೆಟ್‌ನಲ್ಲಿ ಘೋಷಣೆ ಮಾಡಬೇಕು’ ಎಂದು ಒತ್ತಾಯಿಸಿದರು.  

ಮನವಿ: ‘ಈ ಎಲ್ಲ ಬೇಡಿಕೆಗಳನ್ನು ಕೂಡಲೇ ಈಡೇರಿಸುವಂತೆ ಆಗ್ರಹಿಸಿ ಎಲ್ಲ ಜಿಲ್ಲೆ ಹಾಗೂ ತಾಲ್ಲೂಕು ಕೇಂದ್ರಗಳಲ್ಲಿ ಜು.5 ಮತ್ತು 6ರಂದು ಅಹೋರಾತ್ರಿ ಧರಣಿ ನಡೆಸಲಾಗುವುದು’ ಎಂದು ಹೇಳಿದರು.

ಮಳೆಯ ನಡುವೆಯೂ ಬೆಳಿಗ್ಗೆಯಿಂದ ಸಂಜೆಯವರೆಗೂ ಧರಣಿ ನಡೆಸಿದರು. ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಿದರು. ಯಲ್ಲಾಬಾಯಿ ಶೀಗಿಹಳ್ಳಿ, ಅನಿತಾ ಕಾಮನ್ನಾಚೆ, ಸಾವಿತ್ರಿ.ಡಿ ಸೇರಿ ನೂರಾರು ಕಾರ್ಯಕರ್ತೆಯರು ಭಾಗವಹಿಸಿದ್ದರು.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು