ಮಂಗಳವಾರ, ಮಾರ್ಚ್ 9, 2021
26 °C
ಕೃಷಿ ವಿರೋಧಿ ನೀತಿಗಳಿಗೆ ರೈತರು, ವಿವಿಧ ಸಂಘಟನೆಗಳ ಆಕ್ರೋಶ

ಬೆಳಗಾವಿ: ಸರ್ಕಾರಗಳ ವಿರುದ್ಧ ಬೃಹತ್‌ ಪ್ರತಿಭಟನೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಬೆಳಗಾವಿ: ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಕೃಷಿ ಹಾಗೂ ಎಪಿಎಂಸಿಗೆ ಸಂಬಂಧಿಸಿದಂತೆ ಹೊರಡಿಸಿರುವ ತಿದ್ದುಪಡಿ ಮಸೂದೆಗಳನ್ನು ಖಂಡಿಸಿ ರೈತ, ಕಾರ್ಮಿಕ, ಕನ್ನಡ ಪರ ಸಂಘಟನೆಗಳ ಕಾರ್ಯಕರ್ತರು ನಗರದಲ್ಲಿ ಸೋಮವಾರ ಬೃಹತ್‌ ಪ್ರತಿಭಟನಾ ಮೆರವಣಿಗೆ ನಡೆಸಿದರು.

ರಾಣಿ ಚನ್ನಮ್ಮ ವೃತ್ತಕ್ಕೆ ಬಂದು ಸಮಾವೇಶಗೊಂಡ ಸಂಘಟನೆಗಳ ಮುಖಂಡರು ಹಾಗೂ ಕಾರ್ಯಕರ್ತರು, ಸರ್ಕಾರಗಳ ವಿರುದ್ಧ ತೀವ್ರ ಆಕ್ರೋಶ ವ್ಯಕ್ತಪಡಿಸಿದರು. ಕೊರೊನಾ ಬಿಕ್ಕಟ್ಟಿನ ಸಂದರ್ಭ ಬಳಸಿಕೊಂಡು ಕಾಯ್ದೆಗಳಿಗೆ ತಿದ್ದುಪಡಿ ತಂದಿರುವುದು ಖಂಡನೀಯ ಎಂದು ಧಿಕ್ಕಾರ ಕೂಗಿದರು. ‘ನಮ್ಮ ಭೂಮಿ ನಮ್ಮ ಹಕ್ಕು’ ಎಂಬಿತ್ಯಾದಿ ಘೋಷಣೆಗಳು ಮೊಳಗಿದವು.

ಕೆಲವರು ನೇಗಿಲುಗಳನ್ನು ಹೊತ್ತು ಮೆರವಣಿಗೆಯಲ್ಲಿ ಪಾಲ್ಗೊಂಡಿದ್ದರು. ರೈತ ಮಹಿಳೆಯರು ಪೊರಕೆಗಳನ್ನು ಪ್ರದರ್ಶಿಸಿ, ಆಕ್ರೋಶ ದಾಖಲಿಸಿದರು. ಕೆಲವು ರೈತರು ಅರೆಬೆತ್ತಲೆಯಾಗಿ ಭಾಗವಹಿಸಿದ್ದರು.

ಚನ್ನಮ್ಮ ವೃತ್ತದಲ್ಲಿ ಕೆಲವರು ಹಳೆಯ ಟೈರ್‌ಗೆ ಬೆಂಕಿ ಹಚ್ಚಲು ಯತ್ನಿಸಿದರು. ಟೈರ್ ಕಸಿದುಕೊಳ್ಳಲು ಮುಂದಾದ ಸಂದರ್ಭದಲ್ಲಿ ಪೊಲೀಸರು ಕೆಳಗೆ ಬಿದ್ದರು.  ಅವರನ್ನು ಪೊಲೀಸರು ಹಾಗೂ ರೈತ ಮುಖಂಡರು ಮೇಲೆತ್ತಿದರು.

ರಾಣಿ ಚನ್ನಮ್ಮ ವೃತ್ತದಿಂದ ಸಂಗೊಳ್ಳಿರಾಯಣ್ಣ ವೃತ್ತ–ಹಳೆ ಪಿ.ಬಿ. ರಸ್ತೆ–ಯಡಿಯೂರಪ್ಪ ಮಾರ್ಗದ ಮೂಲಕ ಅಲಾರವಾಡ ಬಳಿ ರಾಷ್ಟ್ರೀಯ ಹೆದ್ದಾರಿ  ತಲುಪಿದ ಪ್ರತಿಭಟನಾಕಾರರು, ಪ್ರಧಾನಿ ನರೇಂದ್ರ ಮೋದಿ ಹಾಗೂ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಪ್ರತಿಕೃತಿಯ ಅಣಕು ಶವಯಾತ್ರೆ ನಡೆಸಿದರು. ‘ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಕೃಷಿಕರ ಪಾಲಿಗೆ ಸತ್ತು ಹೋಗಿವೆ’ ಎಂದು ಆರೋಪಿಸಿ ಬಾಯಿ ಬಡಿದುಕೊಳ್ಳುತ್ತಾ ಸಾಗಿದ್ದರು. ತಡೆಯಲು ಬಂದ ಪೊಲೀಸರೊಂದಿಗೆ ವಾಗ್ವಾದ ನಡೆಸಿದರು. ಪರಿಸ್ಥಿತಿ ನಿಯಂತ್ರಿಸಲು ಪೊಲೀಸರು ಹರಸಾಹಸಪಡಬೇಕಾಯಿತು. ನಗರ ಪೊಲೀಸ್ ಆಯುಕ್ತ ತ್ಯಾಗರಾಜನ್  ಹಾಗೂ ಡಿಸಿಪಿ ವಿಕ್ರಮ್ ಅಮಟೆ ಬಂದೋಬಸ್ತ್‌ಗಾಗಿ ಸ್ವತಃ ರಸ್ತೆಗಿಳಿದಿದ್ದರು.

ನಂತರ ಸುವರ್ಣ ವಿಧಾನಸೌಧಕ್ಕೆ ಮುತ್ತಿಗೆ ಹಾಕಲು ಮುಂದಾದ ಪ್ರತಿಭಟನಾಕಾರರನ್ನು ಪೊಲೀಸರು ವಶಕ್ಕೆ ಪಡೆದು ನಂತರ ಬಿಡುಗಡೆ ಮಾಡಿದರು.

ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ಸಂಚಾಲಕರಾದ ಚೂನಪ್ಪ ಪೂಜಾರಿ, ಜಯಶ್ರೀ ಗುರಣ್ಣವರ, ಜಿಲ್ಲಾ ಘಟಕದ ಅಧ್ಯಕ್ಷ ರಾಘವೇಂದ್ರ ನಾಯ್ಕ,  ಕರವೇ ಸಂಚಾಲಕ ಮಹಾದೇವ ತಳವಾರ, ಜಿಲ್ಲಾ ಘಟಕದ ಅಧ್ಯಕ್ಷ ದೀಪಕ ಗುಡಗನಟ್ಟಿ, ಕರ್ನಾಟಕ ನವನಿರ್ಮಾಣ ಸೇನೆ ಜಿಲ್ಲಾ ಘಟಕದ ಅಧ್ಯಕ್ಷ ಬಾಬು ಸಂಗೋಡಿ, ಎಐಟಿಎಸ್‌ಒ, ರೈತ ಕೂಲಿ ಕಾರ್ಮಿಕರ ಸಂಘಟನೆ ಮುಖಂಡರು ನೇತೃತ್ವ ವಹಿಸಿದ್ದರು.

ಮುಂಜಾಗ್ರತಾ ಕ್ರಮವಾಗಿ ಚನ್ನಮ್ಮ ಪಡೆ ಸೇರಿದಂತೆ ಪೊಲೀಸ್‌ ಬಂದೋಬಸ್ತ್ ಮಾಡಲಾಗಿತ್ತು.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು