ಶನಿವಾರ, ಡಿಸೆಂಬರ್ 7, 2019
21 °C

ಅಧಿವೇಶನ | ಸುವರ್ಣ ವಿಧಾನಸೌಧಕ್ಕೆ ಕುರಿಗಳನ್ನು ನುಗ್ಗಿಸಿ ಪ್ರತಿಭಟನೆ: ವಾಟಾಳ್‌

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಬೆಳಗಾವಿ: ವಿಧಾನಮಂಡಲ ಚಳಿಗಾಲದ ಅಧಿವೇಶನವನ್ನು ಬೆಂಗಳೂರಿನಲ್ಲಿ ನಡೆಸುವುದನ್ನು ಖಂಡಿಸಿ ಮತ್ತು ಸಂತ್ರಸ್ತರಿಗೆ ಹೆಚ್ಚಿನ ಪರಿಹಾರ ಕಲ್ಪಿಸುವಂತೆ ಆಗ್ರಹಿಸಿ ಕನ್ನಡ ಚಳವಳಿ ವಾಟಾಳ್‌ ಪಕ್ಷದ ಅಧ್ಯಕ್ಷ ವಾಟಾಳ್‌ ನಾಗರಾಜ್‌ ಅವರು ಇಲ್ಲಿನ ಕಿತ್ತೂರು ರಾಣಿ ಚನ್ನಮ್ಮ ವೃತ್ತದಲ್ಲಿ ಮಲಗಿ ಭಾನುವಾರ ಪ್ರತಿಭಟಿಸಿದರು.

‘ನೆರೆಯಿಂದಾಗಿ ಇಡೀ ಉತ್ತರ ಕರ್ನಾಟಕವೇ ಮುಳುಗಿ ಹೋಗಿದೆ. ಜನರು ಸಂಕಷ್ಟದಲ್ಲಿದ್ದಾರೆ. ಅವುಗಳಿಗೆ ಪರಿಹಾರ ಕಂಡುಕೊಳ್ಳಲು ಚರ್ಚಿಸುವುದಕ್ಕಾಗಿ ಬೆಳಗಾವಿಯ ಸುವರ್ಣ ವಿಧಾನಸೌಧದಲ್ಲಿ ಅಧಿವೇಶನ ನಡೆಸಬೇಕಿತ್ತು. ಸರ್ಕಾರ ಇನ್ನಾದರೂ ಈ ನಿಟ್ಟಿನಲ್ಲಿ ಕ್ರಮ ಕೈಗೊಳ್ಳಬೇಕು. ಇಲ್ಲವಾದಲ್ಲಿ ಬೆಂಗಳೂರಲ್ಲಿ ಅಧಿವೇಶನ ಆರಂಭದ ದಿನವಾದ ಅ.14ರಂದು ಇಲ್ಲಿನ ಸುವರ್ಣ ವಿಧಾನಸೌಧಕ್ಕೆ ಕುರಿಗಳನ್ನು ನುಗ್ಗಿಸಿ ‘ಕುರಿ ಸಮ್ಮೇಳನ’ ಮಾಡಲಾಗುವುದು’ ಎಂದು ತಿಳಿಸಿದರು.

‘ರಾಜ್ಯದಲ್ಲಿ ಪ್ರವಾಹದಿಂದ ಆಗಿರುವ ಅನಾಹುತವನ್ನು ನೋಡಲು ಪ್ರಧಾನಿ ನರೇಂದ್ರ ಮೋದಿ ಬರಬೇಕಿತ್ತು. ಬರದೇ ಬೇಜವಾಬ್ದಾರಿ ಮೆರೆಯುವುದರೊಂದಿಗೆ ಕರ್ನಾಟಕವನ್ನು ಕಡೆಗಣಿಸಿದ್ದಾರೆ. ಇಲ್ಲಿಂದ ಆಯ್ಕೆಯಾಗಿ ಹೋಗಿರುವ ಸಂಸದರು ಕೂಡ ಒತ್ತಡ ಹಾಕಿಲ್ಲ. ಸಂಸದರು ಹಾಗೂ ಕೇಂದ್ರ ಸಚಿವರಿಗೆ ಮಾನ–ಮರ್ಯಾದೆ ಇದ್ದರೆ ಕೂಡಲೇ ತಮ್ಮ ಸ್ಥಾನಗಳಿಗೆ ರಾಜೀನಾಮೆ ನೀಡಬೇಕು’ ಎಂದು ಒತ್ತಾಯಿಸಿದರು.

‘ನಿಮಗೆ ₹ 10ಸಾವಿರ ಪರಿಹಾರ ಕೊಟ್ಟಿದ್ದೇ ಹೆಚ್ಚಾಯ್ತು ಎಂದು ಸಚಿವ ಕೆ.ಎಸ್. ಈಶ್ವರಪ್ಪ ಹೇಳಿರುವುದು ಖಂಡನೀಯ. ಇಂತಹ ಬೇಜವಾಬ್ದಾರಿ ಹೇಳಿಕೆಗಳನ್ನು ನೀಡಬಾರದು. ತಾತ್ಕಾಲಿಕ ಪರಿಹಾರವಾಗಿ ₹ 50ಸಾವಿರ ನೀಡಬೇಕು. ಮೃತರ ಕುಟುಂಬದವರಿಗೆ ₹ 25 ಲಕ್ಷ ಕೊಡಬೇಕು’ ಎಂದು ಒತ್ತಾಯಿಸಿದರು.

ಮಾದರಿ ನೀತಿಸಂಹಿತೆ ಜಾರಿಯಲ್ಲಿರುವುದರಿಂದ, ವಾಟಾಳ್ ಹಾಗೂ ಅವರ ಬೆಂಬಲಿಗರನ್ನು ಪೊಲೀಸರು ವಶಕ್ಕೆ ಪಡೆದು ನಂತರ ಬಿಡುಗಡೆ ಮಾಡಿದರು.

 

 

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು