ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ದೇಶ, ರಾಜ್ಯದಲ್ಲಿ ಗೊಂದಲದ ವಾತಾವರಣ: ಬಿಜೆಪಿ ಸರ್ಕಾರದ ವಿರುದ್ಧ ಮೊಯ್ಲಿ ವಾಗ್ದಾಳಿ

Last Updated 20 ಏಪ್ರಿಲ್ 2022, 12:28 IST
ಅಕ್ಷರ ಗಾತ್ರ

ಬೆಳಗಾವಿ: ‘ದೇಶ ಹಾಗೂ ರಾಜ್ಯದಲ್ಲಿ ಗೊಂದಲದ ವಾತಾವರಣ ನಿರ್ಮಾಣವಾಗಿದೆ. ಅದರಿಂದ ಕೆಲವು ರಾಜಕೀಯ ಪಕ್ಷಗಳಿಗೆ ಪ್ರಯೋಜನವಾಗಬಹುದು. ಆದರೆ, ದೇಶದ ಹಿತಕ್ಕೆ ಇದು ಮಾರಕವಾಗಿದೆ. ಆರ್ಥಿಕ ಮತ್ತು ಸಾಮಾಜಿಕ ಭದ್ರತೆಗೆ ಆತಂಕ ಎದುರಾಗಿದೆ’ ಎಂದು ಕಾಂಗ್ರೆಸ್ ನಾಯಕ ಎಂ. ವೀರಪ್ಪ ಮೊಯ್ಲಿ ಕಳವಳ ವ್ಯಕ್ತಪಡಿಸಿದರು.

ಇಲ್ಲಿ ಪತ್ರಕರ್ತರೊಂದಿಗೆ ಬುಧವಾರ ಮಾತನಾಡಿದ ಅವರು, ‘ಕಾನೂನು–ಸುವ್ಯವಸ್ಥೆ ಹಾಳಾದರೆ ಜನರಿಗೆ ನೆಮ್ಮದಿ ಇರುವುದಿಲ್ಲ. ವ್ಯಾಪಾರ ಸರಿಯಾಗಿ ಆಗುವುದಿಲ್ಲ. ಹೂಡಿಕೆಯೂ ನಡೆಯುವುದಿಲ್ಲ. ಕೇಂದ್ರ ಸರ್ಕಾರಕ್ಕೆ ಕಿವಿ ಕೇಳುತ್ತದೆಯೇ ಎಂಬ ಸಂಶಯ ಮೂಡುತ್ತಿದೆ’ ಎಂದು ಟೀಕಿಸಿದರು.

‘ಜಾಗತಿಕ ಸಂಸ್ಥೆಯೊಂದು ‘ಸಂತೋಷವಿಲ್ಲದ ದೇಶಗಳ ಪಟ್ಟಿ’ಯಲ್ಲಿ ಭಾರತವನ್ನು ಸೇರಿಸಿದ್ದಾರೆ. ಈ ನಿಟ್ಟಿನಲ್ಲಿ ದೇಶದ ಜನರು ಚಿಂತೆ ಮಾಡಬೇಕಾಗಿದೆ. ಅರಾಜಕತೆ ನಿರ್ಮಾಣವಾಗಿದ್ದು, ಪ್ರಧಾನಿ ನರೇಂದ್ರ ಮೋದಿ ಅವರು ಅದಕ್ಕೆ ಉತ್ತರ ಕೊಡುತ್ತಿಲ್ಲ. ಆರ್ಥಿಕ, ಶೈಕ್ಷಣಿಕ ಅಸ್ತವ್ಯಸ್ತತೆ ಉಂಟಾಗಿದೆ. ಕೋವಿಡ್‌ನಿಂದ ಸಾವಿಗೀಡಾದವರ ಪಟ್ಟಿ ಕೊಡುವ ಯೋಗ್ಯತೆಯೂ ಈ ಸರ್ಕಾರಕ್ಕೆ ಇಲ್ಲವಾಗಿದೆ’ ಎಂದು ವಾಗ್ದಾಳಿ ನಡೆಸಿದರು.

ಅರಾಜಕತೆಗೆ ಕಾಯುತ್ತಿದ್ದಾರೆಯೇ?

‘ಕೋವಿಡ್‌ನಿಂದಾಗಿ ಜಗತ್ತಿನಲ್ಲೇ ಅತ್ಯಂತ ಹೆಚ್ಚು ಮಂದಿ ಸಾವಿಗೀಡಾಗಿದ್ದು ಭಾರತದಲ್ಲಿ ಎಂದು ವರದಿಯೊಂದು ಹೇಳಿದೆ. ಇದನ್ನು ನೋಡಿದರೆ ಸರ್ಕಾರವು ಹೇಗೆ ನಿರ್ವಹಣೆ ಮಾಡುತ್ತಿದೆ ಎನ್ನುವುದು ಮುಖ್ಯವಾಗಿದೆ. ಸಾಲದ ಸುಳಿಯಲ್ಲಿ ಸಿಲುಕಿರುವ ದೇಶಗಳ ಪಟ್ಟಿಯಲ್ಲಿ ಭಾರತವಿದೆ. ಇಲ್ಲೂ ಅರಾಜಕತೆಗೆ ಸರ್ಕಾರದವರು ಕಾಯುತ್ತಿದ್ದಾರೆಯೇ?’ ಎಂದು ಕೇಳಿದರು.

‘ಹಣಕಾಸಿನ ವ್ಯವಸ್ಥೆ ದೇಶದ ನಿಯಂತ್ರಣದಲ್ಲಿಲ್ಲ. ಹಣಕಾಸು ನೀತಿ ನಿಯಂತ್ರಿಸುವಂತಹ ನೈತಿಕ ತಳಹದಿಯನ್ನೇ ಆರ್‌ಬಿಐ ಕಳೆದುಕೊಂಡಿದೆ. ಅದರ ದುಷ್ಪರಿಣಾಮವೇ ಬೆಲೆ ಏರಿಕೆ ಮೊದಲಾದವಾಗಿವೆ. ಅನಾಹುತದ ದಾರಿಯಿಂದ ದೇಶ ರಕ್ಷಿಸುವ ನೀತಿ ಬಗ್ಗೆ ಸರ್ಕಾರ ಯೋಚಿಸುತ್ತಿಲ್ಲ’ ಎಂದು ದೂರಿದರು.

‘7 ರಾಜ್ಯಗಳಲ್ಲಿ ಪೆಟ್ರೋಲ್–ಡೀಸೆಲ್‌ ಬೆಲೆ ಮೂಲ ಬೆಲೆಯಷ್ಟೆ ತೆರಿಗೆ ಹಾಕಲಾಗುತ್ತಿದೆ. ನಾನೂ ಪೆಟ್ರೋಲಿಯಂ ಸಚಿವನಾಗಿದ್ದೆ. ನಾವು ಸಬ್ಸಿಡಿ ನೀಡುತ್ತಿದ್ದೆವು. ಗ್ರಾಹಕರ ಮೇಲೆ ಹೊರೆ ಹಾಕುತ್ತಿರಲಿಲ್ಲ. ಬೆಲೆ ಹೆಚ್ಚಾಗದಂತೆ ನೋಡಿಕೊಂಡಿದ್ದೆವು’ ಎಂದು ತಿಳಿಸಿದರು.

ಕಾಂಗ್ರೆಸ್ ಗ್ರಾಮಾಂತರ ಜಿಲ್ಲಾ ಘಟಕದ ಅಧ್ಯಕ್ಷ ವಿನಯ ನಾವಲಗಟ್ಟಿ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT