ಮಂಗಳವಾರ, ಏಪ್ರಿಲ್ 20, 2021
29 °C
ಆ ಸಮಾಜದವರ ಓಲೈಕೆಗೆ ಎಲ್ಲಿಲ್ಲದ ಕಸರತ್ತು

ಬೆಳಗಾವಿ ಲೋಕಸಭಾ ಉಪ ಚುನಾವಣೆ: ವೀರಶೈವ–ಲಿಂಗಾಯತರದ್ದೇ ಪ್ರಾಬಲ್ಯ

ಎಂ. ಮಹೇಶ Updated:

ಅಕ್ಷರ ಗಾತ್ರ : | |

DH File

ಬೆಳಗಾವಿ: ಬೆಳಗಾವಿ ಲೋಕಸಭಾ ಕ್ಷೇತ್ರದಲ್ಲಿ 18.07 ಲಕ್ಷ ಮತದಾರರಿದ್ದಾರೆ. ಈ ಪೈಕಿ ವೀರಶೈವ–ಲಿಂಗಾಯತ ಮತದಾರರ ಸಂಖ್ಯೆಯೇ ಹೆಚ್ಚು. ನಂತರದ ಸ್ಥಾನದಲ್ಲಿ ಮರಾಠಾ, ಮುಸ್ಲಿಂ, ಕುರುಬ, ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ, ದೇವಾಂಗ, ಉಪ್ಪಾರ, ಹಣಬರ, ರೆಡ್ಡಿ ಮೊದಲಾದ ಸಮಾಜದವರಿದ್ದಾರೆ. ಈ ಲೆಕ್ಕಾಚಾರದ ಆಧಾರದ ಮೇಲೆಯೇ ರಾಜಕೀಯ ಪಕ್ಷಗಳು ರಾಜಕಾರಣ ಮಾಡುತ್ತಾ ಬಂದಿವೆ. ವೀರಶೈವ–ಲಿಂಗಾಯತ ಸಮಾಜದವರ ಓಲೈಕೆಯಲ್ಲಿ ಯಾವ ಪಕ್ಷವೂ ಹಿಂದೆ ಬಿದ್ದಿಲ್ಲದಿರುವುದು ಹಿಂದಿನ ಚುನಾವಣೆಗಳಲ್ಲಿ ಸಾಬೀತಾಗಿದೆ.

ಬೆಳಗಾವಿ ಲೋಕಸಭಾ ಕ್ಷೇತ್ರಕ್ಕೆ ಉಪ ಚುನಾವಣೆ ನಡೆಯುತ್ತಿರುವ ಈ ಸಂದರ್ಭದಲ್ಲಿ ಹಿನ್ನೋಟವನ್ನು ಗಮನಿಸಿದರೆ ವೀರಶೈವ–ಲಿಂಗಾಯತ ಸಮಾಜದವರೇ ಅತಿ ಹೆಚ್ಚು ಬಾರಿ ಗೆದ್ದಿರುವುದು ಕಂಡುಬಂದಿದೆ.

ಈ ಲೋಕಸಭಾ ಕ್ಷೇತ್ರದಲ್ಲಿ 1957ರಿಂದ ಒಂದು ಉಪ ಚುನಾವಣೆ ಸೇರಿ 17 ಚುನಾವಣೆಗಳು ನಡೆದಿವೆ. ಇವುಗಳಲ್ಲಿ ವೀರಶೈವ–ಲಿಂಗಾಯತ ಅಭ್ಯರ್ಥಿಗಳು ಅತಿ ಹೆಚ್ಚು ಬಾರಿ ಗೆಲುವು ಸಾಧಿಸಿ ಪ್ರಾಬಲ್ಯ ಮೆರೆದಿದ್ದಾರೆ. ಬ್ರಾಹ್ಮಣ ಅಭ್ಯರ್ಥಿ 2 ಬಾರಿ, ಮುಸ್ಲಿಂ ಹಾಗೂ ಕುರುಬ ಸಮಾಜದ ಅಭ್ಯರ್ಥಿಗಳು ತಲಾ ಒಮ್ಮೆ ಗೆದ್ದಿದ್ದಾರೆ. ಇತರ ಹಿಂದುಳಿದ ವರ್ಗದವರು ಹಾಗೂ ಪರಿಶಿಷ್ಟರಿಗೆ ಗೆಲುವು ಸಾಧ್ಯವಾಗಿಲ್ಲ.

ಟಿಕೆಟ್ ಕೊಟ್ಟು ಮಣೆ:

ಸಾಮಾನ್ಯ ಕ್ಷೇತ್ರವಾಗಿರುವ ಬೆಳಗಾವಿಯು ವೀರಶೈವ ಲಿಂಗಾಯತರ ಪ್ರಾಬಲ್ಯವಿರುವ ಕ್ಷೇತ್ರ ಎನಿಸಿಕೊಂಡಿರುವುದನ್ನು ಅಂಕಿ–ಅಂಶಗಳು ಹೇಳುತ್ತಿವೆ. ಎಲ್ಲ ರಾಜಕೀಯ ಪಕ್ಷಗಳು ಕೂಡ ಲಿಂಗಾಯತರಿಗೇ ಟಿಕೆಟ್‌ ಕೊಟ್ಟು ಮಣೆ ಹಾಕಿವೆ. ಇದರಿಂದಾಗಿ ಲಿಂಗಾಯತೇತರರಿಗೆ ಹೆಚ್ಚಿನ ಅವಕಾಶಗಳು ಸಿಕ್ಕಿಲ್ಲ ಅಥವಾ ಮತದಾರರು ಕೂಡ ಒಂದು ವರ್ಗದ ಜೊತೆಗಿದ್ದೇವೆ ಎಂಬ ಸಂದೇಶವನ್ನು ಹಿಂದಿನಿಂದಲೂ ನೀಡುತ್ತಲೇ ಬಂದಿದ್ದಾರೆ. ಈ ಕಾರಣದಿಂದಾಗಿಯೇ ಪ್ರಬಲ ಸಮಾಜದ ಅಭ್ಯರ್ಥಿಗಳಿಗೇ ಪಕ್ಷಗಳು ಮಣೆ ಹಾಕಿವೆ.

ಆರಂಭದಿಂದಲೂ ಈ ಕ್ಷೇತ್ರ ಕಾಂಗ್ರೆಸ್‌ ಭದ್ರಕೋಟೆಯಾಗಿತ್ತು. ಬಳಿಕ ಬಿಜೆಪಿ ಹಿಡಿತ ಬಲಗೊಳಿಸಿದೆ. 2019ರ ಚುನಾವಣೆಯಲ್ಲಿ ಕಾಂಗ್ರೆಸ್‌ನಿಂದ ಲಿಂಗಾಯತ ಸಮಾಜದ ಅಭ್ಯರ್ಥಿಯನ್ನೇ (ಡಾ.ವಿ.ಎಸ್. ಸಾಧುನವರ) ಕಣಕ್ಕಿಳಿಸಲಾಗಿತ್ತು. ಜಿದ್ದಾಜಿದ್ದಿಯು ಪ್ರಮುಖ ಸಮಾಜದ ಅಭ್ಯರ್ಥಿಗಳ ನಡುವೆಯೇ ನಡೆದಿತ್ತು.

ಅಲ್ಪಸಂಖ್ಯಾತರಿಗೆ ಒಮ್ಮೆ:

1957 ಹಾಗೂ 1962ರಲ್ಲಿ ಬ್ರಾಹ್ಮಣ ಅಭ್ಯರ್ಥಿ ಬಿ.ಎನ್. ದತಾರ್‌ ಆಯ್ಕೆ ಆಗಿದ್ದರು. ಅವರ ನಿಧನದಿಂದಾಗಿ 1963ರಲ್ಲಿ ನಡೆದ ಉಪ ಚುನಾವಣೆಯಲ್ಲಿ ಲಿಂಗಾಯತ ಸಮಾಜದ ಎಚ್‌.ವಿ. ಕೌಜಲಗಿ ಅವರು ಬ್ರಾಹ್ಮಣ ಸಮುದಾಯದ ಜಗನ್ನಾಥರಾವ್‌ ಜೋಶಿ ಅವರನ್ನು ಸೋಲಿಸಿ ಸಂಸತ್‌ ಪ್ರವೇಶಿಸಿದ್ದರು. 1967ರ ಚುನಾವಣೆಯಲ್ಲಿ ಎನ್.ಎಂ. ನಬೀಸಾಬ ಗೆದ್ದಿದ್ದರು. ಇಲ್ಲಿ ಗೆದ್ದ ಏಕೈಕ ಅಲ್ಪಸಂಖ್ಯಾತ ಅಭ್ಯರ್ಥಿ ಎಂಬ ಕೀರ್ತಿ ಅವರದು.

1971 ಹಾಗೂ 1977ರಲ್ಲಿ ಸತತ 2 ಬಾರಿ ಎ.ಕೆ. ಕೊಟ್ರಶೆಟ್ಟಿ ಆಯ್ಕೆಯಾಗಿದ್ದರು. ಸತತ 4 ಬಾರಿ (1980, 1984, 1989, 1991) ಗೆದ್ದು ಕ್ಷೇತ್ರದಲ್ಲಿ ಅತಿ ಹೆಚ್ಚಿನ ಗೆಲುವು ಸಾಧಿಸಿದವರು ಎಂಬ ದಾಖಲೆ ಕಾಂಗ್ರೆಸ್‌ನ ಎಸ್‌.ಬಿ. ಸಿದ್ನಾಳ ಅವರದು. ಅವರ ಸಮೀಪದ ಪ್ರತಿಸ್ಪರ್ಧಿ ಆಗಿದ್ದವರು ಕೂಡ ವೀರಶೈವ–ಲಿಂಗಾಯತ ಸಮಾಜದವರೇ. 1996ರಲ್ಲಿ ಜನತಾದಳದಿಂದ ಶಿವಾನಂದ ಕೌಜಲಗಿ ಬಿಜೆಪಿ ಬಾಬಾಗೌಡ ಪಾಟೀಲರ ವಿರುದ್ಧ ಗೆದ್ದಿದ್ದರು. 1998ರಲ್ಲಿ ಎಸ್.ಬಿ. ಸಿದ್ನಾಳರ ವಿರುದ್ಧ ಬಿಜೆಪಿಯಿಂದ ಸ್ಪರ್ಧಿಸಿದ್ದ ಬಾಬಾಗೌಡ ಪಾಟೀಲ ಗೆಲುವು ಸಾಧಿಸಿದ್ದರು.

8 ಚುನಾವಣೆಗಳ ನಂತರ:

1999ರಲ್ಲಿ ಕುರುಬ ಸಮಾಜದ ಅಮರಸಿಂಹ ಪಾಟೀಲ ಬಿಜೆಪಿಯ ಬಾಬಾಗೌಡ ಪಾಟೀಲ ವಿರುದ್ಧ ಗೆಲುವಿನ ನಗೆ ಬೀರಿದ್ದರು. ಹೀಗಾಗಿ, 1971ರ ನಂತರ ಅಂದರೆ ಸತತ 8 ಚುನಾವಣೆಗಳ ಬಳಿಕ ಇಲ್ಲಿ ಲಿಂಗಾಯತೇತರ ಅಭ್ಯರ್ಥಿಯೊಬ್ಬರು ಗೆದ್ದಿದ್ದು ಈಗ ಇತಿಹಾಸ. ಸತತ 4 ಚುನಾವಣೆಗಳಲ್ಲಿ (2004, 2009 ಹಾಗೂ 2014) ಬಿಜೆಪಿಯ ಸುರೇಶ ಅಂಗಡಿ ಸತತವಾಗಿ ಗೆಲುವು ಸಾಧಿಸಿದ್ದರು. ಅವರ ಅಕಾಲಿಕ ನಿಧನದಿಂದ ಉಪ ಚುಣಾವಣೆ ಎದುರಾಗಿದೆ. ಆಕಾಂಕ್ಷಿಗಳ ಪಟ್ಟಿಯಲ್ಲೂ ವೀರಶೈವ–ಲಿಂಗಾಯತರ ಹೆಸರುಗಳೇ ಮುಂದಿವೆ.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು