ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅತಿ ಹೆಚ್ಚು ಬಾರಿ ಗೆದ್ದ ವೀರಶೈವ–ಲಿಂಗಾಯತರು!

ಚಿಕ್ಕೋಡಿ ಸಾಮಾನ್ಯ ಕ್ಷೇತ್ರವಾದ ನಂತರವೂ ಅವರದ್ದೇ ಪಾರುಪತ್ಯ
Last Updated 19 ಮಾರ್ಚ್ 2019, 13:44 IST
ಅಕ್ಷರ ಗಾತ್ರ

ಬೆಳಗಾವಿ: ಬೆಳಗಾವಿ ಲೋಕಸಭಾ ಕ್ಷೇತ್ರದಲ್ಲಿ 1957ರ ನಂತರ 16 ಚುನಾವಣೆಗಳು (ಒಂದು ಉಪಚುನಾವಣೆ ಸೇರಿ) ನಡೆದಿದ್ದು, ವೀರಶೈವ–ಲಿಂಗಾಯತ ಅಭ್ಯರ್ಥಿಗಳು ಅತಿ ಹೆಚ್ಚು ಬಾರಿ ಗೆಲುವು ಸಾಧಿಸಿ ಪ್ರಾಬಲ್ಯ ಮೆರೆದಿದ್ದಾರೆ.

ಬ್ರಾಹ್ಮಣ ಅಭ್ಯರ್ಥಿ 2 ಬಾರಿ, ಮುಸ್ಲಿಂ ಹಾಗೂ ಕುರುಬ ಸಮಾಜದ ಅಭ್ಯರ್ಥಿಗಳು ತಲಾ ಒಮ್ಮೆ ಗೆದ್ದಿದ್ದಾರೆ. ದಲಿತರಿಗೆ ಅವಕಾಶ ಸಿಕ್ಕಿಲ್ಲ.

‌ಚುನಾವಣೆಗಳು ಜಾತಿ ಲೆಕ್ಕಾಚಾರದ ಮೇಲೆ ನಡೆಯುವುದು ಸಾಮಾನ್ಯವಾಗಿದೆ. ಈ ನಿಟ್ಟಿನಲ್ಲಿ ನೋಡಿದರೆ, ಸಾಮಾನ್ಯ ಕ್ಷೇತ್ರವಾಗಿರುವ ಬೆಳಗಾವಿಯು ವೀರಶೈವ ಲಿಂಗಾಯತರ ಪ್ರಾಬಲ್ಯವಿರುವ ಕ್ಷೇತ್ರ ಎನಿಸಿಕೊಂಡಿರುವುದನ್ನು ಅಂಕಿ–ಅಂಶಗಳು ಹೇಳುತ್ತಿವೆ. ಎಲ್ಲ ರಾಜಕೀಯ ಪಕ್ಷಗಳು ಕೂಡ ಲಿಂಗಾಯತರಿಗೇ ಟಿಕೆಟ್‌ ಕೊಟ್ಟು ಮಣೆ ಹಾಕಿವೆ. ಇದರಿಂದಾಗಿ ಲಿಂಗಾಯತೇತರರಿಗೆ ಹೆಚ್ಚಿನ ಅವಕಾಶಗಳು ದೊರೆತಿಲ್ಲ. ಮತದಾರರು ಕೂಡ ಒಂದು ವರ್ಗದ ಜೊತೆಗಿದ್ದೇವೆ ಎಂಬ ಸಂದೇಶವನ್ನು ನೀಡುತ್ತಲೇ ಬಂದಿದ್ದಾರೆ!

ಆರಂಭದಿಂದಲೂ ಈ ಕ್ಷೇತ್ರ ಕಾಂಗ್ರೆಸ್‌ ಭದ್ರಕೋಟೆಯಾಗಿತ್ತು. ಈಚೆಗೆ ಬಿಜೆಪಿ ಹಿಡಿತ ಸಾಧಿಸಿದೆ.

ಅಲ್ಪಸಂಖ್ಯಾತರಿಗೆ ಒಮ್ಮೆ:1957 ಹಾಗೂ 1962ರಲ್ಲಿ ಬ್ರಾಹ್ಮಣ ಅಭ್ಯರ್ಥಿ ಬಿ.ಎನ್. ದತಾರ್‌ ಆಯ್ಕೆಯಾಗಿದ್ದರು. 1963ರಲ್ಲಿ ನಡೆದ ಉಪಚುನಾವಣೆಯಲ್ಲಿ ಲಿಂಗಾಯತ ಸಮಾಜದ ಎಚ್‌.ವಿ. ಕೌಜಲಗಿ ಅವರು ಬ್ರಾಹ್ಮಣ ಸಮುದಾಯದ ಜಗನ್ನಾಥರಾವ್‌ ಜೋಶಿ ಅವರನ್ನು ಸೋಲಿಸಿ ಸಂಸತ್‌ ಪ್ರವೇಶಿಸಿದ್ದರು. 1967ರ ಚುನಾವಣೆಯಲ್ಲಿ ಎನ್.ಎಂ. ನಬೀಸಾಬ ಇಲ್ಲಿ ಆಯ್ಕೆಯಾದ ಏಕೈಕ ಅಲ್ಪಸಂಖ್ಯಾತ ಅಭ್ಯರ್ಥಿ ಎಂಬ ಕೀರ್ತಿಗೆ ಭಾಜನವಾಗಿದ್ದಾರೆ.

1971 ಹಾಗೂ 1977ರಲ್ಲಿ ಸತತ 2 ಬಾರಿ ಎ.ಕೆ. ಕೊಟ್ರಶೆಟ್ಟಿ ಆಯ್ಕೆಯಾಗಿದ್ದರು. ಸತತ 4 ಬಾರಿ (1980, 1984, 1989, 1991) ಗೆದ್ದು ಕ್ಷೇತ್ರದಲ್ಲಿ ಅತಿ ಹೆಚ್ಚಿನ ಗೆಲುವು ಸಾಧಿಸಿದವರು ಎಂಬ ದಾಖಲೆ ಕಾಂಗ್ರೆಸ್‌ನ ಎಸ್‌.ಬಿ. ಸಿದ್ನಾಳ ಅವರದು. ಅವರ ವಿರುದ್ಧ ಸಮೀಪದ ಪ್ರತಿಸ್ಪರ್ಧಿಯಾಗಿದ್ದವರು ಕೂಡ ವೀರಶೈವ–ಲಿಂಗಾಯತ ಸಮಾಜದವರೇ. 1996ರಲ್ಲಿ ಜನತಾದಳದಿಂದ ಶಿವಾನಂದ ಕೌಜಲಗಿ ಬಿಜೆಪಿ ಬಾಬಾಗೌಡ ಪಾಟೀಲರ ವಿರುದ್ಧ ಗೆದ್ದಿದ್ದರು. 1998ರಲ್ಲಿ ಎಸ್.ಬಿ. ಸಿದ್ನಾಳರ ವಿರುದ್ಧ ಬಿಜೆಪಿಯಿಂದ ಸ್ಪರ್ಧಿಸಿದ್ದ ಬಾಬಾಗೌಡ ಪಾಟೀಲ ಗೆಲುವು ಸಾಧಿಸಿದ್ದರು.

8 ಚುನಾವಣೆಗಳ ನಂತರ:1999ರಲ್ಲಿ ಕುರುಬ ಸಮಾಜದ ಅಮರಸಿಂಹ ಪಾಟೀಲ ಬಿಜೆಪಿಯ ಬಾಬಾಗೌಡ ಪಾಟೀಲ ವಿರುದ್ಧ ಗೆಲುವಿನ ನಗೆ ಬೀರಿದ್ದರು. ಹೀಗಾಗಿ, 1971ರ ನಂತರ ಅಂದರೆ ಸತತ 8 ಚುನಾವಣೆಗಳ ಬಳಿಕ ಇಲ್ಲಿ ಲಿಂಗಾಯತೇತರ ಅಭ್ಯರ್ಥಿಯೊಬ್ಬರು ಗೆದ್ದಿದ್ದು ಈಗ ಇತಿಹಾಸ. ಹಿಂದಿನ 3 ಚುನಾವಣೆಗಳಲ್ಲಿ (2004, 2009 ಹಾಗೂ 2014) ಬಿಜೆಪಿಯ ಸುರೇಶ ಅಂಗಡಿ ಸತತವಾಗಿ ಗೆಲುವು ಸಾಧಿಸಿದ್ದಾರೆ. ಈ ಬಾರಿಯೂ ಅವರಿಗೇ ಟಿಕೆಟ್‌ ದೊರೆಯುವುದು ಬಹುತೇಕ ಖಚಿತವಾಗಿದೆ.

ಜಿಲ್ಲೆಯ ಇನ್ನೊಂದು ಕ್ಷೇತ್ರ– ಚಿಕ್ಕೋಡಿ. ಹಿಂದೆ ಮೀಸಲು ಕ್ಷೇತ್ರವಾಗಿತ್ತು. 1967ರಿಂದ ಸತತವಾಗಿ 7 ಬಾರಿ ಕಾಂಗ್ರೆಸ್‌ನ ಬಿ. ಶಂಕರಾನಂದ ಗೆದ್ದಿದ್ದರು. ಬಿಜೆಪಿಯ ರಮೇಶ ಜಿಗಜಿಣಗಿ 3 ಬಾರಿ ವಿಜೇತರಾಗಿದ್ದರು. ಕ್ಷೇತ್ರ ಪುನರ್‌ವಿಂಗಡಣೆ ನಂತರ ಈ ಕ್ಷೇತ್ರವು ಸಾಮಾನ್ಯ ಕ್ಷೇತ್ರವಾಯಿತು. ಬಳಿಕವೂ ಅಂದರೆ 2009 ಹಾಗೂ 2014ರಲ್ಲಿ ವೀರಶೈವ ಲಿಂಗಾಯತರೇ (ರಮೇಶ ಕತ್ತಿ, ಪ್ರಕಾಶ ಹುಕ್ಕೇರಿ) ಗೆದ್ದಿದ್ದಾರೆ.

ಈ ಚುನಾವಣೆಯಲ್ಲೂ ಬೆಳಗಾವಿ ಹಾಗೂ ಚಿಕ್ಕೋಡಿ ಕ್ಷೇತ್ರಗಳಿಂದ ಬಿಜೆಪಿ ಮತ್ತು ಕಾಂಗ್ರೆಸ್‌ ಪಕ್ಷದಿಂದ ಟಿಕೆಟ್‌ ಆಕಾಂಕ್ಷಿಗಳ ಪಟ್ಟಿಯಲ್ಲೂ ವೀರಶೈವ–ಲಿಂಗಾಯತರ ಹೆಸರುಗಳೇ ಮುನ್ನಲೆಗೆ ಬಂದಿದ್ದವು. ಉಭಯ ಪಕ್ಷಗಳ ಮುಖಂಡರಿಂದಲೂ ಅಂತಿಮವಾಗಿ ಶಿಫಾರಸಾದ ಪಟ್ಟಿಗಳಲ್ಲೂ ಈ ಸಮಾಜದವರ ಹೆಸರುಗಳೇ ಇವೆ. ಹೀಗಾಗಿ, ಪ್ರಸಕ್ತ ಚುನಾವಣೆಯಲ್ಲೂ ಈ ಅಭ್ಯರ್ಥಿಗಳ ನಡುವೆಯೇ ಪೈಪೋಟಿ ನಿಶ್ಚಿತ.

ಅವರೇ ನಿರ್ಣಾಯಕ:‘ಜಿಲ್ಲೆಯ ಎರಡು ಕ್ಷೇತ್ರಗಳಲ್ಲೂ ವೀರಶೈವ– ಲಿಂಗಾಯತ ಮತದಾರರೇ ನಿರ್ಣಾಯಕರಾಗಿದ್ದಾರೆ. ಹೀಗಾಗಿ, ಸಹಜವಾಗಿಯೇ ಆ ಸಮಾಜದ ಅಭ್ಯರ್ಥಿಗಳಿಗೇ ಟಿಕೆಟ್‌ ನೀಡಲು ರಾಜಕೀಯ ಪಕ್ಷಗಳು ಮುಂದಾಗುತ್ತವೆ’ ಎಂದು ಮುಖಂಡರೊಬ್ಬರು ಪ್ರತಿಕ್ರಿಯಿಸಿದರು.

‘ಇಲ್ಲಿ ಲೋಕಸಭೆ ಚುನಾವಣೆಗೆ ಸಂಬಂಧಿಸಿದಂತೆ, ಲಿಂಗಾಯತರನ್ನು ಬಿಟ್ಟು ಒಬಿಸಿ ವರ್ಗದಲ್ಲಿ ಯಾರಾದರೂ ಸಮರ್ಥರಿದ್ದರೆ ನೋಡಬಹುದಿತ್ತು. ಸದ್ಯಕ್ಕೆ ಲಿಂಗಾಯತರನ್ನು ಶಿಫಾರಸು ಮಾಡಿದ್ದೇವೆ. ಮುಂದಿನ ದಿನಗಳಲ್ಲಿ ಅವಕಾಶ ಬಂದಾಗ ಇತರರಿಗೂ ಆದ್ಯತೆ ನೀಡಲಾಗುವುದು’ ಎಂದು ಕಾಂಗ್ರೆಸ್‌ ನಾಯಕ, ಸಚಿವ ಸತೀಶ ಜಾರಕಿಹೊಳಿ ಪ್ರತಿಕ್ರಿಯಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT