ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಗಣೇಶ ಹಬ್ಬಕ್ಕೆ ಬೆಲೆ ಏರಿಕೆ ‘ಬಿಸಿ’

ಪೂರೈಕೆಯಲ್ಲಿ ವ್ಯತ್ಯಯದಿಂದಾಗಿ ತರಕಾರಿಗಳ ದರ ಏರಿಕೆ
Last Updated 29 ಆಗಸ್ಟ್ 2019, 19:30 IST
ಅಕ್ಷರ ಗಾತ್ರ

ಬೆಳಗಾವಿ: ಆವಕ ಕಡಿಮೆಯಾಗಿರುವ ಪರಿಣಾಮ ತರಕಾರಿಗಳ ದರ ಹೆಚ್ಚಾಗಿದೆ. ಮುಂಬರುವ ಗಣೇಶ ಚತುರ್ಥಿ ಹಬ್ಬದ ಸಂದರ್ಭದಲ್ಲಿ ಗ್ರಾಹಕರಿಗೆ ಮತ್ತಷ್ಟು ಬೆಲೆ ಏರಿಕೆ ಬಿಸಿ ತಟ್ಟುವ ಸಾಧ್ಯತೆ ಇದೆ.

ಪ್ರವಾಹ ಮತ್ತು ಧಾರಾಕಾರ ಮಳೆಯಿಂದಾಗಿ ಜಿಲ್ಲೆಯಲ್ಲಿ 7,841 ಹೆಕ್ಟೇರ್‌ ಪ್ರದೇಶದ ತೋಟಗಾರಿಕಾ ಬೆಳೆಗಳಿಗೆ ಸಂಪೂರ್ಣ ಹಾನಿಯಾಗಿದೆ. ಬದನೆಕಾಯಿ, ಈರುಳ್ಳಿ, ಹಸಿರು ಮೆಣಸಿನಕಾಯಿ, ದಪ್ಪ ಮೆಣಸಿನಕಾಯಿ, ದಾಳಿಂಬೆ, ಸೀಬೆ, ಬಾಳೆ, ಟೊಮೆಟೊ, ಅರಿಸಿನ, ಸೌತೆಕಾಯಿ, ಬೆಂಡೆಕಾಯಿ, ಬೀನ್ಸ್‌, ಹೀರೇಕಾಯಿ, ಗೆಣಸು, ಹೂಕೋಸು, ಹಾಗಲಕಾಯಿ, ವಿವಿಧ ಸೊಪ್ಪಿನ ಬೆಳೆಗಳು ಪ್ರವಾಹಕ್ಕೆ ತುತ್ತಾಗಿವೆ. ಆಳೆತ್ತರಕ್ಕೆ ಬೆಳೆದಿದ್ದ ಬಾಳೆ ಗಿಡಗಳು ನೆಲ ಕಚ್ಚಿವೆ. ತಾಲ್ಲೂಕಿನಲ್ಲಿ ಅತಿ ಹೆಚ್ಚಿನ ಪ್ರಮಾಣದಲ್ಲಿ ಬೆಳೆಯುವ ಆಲೂಗಡ್ಡೆ ಬೆಳೆಯೂ ಮಳೆಗೆ ಆಹುತಿಯಾಗಿದೆ. ಹೀಗಾಗಿ, ತರಕಾರಿಗಳ ಕೊರತೆ ಉಂಟಾಗಿದೆ. ಪೂರೈಕೆ ಇಳಿಕೆ ಆಗಿರುವುದರಿಂದ ಬೆಲೆ ಹೆಚ್ಚಾಗಿದೆ.

ಕೆಲವು ಸೊಪ್ಪುಗಳು ಮಾರುಕಟ್ಟೆಯಲ್ಲಿ ದೊರೆಯುತ್ತಿಲ್ಲ. ಕೊತ್ತಂಬರಿ ಸೊಪ್ಪು ಹಿಡಿಯಷ್ಟಿರುವ ಕಟ್ಟನ್ನು ₹ 10ಕ್ಕೆ ಮಾರುತ್ತಿದ್ದರು.

ಆವಕ ಕಡಿಮೆ:

‘ನೆರೆಯಿಂದಾಗಿ ಬೆಳೆ ಹಾನಿಯಾಗಿದೆ. ಸ್ಥಳೀಯವಾಗಿ ಬೆಳೆಯುವ ತರಕಾರಿಗಳ ಆವಕದಲ್ಲಿ ಶೇ 95ರಷ್ಟು ಕುಸಿತ ಕಂಡುಬಂದಿದೆ. ಹಸಿರುಮೆಣಸಿನಕಾಯಿ, ಬಟಾಣಿ ಮೊದಲಾದವು ಮಹಾರಾಷ್ಟ್ರ, ಚಿಕ್ಕಮಗಳೂರು, ದಾವಣಗೆರೆ ಮತ್ತಿತರ ಕಡೆಗಳಿಂದ ಬರುತ್ತಿವೆ. ಆವಕ ಕಡಿಮೆಯಾಗಿದ್ದು, ಬೆಲೆ ಜಾಸ್ತಿಯಾಗಿದೆ’ ಎಂದು ಕೃಷಿ ಮಾರಾಟ ಇಲಾಖೆ ಉಪನಿರ್ದೇಶಕ ಕೋಡಿಗೌಡ ‘ಪ್ರಜಾವಾಣಿ’ಗೆ ತಿಳಿಸಿದರು.

‘ಹೋದ ವಾರಕ್ಕೆ ಹೋಲಿಸಿದರೆ ತರಕಾರಿಗಳ ಲಭ್ಯತೆಯಲ್ಲಿ ಸುಧಾರಣೆ ಕಂಡಿದೆ. ಬೇರೆ ಜಿಲ್ಲೆಗಳಿಂದ ಬರುತ್ತಿವೆ. ಆದರೆ, ಬೆಲೆ ಹೆಚ್ಚಾಗಿದೆ. ಹಬ್ಬಕ್ಕೆ ಮತ್ತಷ್ಟು ಏರಿಕೆಯಾಗಲಿದೆ. ವಾರದ ನಂತರ ಸಹಜ ಸ್ಥಿತಿಗೆ ಬರುವ ಸಾಧ್ಯತೆ ಇದೆ’ ಎಂದು ವ್ಯಾಪಾರಿಗಳು ತಿಳಿಸಿದರು.

ಬಾರದ ಸೀತಾ‘ಫಲ’:

ತರಕಾರಿಗಳ ಬೆಲೆ ಶೇ 10ರಿಂದ ಶೇ 20ರಷ್ಟು ಹೆಚ್ಚಾಗಿದೆ. ಹಣ್ಣುಗಳ ಬೆಲೆಯಲ್ಲೂ ಏರಿಕೆ ಇದೆ. ಹೆಚ್ಚಿನ ಪೂರೈಕೆ ಇರುವುದರಿಂದ ಸೇಬು ಬೆಲೆ ಕೊಂಚ ಇಳಿದಿದೆ. ಕೆ.ಜಿ.ಗೆ ₹ 70ರಿಂದ ₹ 250ರವರೆಗೂ ಇದೆ. ಈ ಸಂದರ್ಭದಲ್ಲಿ ಹುಕ್ಕೇರಿ ತಾಲ್ಲೂಕಿನ ಕೆಲವು ಹಳ್ಳಿಗಳ ರೈತರು ಸೀತಾಫಲ ಹಣ್ಣುಗಳನ್ನು ತಂದು ನಗರದ ವಿವಿಧೆಡೆ ವಿಶೇಷವಾಗಿ ಉತ್ತರ ಮತಕ್ಷೇತ್ರದ ರಸ್ತೆ ಬದಿಗಳಲ್ಲಿ ಮಾರುತ್ತಿದ್ದರು. ಆದರೆ, ಈ ಬಾರಿ ಕೆಲವರಷ್ಟೇ ಕಾಣಸಿಗುತ್ತಿದ್ದಾರೆ.

‘ಹಿರಣ್ಯಕೇಶಿ, ಮಾರ್ಕಂಡೇಯ, ಘಟಪ್ರಭಾ ನದಿ ಪ್ರವಾಹದಿಂದಾಗಿ ಬಹಳಷ್ಟು ಕಡೆಗಳಲ್ಲಿ ಸೀತಾಫಲ ಗಡಿಗಳಿಗೆ ಹಾನಿಯಾಗಿದೆ. ಕೈಗೆ ಬಂದ ಬೆಳೆ ಬಾಯಿಗೆ ಬಾರದಂತಾಗಿ ನಷ್ಟ ಅನುಭವಿಸಿದ್ದಾರೆ. ಹೀಗಾಗಿ, ಬಹಳ ಜನ ಸೀತಾಫಲ ತರುತ್ತಿಲ್ಲ’ ಎಂದು ರೈತರೊಬ್ಬರು ತಿಳಿಸಿದರು.

ಹಿಂದಿನ ವಾರಕ್ಕೆ ಹೋಲಿಸಿದರೆ, ತೆಂಗಿನಕಾಯಿ ಬೆಲೆ ಯಥಾಸ್ಥಿತಿಯಲ್ಲಿದೆ. ಒಂದಕ್ಕೆ ₹ 20ರಿಂದ 28ರವರೆಗೆ ಇದೆ.

ಗೋಕಾಕ ತಾಲ್ಲೂಕಿನ ಕೊಣ್ಣೂರು, ನಗರದ ವಿವಿಧೆಡೆ ಸೇರಿದಂತೆ ಗಣೇಶ ಮೂರ್ತಿಗಳು ಪ್ರವಾಹದಿಂದ ಹಾಳಾಗಿವೆ. ಲಭ್ಯತೆ ಕಡಿಮೆ ಇರುವುದರಿಂದ ಗಣೇಶ ಮೂರ್ತಿಗಳ ಬೆಲೆ ಹೆಚ್ಚಾಗಿದೆ. ಹೋದ ವರ್ಷಕ್ಕೆ ಹೋಲಿಸಿದರೆ ಶೇ 30ರಷ್ಟು ಏರಿಕೆಯಾಗಿದೆ.

ಶ್ರಾವಣ ಮಾಸದಲ್ಲಿ ಮಾಂಸಾಹಾರ ಸೇವಿಸುವವರು ಕಡಿಮೆ. ಆದರೂ ಮಾಂಸದ ಬೆಲೆಯಲ್ಲಿ ಇಳಿಕೆ ಕಂಡುಬಂದಿಲ್ಲ! ಕುರಿ ಮಾಂಸ ಕೆ.ಜಿ.ಗೆ ₹ 500, ಚಿಕನ್– ₹ 140 ಇತ್ತು. ಒಂದು ಮೊಟ್ಟೆಗೆ ₹ 5 ಇತ್ತು. ಶ್ರಾವಣ ಮಾಸ ಮುಕ್ತಾಯವಾಗುವುದರಿಂದ ಮುಂದಿನ ವಾರ ಬೆಲೆ ಏರಿಕೆಯಾಗಲಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT