ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚಿಕ್ಕೋಡಿ: ತರಕಾರಿ ತುಟ್ಟಿ, ‘ಕಹಿ’ಯಾದ ಸಂಕ್ರಾಂತಿ

ಭೋಗಿ ಭೋಜನ ಸಿದ್ಧಪಡಿಸಲು ಬಡ ಕುಟುಂಬಗಳ ಪರದಾಟ
Last Updated 13 ಜನವರಿ 2022, 19:30 IST
ಅಕ್ಷರ ಗಾತ್ರ

ಚಿಕ್ಕೋಡಿ: ವರ್ಷದ ಮೊದಲ ಹಬ್ಬ ಮಕರ ಸಂಕ್ರಮಣದ ‘ಭೋಗಿ ಭೋಜನ’ವೇ ಈ ಭಾಗದ ವಿಶೇಷತೆ. ಆದರೆ, ಗಗನಕ್ಕೇರಿರುವ ತರಕಾರಿ ಬೆಲೆ ಜನಸಾಮಾನ್ಯರ ಪಾಲಿಗೆ ಕಹಿಯಾಗಿ ಪರಿಣಮಿಸಿದೆ. ಹಬ್ಬದ ಸಂಭ್ರಮ ಕಳೆಗುಂದುವಂತೆ ಮಾಡಿದೆ.

ಸಜ್ಜೆ ರೊಟ್ಟಿ, ಗೋವಿನ ಜೋಳ ಮತ್ತು ಬಿಳಿ ಜೋಳದ ಖಡಕ್ ರೊಟ್ಟಿಗಳೊಂದಿಗೆ ಎಣಗಾಯಿ ಪಲ್ಯ, ಅವರೆಕಾಳಿನ ಪಲ್ಯ, ಮೊಳಕೆ ಕಾಳುಗಳು, ಗುರೆಳ್ಳು, ಶೇಂಗಾ ಚಟ್ನಿಯೊಂದಿಗೆ ಕೆನೆ ಮೊಸರು, ಹುರಿದ ಶೇಂಗಾ, ಕ್ಯಾರೆಟ್, ಈರುಳ್ಳಿ, ಕಡಲೆ ಸುಲಗಾಯಿ ಸೇರಿದಂತೆ ವಿವಿಧ ಖಾದ್ಯಗಳನ್ನು ಚಪ್ಪರಿಸುವುದೇ ಭೋಗಿ ಭೋಜನದ ಸಂಭ್ರಮ.

ಸಂಕ್ರಾಂತಿಯ ಮುನ್ನಾ ದಿನವಾದ ಗುರುವಾರ, ಕೆಲವೆಡೆ ಶುಕ್ರವಾರ ಕುಟುಂಬದವರೆಲ್ಲರೂ ಸೇರಿ ಘಮ– ಘಮಿಸುವ ಭೋಗಿ ಊಟ ಮಾಡಿ ಸಂಭ್ರಮಿಸುತ್ತಾರೆ. ಆದರೆ, ತರಕಾರಿಗಳು ತುಟ್ಟಿ ಆಗಿರುವುದರಿಂದ ಬಡವರು ಹಾಗೂ ಮಧ್ಯಮ ವರ್ಗದವರು ಪರದಾಡಿದರು. ಸರಾಸರಿ ಕೆ.ಜಿ.ಗೆ ₹ 80 ದಾಟಿರುವ ತರಕಾರಿ ಕೊಂಡುಕೊಳ್ಳಲಾಗದೆ, ಇದ್ದುದ್ದರಲ್ಲಿಯೇ ಸಂಪ್ರದಾಯದಂತೆ ಅಡುಗೆ ಮಾಡಿಕೊಂಡು ಹಬ್ಬದಾಚರಣೆಗೆ ಮುಂದಾಗಿದ್ದಾರೆ.

ಸ್ಥಳೀಯ ಮಾರುಕಟ್ಟೆಯಲ್ಲಿ ಬದನೆಕಾಯಿಗೆ ಕೆ.ಜಿ.ಗೆ ಸರಾಸರಿ ₹ 120, ಕ್ಯಾರೆಟ್ ₹ 50, ಸೌತೆಕಾಯಿ ₹ 60, ಟೊಮೆಟೊ ₹ 50, ಅವರೆಕಾಯಿ ₹ 100, ಹೀರೇಕಾಯಿ ₹ 110, ಹಾಗಲಕಾಯಿ ₹ 80, ಹಸಿಬಟಾಣಿ ₹ 60 ಇತ್ತು. ಸೊಪ್ಪಿನ ಬೆಲೆಯೂ ತುಟ್ಟಿಯಾಗಿದೆ. ಮೆಂತ್ಯೆ ಸೊಪ್ಪು ಒಂದು ಕಟ್ಟು ₹ 10ಕ್ಕೆ ಮಾರಾಟವಾಗುತ್ತಿದೆ.

ನವೆಂಬರ್‌ನಲ್ಲಿ ಸುರಿದ ಅಕಾಲಿಕ ಮಳೆಯಿಂದಾಗಿ ಹಲವು ತರಕಾರಿ ಬೆಳೆಗಳು ನೆಲ ಕಚ್ಚಿದ ಪರಿಣಾಮ, ಆವಕ ಕಡಿಮೆ ಆಗಿರುವುದರಿಂದ ತರಕಾರಿಗಳ ಬೆಲೆ ಗಗನಕ್ಕೇರಿದೆ. ಬೆಳೆಗಳಿಗೆ ರೋಗ– ರುಜಿನಗಳೂ ಹೆಚ್ಚಿದ್ದರಿಂದ ಉತ್ಪಾದನೆ ಕಡಿಮೆಯಾಗಿದೆ. ಮಾರುಕಟ್ಟೆಯಲ್ಲಿ ತರಕಾರಿ ಆವಕದ ಮೇಲೆ ವ್ಯತಿರಿಕ್ತ ಪರಿಣಾಮ ಉಂಟಾಗಿದೆ ಎನ್ನುತ್ತಾರೆ ವ್ಯಾಪಾರಿಗಳು.

ತಾಲ್ಲೂಕಿನ ಹಿರೇಕೋಡಿ, ನಾಗರಾಳ, ನನದಿ, ಯಕ್ಸಂಬಾ, ಕಬ್ಬೂರ, ನಾಗರಮುನ್ನೋಳಿ, ಕಾಡಾಪುರ, ಕೇರೂರ, ಸಿದ್ದಾಪುರವಾಡಿ, ಖಡಕಲಾಟ ಮೊದಲಾದ ಗ್ರಾಮಗಳಲ್ಲಿ ನೂರಾರು ಎಕರೆ ಪ್ರದೇಶದಲ್ಲಿ ತರಕಾರಿ ಬೆಳೆಯಲಾಗುತ್ತಿದೆ. ಬಹುತೇಕ ರೈತರು ಬೆಳಗಾವಿ ಮಾರುಕಟ್ಟೆಗೆ ತಮ್ಮ ಉತ್ಪನ್ನಗಳನ್ನು ಸಾಗಿಸುತ್ತಿದ್ದಾರೆ.

‘ಪ್ರಸಕ್ತ ವರ್ಷ ಅಕಾಲಿಕ ಮಳೆಯಿಂದಾಗಿ ಟೊಮೆಟೊ, ದೊಡ್ಡ ಮೆಣಸಿನಕಾಯಿ, ಹಾಗಲಕಾಯಿ ಮೊದಲಾದ ಬೆಳೆಗಳು ನೆಲಕಚ್ಚಿವೆ. ಬದನೆ ಬೆಳೆಗೆ ರೋಗ ರುಜಿನಗಳು ಕಾಡುತ್ತಿವೆ. ಸಾವಿರಾರು ರೂಪಾಯಿ ಖರ್ಚು ಮಾಡಿ ಬೆಳೆ ಬೆಳೆಯಲಾಗುತ್ತಿದೆ. ಉತ್ತಮ ಬೆಲೆಯೂ ದೊರೆಯುತ್ತಿದೆ‘ ಎನ್ನುತ್ಯಾರೆ ಬದನೆ ಬೆಳೆಗಾರ ತೌಶಿಫ್ ಪಟೇಲ್.

ಬೆಲೆ ಹೆಚ್ಚಾಗಿರುವುದರಿಂದ ಬೆಳೆದವರಿಗೆ, ಮಾರಾಟಗಾರರಿಗೆ ಹಾಗೂ ಮಧ್ಯವರ್ತಿಗಳಿಗೆ ಮಾತ್ರ ಲಾಭವಾಗುತ್ತಿದೆ. ಗ್ರಾಹಕರಿಗೆ ಹೊರೆಯಾಗಿ ಪರಿಣಮಿಸಿದೆ.

‘ತರಕಾರಿ ತುಟ್ಟಿ ಆಗಿರುವುದು, ಸಮೃದ್ಧಿಯ ಸಂಕೇತವಾದ ಸಂಕ್ರಾಂತಿ ಹಬ್ಬದ ಭೋಗಿ ಭೋಜನದ ಸಂಭ್ರಮಕ್ಕೆ ತಣ್ಣೀರೆರಚಿದೆ. ನೂರಾರು ರೂಪಾಯಿ ತರಕಾರಿ ಖರೀದಿಸಿ ಹಬ್ಬ ಆಚರಿಸುವ ಅನಿವಾರ್ಯತೆ ಎದುರಾಗಿದೆ. ಹಬ್ಬದ ಆಚರಣೆಯನ್ನೂ ಬಿಡಲಾಗದೆ, ಅತ್ತ ಹಣ ಹೊಂದಿಸಲೂ ಆಗದೆ ಪರದಾಡಬೇಕಾದ ಸ್ಥಿತಿ ಬಂದಿದೆ’ ಎಂದು ಗ್ರಾಹಕ ಸಂಜು ಮಾಳಿ ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT