ಬೆಳಗಾವಿ: ‘ಚಿಕ್ಕೋಡಿ ತಾಲ್ಲೂಕಿನ ಹಿರೇಕೋಡಿಯ ನಂದಿ ಪರ್ವತ ಆಶ್ರಮದ ಕಾಮಕುಮಾರ ನಂದಿ ಮಹಾರಾಜರ ಕೊಲೆ ಪ್ರಕರಣದ ಕುರಿತು ಪೊಲೀಸರು ನಿಷ್ಪಕ್ಷಪಾತವಾಗಿ ತನಿಖೆ ನಡೆಸಿ, ಸತ್ಯಾಸತ್ಯತೆ ಹೊರತರಬೇಕು’ ಎಂದು ವಿಶ್ವ ಹಿಂದೂ ಪರಿಷತ್ ಉತ್ತರ ಕರ್ನಾಟಕ ಪ್ರಾಂತದ ಕೋಶಾಧ್ಯಕ್ಷ ಕೃಷ್ಣಭಟ್ ಒತ್ತಾಯಿಸಿದರು.
ಇಲ್ಲಿ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಹಣಕಾಸಿನ ವ್ಯವಹಾರಕ್ಕೆ ಸಂಬಂಧಿಸಿ ಜೈನ ಮುನಿಗಳ ಕೊಲೆಯಾಗಿದೆ ಎಂದು ಪೊಲೀಸರು ಹೇಳುತ್ತಿದ್ದಾರೆ. ಆದರೆ, ನಿರ್ವಾಣ ಮುನಿಗಳು ಕೈಯಲ್ಲಿ ಹಣ ಹಿಡಿಯುವುದಿಲ್ಲ. ಇದು ವೈಚಾರಿಕ ಹತ್ಯೆಯಾಗಿದ್ದು, ಈ ಪ್ರಕರಣದಲ್ಲಿ ವಿದೇಶಿ ಕುತಂತ್ರವಿರುವ ಸಂಶಯ ಮೂಡಿದೆ. ತನಿಖೆ ಅಡ್ಡದಾರಿ ಹಿಡಿಯುತ್ತಿದೆ. ಜಿಹಾದಿಗಳು ಯಾವ ರೀತಿಯಾಗಿ ಆಶ್ರಮಕ್ಕೆ ಬರುತ್ತಾರೆ, ಇಂತಹ ಪ್ರಕರಣದಲ್ಲಿ ಅವರ ಕೈವಾಡ ಏನಿರುತ್ತದೆ ಎಂದು ಹೇಳಲು ಸಾಧ್ಯವಿಲ್ಲ. ಹಾಗಾಗಿ ಪಾರದರ್ಶಕವಾಗಿ ತನಿಖೆ ನಡೆಸಿ, ಆರೋಪಿಗಳಿಗೆ ಕಠಿಣ ಶಿಕ್ಷೆ ವಿಧಿಸಬೇಕು’ ಎಂದು ಆಗ್ರಹಿಸಿದರು.
‘ಮತಾಂತರ ನಿಷೇಧ ಕಾಯ್ದೆ ಹಿಂದಕ್ಕೆ ಪಡೆಯಲು ಮುಂದಾದ ರಾಜ್ಯ ಸರ್ಕಾರದ ನಡೆ ಖಂಡಿಸಿ ಬೆಳಗಾವಿಯಲ್ಲಿ ಆಯೋಜಿಸಿದ್ದ ಪ್ರತಿಭಟನೆಯಲ್ಲಿ ಭಾಗವಹಿಸಲು ಆಗಮಿಸುತ್ತಿದ್ದ ಶಿವಾಪುರದ ಮುಪ್ಪಿನ ಕಾಡಸಿದ್ಧೇಶ್ವರ ಮಠದ ಸ್ವಾಮೀಜಿ ಅಪಘಾತಕ್ಕೀಡಾಗಿ, ಗಂಭೀರವಾಗಿ ಗಾಯಗೊಂಡಿದ್ದರು. ಅವರ ಇಬ್ಬರು ಸೇವಕರು ಸ್ಥಳದಲ್ಲೇ ಸಾವನ್ನಪ್ಪಿದ್ದರು. ಆದರೆ, ಮೃತರ ಕುಟುಂಬಗಳಿಗೆ ಸರ್ಕಾರ ಈವರೆಗೆ ಪರಿಹಾರ ಕೊಟ್ಟಿಲ್ಲ. ಹಾಗಾಗಿ ಹಿಂದೂ ಸಮುದಾಯದ ಪ್ರತಿಯೊಬ್ಬರು ₹11 ಕೊಡಿ. 11 ಜನರಿಗೆ ಈ ವಿಷಯ ತಿಳಿಸಿ. ನಾವೆಲ್ಲರೂ ಸೇರಿಕೊಂಡು ಮೃತಪಟ್ಟವರ ಕುಟುಂಬಕ್ಕೆ ಪರಿಹಾರವಾಗಿ ಕೊಡೋಣ’ ಎಂದರು.
ಕಾರಂಜಿಮಠದ ಗುರುಸಿದ್ಧ ಸ್ವಾಮೀಜಿ, ‘ಧರ್ಮ ಮತ್ತು ಶಿಕ್ಷಣ ಪ್ರಸಾರ ಮಾಡಿದ ಜೈನ ಮುನಿಗಳ ಹತ್ಯೆ ಪ್ರಕರಣದಿಂದ ನಮ್ಮೆಲ್ಲರ ಮನಸ್ಸಿಗೆ ನೋವಾಗಿದೆ. ಈ ಘಟನೆಯನ್ನು ನಾವೆಲ್ಲರೂ ಒಕ್ಕೊರಲಿನಿಂದ ಖಂಡಿಸುತ್ತೇವೆ. ಇಂತಹ ಘಟನೆಗಳು ಮರುಕಳಿಸಬಾರದು. ಯಾವುದೇ ಧರ್ಮದ ಗುರುಗಳ ರಕ್ಷಣೆ ಮಾಡುವುದು ಸರ್ಕಾರ ಮತ್ತು ಸಮಾಜದ ಜವಾಬ್ದಾರಿ. ಸರಿಯಾಗಿ ಆರೋಪಿಗಳ ವಿಚಾರಣೆ ನಡೆಸಿ, ಯಾವ ಕಾರಣಕ್ಕೆ ಹತ್ಯೆಯಾಗಿದೆ ಎಂಬುದನ್ನು ಪತ್ತೆ ಹಚ್ಚಬೇಕು. ಆರೋಪಿಗಳಿಗೆ ಕಠಿಣ ಶಿಕ್ಷೆ ವಿಧಿಸಬೇಕು’ ಎಂದು ಆಗ್ರಹಿಸಿದರು.
ಗಣೇಶಪುರದ ರುದ್ರಕೇಸರಿ ಮಠದ ಹರಿಗುರು ಮಹಾರಾಜ, ‘ಸಾಧು–ಸಂತರ ಹತ್ಯೆ ಮಾಡಿ ಜಿಹಾದಿಗಳು ವಿಕೃತಿ ಮೆರೆದರೆ ಹಿಂದುತ್ವ ನಾಶವಾಗುವುದಿಲ್ಲ. ಹಿಂದೂ ಸಂಸ್ಕೃತಿ ಕಾಪಾಡಲು ನಾವು ಶಕ್ತರಿದ್ದೇವೆ. ನಮಗೆ ಸರ್ಕಾರದ ಅವಶ್ಯಕತೆ ಇಲ್ಲ. ನಾವೆಲ್ಲರೂ ಒಗ್ಗಟ್ಟಾಗಬೇಕು. ನಾವು ಬೀದಿಗಿಳಿದು ಹೋರಾಡಿದರೆ ಸರ್ಕಾರವೇ ನಮಗೆ ತಲೆಬಾಗಬೇಕಾಗುತ್ತದೆ’ ಎಂದರು.
ಕೇದಾರ ಪೀಠದ ಮುತ್ನಾಳ ಶಾಖೆಯ ಶಿವಾನಂದ ಶಿವಾಚಾರ್ಯ ಸ್ವಾಮೀಜಿ, ಗಣಿಕೊಪ್ಪದ ಗಂಗಾಧರ ಸ್ವಾಮೀಜಿ, ಆನಂದ ಕರಲಿಂಗನವರ, ಶ್ರೀಕಾಂತ ಕದಂ, ವಿನೋದ ದೊಡ್ಡಣ್ಣವರ, ಪ್ರಮೋದ ವಕ್ಕುಂದಮಠ ಇದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.