ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬೆಳಗಾವಿ: ಸಂಭ್ರಮದ ಆಯುಧಪೂಜೆ, ವಿಜಯದಶಮಿ

ಜಿಲ್ಲೆಯಾದ್ಯಂತ ಆಚರಣೆ, ಬನ್ನಿ ನೀಡಿ ಶುಭಾಶಯ ವಿನಿಮಯ
Last Updated 15 ಅಕ್ಟೋಬರ್ 2021, 13:29 IST
ಅಕ್ಷರ ಗಾತ್ರ

ಬೆಳಗಾವಿ: ನಗರವೂ ಸೇರಿದಂತೆ ಜಿಲ್ಲೆಯಾದ್ಯಂತ ಆಯುಧಪೂಜೆ ಹಾಗೂ ವಿಜಯದಶಮಿ ಹಬ್ಬವನ್ನು ಜನರು ಗುರುವಾರ ಮತ್ತು ಶುಕ್ರವಾರ ಸಂಭ್ರಮ–ಸಡಗರದಿಂದ ಆಚರಿಸಿದರು.

ನಿತ್ಯ ಜೀವನದಲ್ಲಿ ನೆರವಿಗೆ ಬರುವ ಆಯುಧಗಳು, ಕೃಷಿ ಪರಿಕರಗಳು, ವಾಹನಗಳು ಹಾಗೂ ಎಲೆಕ್ಟ್ರಾನಿಕ್‌ ಉಪಕರಣಗಳಿಗೆ ಪೂಜೆ ಸಲ್ಲಿಸಿದರು. ಕಚೇರಿಗಳು, ಕಾರ್ಖಾನೆಗಳು, ಅಂಗಡಿಗಳು, ಮಳಿಗೆಗಳು ಮೊದಲಾದ ಕೆಲಸದ ಸ್ಥಳಗಳಲ್ಲಿ ಲಕ್ಷ್ಮಿ ಹಾಗೂ ದುರ್ಗಾದೇವಿಗೆ ಪೂಜೆ ನೆರವೇರಿಸಿದರು.

ಹಬ್ಬದ ಅಂಗವಾಗಿ ಕೋಟೆಯ ದುರ್ಗಾ ದೇವಾಲಯ, ಶಾಹೂನಗರದ ದತ್ತ ಮಂದಿರ, ರಾಣಿ ಚನ್ನಮ್ಮ ವೃತ್ತದದಲ್ಲಿರುವ ಗಣಪತಿ ದೇವಾಲಯ, ಹಿಂಡಲಗಾದಲ್ಲಿರುವ ಗಣೇಶ ಮಂದಿರ, ಕಪಿಲೇಶ್ವರ ಮಂದಿರ, ಉಷಾ ಕಾಲೊನಿಯಲ್ಲಿರುವ ಮಹಾಲಕ್ಷ್ಮಿ ದೇವಸ್ಥಾನ ಸೇರಿದಂತೆ ಬಹುತೇಕ ದೇಗುಲಗಳಲ್ಲಿ ವಿಶೇಷ ಪೂಜೆ–ಪುನಸ್ಕಾರಗಳು ನೆರವೇರಿದವು. ಸಂಜೆ ನೂರಾರು ಭಕ್ತರು ಪಾಲ್ಗೊಂಡು ದೇವರ ದರ್ಶನ ಪಡೆದರು.

ನವರಾತ್ರಿ ಅಂಗವಾಗಿ ಶಿವ ಪ್ರತಿಷ್ಠಾನ ಹಿಂದೂಸ್ತಾನ ಸಂಘಟನೆಯಿಂದ ಹಮ್ಮಿಕೊಂಡಿದ್ದ ಸಾಂಪ್ರದಾಯಿಕ ‘ದುರ್ಗಾ ಮಾತಾ ದೌಡ್‌’ ಕಾರ್ಯಕ್ರಮಕ್ಕೂ ತೆರೆಬಿದ್ದಿತು.

ವಿಜಯದಶಮಿ ದಿನವಾದ ಶುಕ್ರವಾರ, ಬನ್ನಿ ನೀಡಿ ಪರಸ್ಪರ ಶುಭಾಶಯ ವಿನಿಮಯ ಮಾಡಿಕೊಂಡರು. ಇದರೊಂದಿಗೆ ನವರಾತ್ರಿ ಉತ್ಸವಕ್ಕೆ ಸಂಭ್ರಮದ ತೆರೆ ಬಿದ್ದಿತು. ಬಹುತೇಕ ದೇವಾಲಯಗಳಲ್ಲಿ ವಿಶೇಷ ಪೂಜೆ ನೆರವೇರಿತು. ‘ಬನ್ನಿ ತೆಗೆದುಕೊಂಡು ನಾವು ಹಾಗೂ ನೀವು ಬಂಗಾರದಂತೆ ಇರೋಣ’ ಎಂದು ಹಬ್ಬದ ಶುಭಾಶಯ ವಿನಿಮಯ ಮಾಡಿಕೊಂಡರು.

ನಗರದ ಜ್ಯೋತಿ ಕಾಲೇಜು ಮೈದಾನದಲ್ಲಿ ಶುಕ್ರವಾರ ನಡೆದ ಸೀಮೋಲ್ಲಂಘನ ಹಾಗೂ ‘ಬನ್ನಿ ಮುರಿಯುವ’ ಸಾಂಪ್ರದಾಯಿಕ ಕಾರ್ಯಕ್ರಮದಲ್ಲಿ ಉತ್ತರ ಮತ ಕ್ಷೇತ್ರದ ಅನಿಲ ಬೆನಕೆ ಹಾಗೂ ದಸರಾ ಸಮಿತಿಯ ಮುಖಂಡರು ಪಾಲ್ಗೊಂಡಿದ್ದರು. ಕೋವಿಡ್ ಕಾರಣದಿಂದಾಗಿ ಹೆಚ್ಚಿನ ಜನರು ಭಾಗವಹಿಸಲು ಅವಕಾಶ ಇರಲಿಲ್ಲ. ಧಾರ್ಮಿಕ ಹಾಗೂ ಸಾಂಪ್ರದಾಯಿಕ ಪ್ರಕ್ರಿಯೆಯನ್ನು ಸರಳವಾಗಿ ನಡೆಸಲಾಯಿತು. ಇದಕ್ಕೂ ಮುನ್ನ, ಚವಾಟ ಗಲ್ಲಿಯಿಂದ ಅಲಂಕೃತ ಎತ್ತನ್ನು ಮೆರವಣಿಗೆಯಲ್ಲಿ ಕರೆದೊಯ್ಯಲಾಯಿತು. ಜ್ಯೋತಿ ಕಾಲೇಜಿನ ಮೈದಾನದಲ್ಲಿ ಬನ್ನಿ ಮುರಿಯುವ ಕಾರ್ಯಕ್ರಮಕ್ಕೆ ಮುನ್ನ ಬನ್ನಿಯ ಸುತ್ತಲೂ ಐದು ಬಾರಿ ಪ್ರದಕ್ಷಿಣೆ ಹಾಕಿಸಲಾಯಿತು. ಮಾರುತಿ ಗಲ್ಲಿ, ಬಸವನ ಗಲ್ಲಿ ಮೊದಲಾದ ಕಡೆಗಳಿಂದಲೂ ಬಂದ ಪಲ್ಲಕ್ಕಿಗಳ ಮೆರವಣಿಗೆ ಜ್ಯೋತಿ ಕಾಲೇಜು ಮೈದಾನದಲ್ಲಿ ಸಮಾವೇಶಗೊಂಡಿತು.

ಬಜರಂಗ ದಳದ ಕಾರ್ಯಕರ್ತರು ಖಾನಾಪುರ ರಸ್ತೆಯ ಪೀರನವಾಡಿ ಕ್ರಾಸ್ ಬಳಿ ರಸ್ತೆಯಲ್ಲಿ ಆಯುಧ ಪೂಜೆ ಕಾರ್ಯಕ್ರಮ ಹಮ್ಮಕೊಂಡಿದ್ದರು. ಭಾಗವಹಿಸಿದ್ದವರಲ್ಲಿ ಬಹುತೇಕರು ಖಡ್ಗಗಳನ್ನು ಹಿಡಿದಿದ್ದರು. ಅವುಗಳನ್ನು ಪ್ರದರ್ಶಿಸುತ್ತಾ, ಝಳಪಿಸುತ್ತಾ ಹಾಗೂ ತಿರುಗಿಸುತ್ತಾ ಡಿಜೆ ಸದ್ದಿಗೆ ಕುಳಿಯುತ್ತಾ ಸಂಭ್ರಮಿಸಿದರು. ಈ ವಿಡಿಯೊ ಸಾಮಾಜಿಕ ಜಾಲತಾಣದಲ್ಲಿ ಹಬ್ಬಿದೆ.

ನಗರದ ಕ್ಯಾಂಪ್ ಪ್ರದೇಶದಲ್ಲಿ ದುರ್ಗಾಮಾತೆ, ರೂಪಕಗಳ ಮೆರವಣಿಗೆ ಸಂಭ್ರಮದಿಂದ ನಡೆಯಿತು. ಯುವಕರು ಚಿತ್ರ, ವಿಚಿತ್ರ ಮುಖವಾಡಗಳನ್ನು ಧರಿಸಿದ್ದು ಗಮನಸೆಳೆಯಿತು. ಕೋವಿಡ್ ಭೀತಿಯ ನಡುವೆಯೂ ನೂರಾರು ಮಂದಿ ಪಾಲ್ಗೊಂಡಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT