ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಗ್ರಾಮ ಸಂಚಾರ’ ಕೈಗೊಂಡ ಶಾಸಕಿ ಲಕ್ಷ್ಮಿ ಹೆಬ್ಬಾಳಕರ

ವಿವಿಧ ಅಭಿವೃದ್ಧಿ ಕಾಮಗಾರಿಗೆ ಚಾಲನೆ
Last Updated 19 ಸೆಪ್ಟೆಂಬರ್ 2021, 14:57 IST
ಅಕ್ಷರ ಗಾತ್ರ

ಬೆಳಗಾವಿ: ಗ್ರಾಮೀಣ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಶಾಸಕಿ ಲಕ್ಷ್ಮಿ ಹೆಬ್ಬಾಳಕರ ವಿವಿಧ ಗ್ರಾಮಗಳಲ್ಲಿ ಸಂಚರಿಸಿ ಹಲವು ಅಭಿವೃದ್ಧಿ ಕಾಮಗಾರಿಗಳಿಗೆ ಭಾನುವಾರ ಚಾಲನೆ ನೀಡಿದರು.

ಕಿಣಿಯೆ ಗ್ರಾಮದ ಸರಸ್ವತಿ ಗಲ್ಲಿಯಲ್ಲಿ ಕಾಂಕ್ರೀಟ್ ರಸ್ತೆ ನಿರ್ಮಾಣ ಕಾಮಗಾರಿಗೆ ಪೂಜೆ ಸಲ್ಲಿಸಿದರು. ಗ್ರಾಮ ಪಂಚಾಯ್ತಿ ಅಧ್ಯಕ್ಷ, ಉಪಾಧ್ಯಕ್ಷರು ಹಾಗೂ ಸದಸ್ಯರು ಶಾಸಕರನ್ನು ಸನ್ಮಾನಿಸಿದರು. ಹಿರಿಯರು, ಗ್ರಾಮ ಪಂಚಾಯ್ತಿ ಅಧ್ಯಕ್ಷ ಸ್ನೇಹಲ್ ಸುತಾರ, ಉಪಾಧ್ಯಕ್ಷ ಮಲ್ಲಪ್ಪ ಪಾಟೀಲ, ಸದಸ್ಯರು, ಮಾರುತಿ ಡುಕರೆ, ವರ್ಷ ಡುಕರೆ, ವಿನಾಯಕ ಪಾಟೀಲ, ಸಂಜು ಹಣಬರ, ಭರ್ಮನಿ ಪಾಟೀಲ ಹಾಗೂ ಕಾರ್ಯಕರ್ತರು ಉಪಸ್ಥಿತರಿದ್ದರು.

ಕಿಣಿಯೆ ಗ್ರಾಮದ ಪಶು ಆಸ್ಪತ್ರೆಗೆ ಭೇಟಿ ನೀಡಿದ ಶಾಸಕಿ ಅಲ್ಲಿನ ಕುಂದುಕೊರತೆಗಳನ್ನು ಆಲಿಸಿದರು. ಪಶುಆಸ್ಪತ್ರೆಯ ಕಟ್ಟಡವನ್ನು ದೊಡ್ಡದಾಗಿ ನಿರ್ಮಿಸುವ ಬಗ್ಗೆ ಜನರು ಹಾಗೂ ಪಶು ವೈದ್ಯಾಧಿಕಾರಿ ಜೊತೆ ಚರ್ಚಿಸಿದರು.

ಕಂಗ್ರಾಳಿ ಬಿ.ಕೆ. ಗ್ರಾಮದಲ್ಲಿ ಕೆರೆಯ ಸೌಂದರ್ಯೀಕರಣ ಕಾಮಗಾರಿಗಳು ಪ್ರಗತಿಯಲ್ಲಿದ್ದು, ಅವುಗಳನ್ನು ಪರಿಶೀಲಿಸಿದರು. ಗಣೇಶ ಮೂರ್ತಿಗಳ ವಿಸರ್ಜನೆ ಕಾರ್ಯಕ್ರಮದಲ್ಲಿ ಪಾಲ್ಗೊಂಡರು. ‘ಗಣೇಶ ಮೂರ್ತಿಗಳ ವಿಸರ್ಜನೆ ಸಲುವಾಗಿ ಪ್ರತ್ಯೇಕವಾಗಿ ಹೊಂಡ ನಿರ್ಮಾಣ ಮಾಡಲಾಗುತ್ತಿದೆ. ಆದಷ್ಟು ಬೇಗ ಎಲ್ಲ ಕಾಮಗಾರಿಗಳು ಮುಕ್ತಾಯಗೊಳ್ಳಲಿವೆ’ ಎಂದು ಎಂದು ಹೆಬ್ಬಾಳಕರ ಗ್ರಾಮಸ್ಥರಿಗೆ ಭರವಸೆ ನೀಡಿದರು.

ಗ್ರಾಮದ ಹಿರಿಯರು, ಗ್ರಾಮ ಪಂಚಾಯ್ತಿ ಉಪಾಧ್ಯಕ್ಷ ಅನಿಲ ಪಾವಸೆ, ಮುಖಂಡರಾದ ದತ್ತ ಪಾಟೀಲ, ಜಯರಾಂ ಪಾಟೀಲ, ಅಡಿವೆಪ್ಪ ಹತ್ತರಗಿ, ಸದೆಪ್ಪ ರಾಜಕಟ್ಟಿ, ಗ್ರಾಮ ಪಂಚಾಯ್ತಿ ಸದಸ್ಯೆ ಅರ್ಚನಾ ಪಾಟೀಲ, ಸಿದ್ದರಾಯಿ ಬೆಳಗಾವಿ ಪಾಲ್ಗೊಂಡಿದ್ದರು.

ಕಂಗ್ರಾಳಿ ಕೆ.ಎಚ್. ಗ್ರಾಮದಲ್ಲಿ ಅಂಗನವಾಡಿ ಕಟ್ಟಡ ಹಾಗೂ ಸರ್ಕಾರಿ ಮರಾಠಿ ಪ್ರಾಥಮಿಕ ಶಾಲೆಯ ನೂತನ ಸ್ಮಾರ್ಟ್ ಕ್ಲಾಸ್ ಕೊಠಡಿಗಳ ಕಟ್ಟಡಗಳ ನಿರ್ಮಾಣ ಕಾಮಗಾರಿಗಳಿಗೆ ಚಾಲನೆ ನೀಡಿದರು. ಹಿರಿಯರು, ಬಾಳು ಪಾಟೀಲ, ಮನೋಹರ ಪಾಟೀಲ, ಮುಖಂಡರಾದ ಲತಾ ಪಾಟೀಲ, ವಿಶಾಲ ಭೋಸ್ಲೆ, ಜ್ಯೋತಿಬಾ ಪಾಟೀಲ, ವಿನಾಯಕ ಪಾಟೀಲ ಇದ್ದರು.

ಈ ವೇಳೆ ಮಾತನಾಡಿದ ಅವರು, ‘ಕ್ಷೇತ್ರದಲ್ಲಿ ವರ್ಷವಿಡೀ ಅಭಿವೃದ್ಧಿ ಯೋಜನೆಗಳು ನಿರಂತರವಾಗಿ ನಡೆಯುತ್ತವೆ. ಯಾವುದೇ ಕಾರಣದಿಂದ ಅಭಿವೃದ್ಧಿಗೆ ತಡೆ ಆಗುವುದಿಲ್ಲ. ನಾನು ಕೂಡ ಜನರೊಂದಿಗೆ ಇರುತ್ತೇನೆ. ಕ್ಷೇತ್ರದ ಅಭಿವೃದ್ಧಿ, ಜನರ ಯೋಗ ಕ್ಷೇಮ ನೋಡಿಕೊಳ್ಳುವುದರ ಹೊರತುಪಡಿಸಿ ನನಗೆ ಬೇರೆ ಕೆಲಸ ಇಲ್ಲ’ ಎಂದು ಹೇಳಿದರು.

‘ಕ್ಷೇತ್ರದ ಜನರು ಸದಾ ನನ್ನೊಂದಿಗಿದ್ದಿದ್ದರಿಂದ ಶಾಸಕಿಯಾಗಿ ಯಶಸ್ವಿ ಕಾರ್ಯನಿರ್ವಹಣೆ ಮಾಡಲು ಸಾಧ್ಯವಾಗುತ್ತಿದೆ. ಜನರೊಂದಿಗೆ ನಮ್ಮದು ಅವಿನಾಭಾವ ಸಂಬಂಧ. ಇದು ಸದಾ ಮುಂದುವರಿಯಲಿದೆ’ ಎಂದರು.

ಹಂಗರಗಾ ಗ್ರಾಮದಲ್ಲಿ ಡಾ.ಬಿ.ಆರ್. ಅಂಬೇಡ್ಕರ್ ಭವನ ಕಟ್ಟಡದ ಕಾಲಂ ಪೂಜೆಯನ್ನು ಸ್ಥಳೀಯ ಜನಪ್ರತಿನಿಧಿಗಳು ನೆರವೇರಿಸಿದರು. ಶಾಸಕರ ಅನುಪಸ್ಥಿತಿಯಲ್ಲಿ ಕಾಂಗ್ರೆಸ್ ಮುಖಂಡ ಚನ್ನರಾಜ ಹಟ್ಟಿಹೊಳಿ ಇದ್ದರು. ಮುಖಂಡರಾದ ಮಹೇಶ ಕಿಳಕರ, ಬಾಳು ಪಾಟೀಲ, ಬಾಲಕೃಷ್ಣ ಕಾಂಬ್ಳೆ, ಎನ್. ತಳವಾರ, ಯಲ್ಲಪ್ಪ ಪಾಟೀಲ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT