ಬೆಳಗಾವಿ: ಕಸ ಸುರಿಯುತ್ತಿರುವುದಕ್ಕೆ ತೀವ್ರ ವಿರೋಧ

7

ಬೆಳಗಾವಿ: ಕಸ ಸುರಿಯುತ್ತಿರುವುದಕ್ಕೆ ತೀವ್ರ ವಿರೋಧ

Published:
Updated:
Deccan Herald

ಬೆಳಗಾವಿ: ಮಹಾನಗರದ ಕಸ ತಂದು ಸುರಿಯಲಾಗುವ ತುರಮರಿ ಗ್ರಾಮಕ್ಕೆ ಬುಧವಾರ ಭೇಟಿ ನೀಡಿದ ಆರೋಗ್ಯ ಸಚಿವ ಶಿವಾನಂದ ಪಾಟೀಲ, ನಗರಾಭಿವೃದ್ಧಿ ಸಚಿವ ಯು.ಟಿ. ಖಾದರ್‌ ಭೇಟಿ ಇಲ್ಲಿನ ಪರಿಸ್ಥಿತಿ ಕಂಡು ದಂಗಾದರು.

ಎಲ್ಲೆಂದರಲ್ಲಿ ಕಸ ಹರಡಿತ್ತು. ಗಬ್ಬು ವಾಸನೆ ತಡೆಯಲಾಗದೇ ಶಿವಾನಂದ ಪಾಟೀಲ, ಮೂಗಿಗೆ ಕರವಸ್ತ್ರ ಹಿಡಿದುಕೊಂಡರು. ಬೇಕಾಬಿಟ್ಟಿ ಸುರಿದ ನಗರದ ತ್ಯಾಜ್ಯವನ್ನು ವೀಕ್ಷಿಸಿದರು.

ಸುದ್ದಿಗಾರರ ಜೊತೆ ಮಾತನಾಡಿದ ಅವರು, ‘ಹಸಿ ಹಾಗೂ ಒಣ ತ್ಯಾಜ್ಯವನ್ನು ವಿಂಗಡಣೆ ಮಾಡಿ ವಿಲೇವಾರಿ ಮಾಡಬೇಕಾಗಿತ್ತು. ಆದರೆ, ಮಹಾನಗರ ಪಾಲಿಕೆ ಇದನ್ನು ಪಾಲಿಸುತ್ತಿಲ್ಲ. ಪಾಲಿಕೆಗೆ ನೋಟಿಸ್‌ ನೀಡುತ್ತೇನೆ’ ಎಂದು ಹೇಳಿದರು.

‘ಪರಿಸರ ಮಾಲಿನ್ಯ ನಿಯಂತ್ರಣ ಮಂಡಳಿಯಿಂದ ವರದಿ ತರಿಸಿಕೊಂಡು, ಮುಂದಿನ ಕ್ರಮಕೈಗೊಳ್ಳುತ್ತೇನೆ’ ಎಂದು ಭರವಸೆ ನೀಡಿದರು.

ಕಸ ಸುರಿಯಬೇಡಿ:

‘ಬೆಳಗಾವಿಯ ಕಸವನ್ನು ನಮ್ಮ ಹಳ್ಳಿಯಲ್ಲಿ ಸುರಿಯಬೇಡಿ. ಗಬ್ಬು ವಾಸನೆ ಉಂಟಾಗಿ, ಉಸಿರಾಡಲು ಸಾಧ್ಯವಾಗುತ್ತಿಲ್ಲ. ನಮ್ಮ ಬದುಕು ನರಕವಾಗಿದೆ’ ಎಂದು ಗ್ರಾಮಸ್ಥರು ತಮ್ಮ ಅಳಲು ತೋಡಿಕೊಂಡರು.

ನಗರಾಭಿವೃದ್ದಿ ಸಚಿವ ಯು.ಟಿ.ಖಾದರ್‌ ಮಾತನಾಡಿ, ಬೆಂಗಳೂರು, ಮೈಸೂರು ಸೇರಿದಂತೆ ರಾಜ್ಯದ ಎಲ್ಲ ಮಹಾನಗರ ಪಾಲಿಕೆಗಳ ವ್ಯಾಪ್ತಿಯಲ್ಲಿ ತ್ಯಾಜ್ಯ ವಿಲೇವಾರಿ ಸಮಸ್ಯೆ ಇದೆ. ಜನರಿಗೆ ತೊಂದರೆಯಾಗದ ರೀತಿ, ಗಬ್ಬು ವಾಸನೆ ಹರಡದಂತೆ, ಕಸ ವಿಲೇವಾರಿ ಮಾಡಲು ಹೊಸ ತಂತ್ರಜ್ಙಾನ ಅಳವಡಿಸುವ ನಿಟ್ಟಿನಲ್ಲಿ ಯೋಜನೆ ರೂಪಿಸಲಾಗುತ್ತಿದೆ ಎಂದರು.

ಸ್ಥಳೀಯ ಶಾಸಕಿ ಲಕ್ಷ್ಮಿ ಹೆಬ್ಬಾಳಕರ ಮಾತನಾಡಿ, ಗ್ರಾಮಸ್ಥರು ಕಳೆದ ಹತ್ತು ವರ್ಷಗಳಿಂದ ನರಕಯಾತನೆ
ಅನುಭವಿಸುತ್ತಿದ್ದಾರೆ. ತ್ಯಾಜ್ಯ ಸುರಿಯುವುದರಿಂದ ಇಲ್ಲಿಯ ಜನರ ಆರೋಗ್ಯ ಹದಗೆಟ್ಟಿದೆ. ಸರ್ಕಾರ ಈ ಕುರಿತು ತಕ್ಷಣ ಕ್ರಮ ಕೈಗೊಳ್ಳಬೇಕು. ತ್ಯಾಜ್ಯ ಕೇಂದ್ರವನ್ನು ಸಮರ್ಪಕವಾಗಿ ನಿರ್ವಹಿಸದ ಗುತ್ತಿಗೆದಾರನ ವಿರುದ್ಧ ತಕ್ಷಣ ಕ್ರಮ ಕೈಗೊಳ್ಳಬೇಕೆಂದು ಸಚಿವರಲ್ಲಿ ಮನವಿ ಮಾಡಿದರು.

ನಗರಾಭಿವೃದ್ಧಿ ಇಲಾಖೆಯ ಪ್ರಧಾನ ಕಾರ‍್ಯದರ್ಶಿ ಅಂಜುಂ ಪರ್ವೇಜ್, ಪಾಲಿಕೆ ಆಯುಕ್ತ ಶಶಿಧರ ಕುರೇರ ಸೇರಿದಂತೆ
ಮಹಾನಗರ ಪಾಲಿಕೆಯ ಇತರ ಅಧಿಕಾರಿಗಳು ಮತ್ತು ತುರಮರಿ, ಸುತ್ತಮುತ್ತಲಿನ ಗ್ರಾಮಸ್ಥರು ಉಪಸ್ಥಿತರಿದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !