ಸೋಮವಾರ, ಸೆಪ್ಟೆಂಬರ್ 16, 2019
26 °C

ಬಾಹ್ಯಾಕಾಶ ತಂತ್ರಜ್ಞಾನ: ಮುಂಚೂಣಿಯಲ್ಲಿ ಭಾರತ- ಎ.ಎಸ್. ಕಿರಣ್‌ಕುಮಾರ್

Published:
Updated:
Prajavani

ಬೆಳಗಾವಿ: ‘ಬಾಹ್ಯಾಕಾಶ ತಂತ್ರಜ್ಞಾನ ಕ್ಷೇತ್ರದಲ್ಲಿ ಜಾಗತಿಕ ಮಟ್ಟದಲ್ಲಿ ಭಾರತ ಮುಂಚೂಣಿಯಲ್ಲಿದೆ. ಗ್ರಾಮೀಣ ಪ್ರದೇಶದ ಅಗತ್ಯಗಳನ್ನು ಪೊರೈಸುವಲ್ಲಿ ಬಾಹ್ಯಾಕಾಶ ತಂತ್ರಜ್ಞಾನ ಅತ್ಯಂತ ಸಮರ್ಥವಾಗಿದೆ’ ಎಂದು ಇಸ್ರೊ ಮಾಜಿ ಅಧ್ಯಕ್ಷ ಎ.ಎಸ್. ಕಿರಣ್‌ಕುಮಾರ್ ತಿಳಿಸಿದರು.

ಇಲ್ಲಿನ ವಿಟಿಯು 21ನೇ ಸಂಸ್ಥಾಪನಾ ದಿನಾಚರಣೆ ಅಂಗವಾಗಿ ಮಂಗಳವಾರ ಆಯೋಜಿಸಿದ್ದ ವಿಶೇಷ ಉಪನ್ಯಾಸ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

‘ದೇಶವು ಅಭಿವೃದ್ಧಿಪಥದಲ್ಲಿ ಸಾಗುವ ನಿಟ್ಟಿನಲ್ಲಿ ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ ಅತ್ಯಂತ ಮಹತ್ವದ ಪಾತ್ರ ವಹಿಸಿದೆ. ಸಮಗ್ರ ಅಭಿವೃದ್ಧಿಗ ಬೇಕಾಗುವ ಎಲ್ಲ ತಂತ್ರಜ್ಞಾನಗಳನ್ನು ಅಳವಡಿಸಿಕೊಳ್ಳುತ್ತಿದೆ. ಇಸ್ರೊದಿಂದ ಉಡಾವಣೆಗೊಳಿಸಿದ ಸಂವಹನ ಉಪಗ್ರಹ ಹಾಗೂ ಭೂ-ಪರಿವೀಕ್ಷಣ ಉಪಗ್ರಹಗಳು ವೈದ್ಯಕೀಯ, ಶಿಕ್ಷಣ, ಪರಿಸರ, ಭೂಮಿ ಹಾಗೂ ಜಲ ಸಂರಕ್ಷಣೆ ಕ್ಷೇತ್ರಗಳಿಗೆ ಬಹಳಷ್ಟು ಕೊಡುಗೆಗಳನ್ನು ನೀಡಿವೆ. ಆದ್ದರಿಂದ ಸಾಮಾನ್ಯ ಜನರ ಸಮಸ್ಯೆಗಳನ್ನು ಪರಿಹರಿಸುವುದಕ್ಕಾಗಿ ಮಾಹಿತಿ ಸಂಗ್ರಹಿಸಲು ಸ್ಥಳೀಯ ಆಡಳಿತ ಸಂಸ್ಥೆಗಳು ಇವುಗಳ ಲಾಭ ಪಡೆದುಕೊಳ್ಳಬೇಕು’ ಎಂದು ಹೇಳಿದರು.

‘ಸಮುದ್ರಯಾನ ಉಪಗ್ರಹ ಹಾಗೂ ಗಗನ ಉಪಗ್ರಹಗಳು ಅತ್ಯಂತ ಮಹತ್ವದ ಮಾಹಿತಿಗಳನ್ನು ಸಂಗ್ರಹಿಸುವಲ್ಲಿ ಸಹಕಾರಿಯಾಗಿವೆ. ನೈಸರ್ಗಿಕ ವಿಪತ್ತು ನಿರ್ವಹಣೆಯಲ್ಲಿ ಸಮುದ್ರ ಯಾತ್ರಿಕರು ಹಾಗೂ ಗಗನಯಾತ್ರಿಕರಿಗೆ ಉಪಯುಕ್ತ ಮಾಹಿತಿ ನೀಡುವಲ್ಲಿ ಮಹತ್ವದ ಪಾತ್ರ ವಹಿಸಿವೆ. ಗಗನ ಉಪಗ್ರಹದಿಂದ ಜಿಪಿಎಸ್ ಮೂಲಕ ನಿರ್ದಿಷ್ಟ ಸ್ಥಳ ಹಾಗೂ ವಸ್ತುಗಳ ಮಾಹಿತಿಯನ್ನು ನಿಖರವಾಗಿ ಪಡೆಯಬಹುದಾಗಿದೆ’ ಎಂದರು.

‌‘ಇಸ್ರೊದಿಂದ ಚಂದ್ರಗ್ರಹದ ಬಗ್ಗೆ ಮಾಹಿತಿ ಸಂಗ್ರಹಿಸಲು ಚಂದ್ರಯಾನ-1 ಯೋಜನೆಯನ್ನು ಪ್ರಥಮ ಬಾರಿಗೆ ಅತ್ಯಂತ ಯಶಸ್ವಿಯಾಗಿ ನಡೆಸಲಾಗಿದೆ. ಹಲವು ಅಡೆತಡೆಗಳ ನಡುವೆಯೂ ಮಂಗಳಯಾನ ಕಾರ್ಯಕ್ರಮವನ್ನು ಮೊದಲ ಪ್ರಯತ್ನದಲ್ಲೇ ಯಶಸ್ವಿಯಾಗಿ ಪೊರೈಸಿದ ಕೀರ್ತಿ ಸಂಸ್ಥೆಗೆ ಸಲ್ಲುತ್ತದೆ. ಮಂಗಳಗ್ರಹದ ಕಕ್ಷೆಗೆ ಸೇರಿದ ಕೆಲವೇ ನಿಮಿಷಗಳಲ್ಲಿ ಉಪಗ್ರಹ ಕಾರ್ಯಾರಾಂಭ ಮಾಡಿರುವುದು ವಿಶೇಷವಾಗಿದೆ’ ಎಂದು ಮಾಹಿತಿ ನೀಡಿದರು.

‘ಬಾಹ್ಯಾಕಾಶ ತಂತ್ರಜ್ಞಾನ ಕ್ಷೇತ್ರದಲ್ಲಿ ಅಮೆರಿಕ, ರಷ್ಯಾ, ಚೀನಾ ಮುಂತಾದ ರಾಷ್ಟ್ರಗಳೊಂದಿಗೆ ಭಾರತ ಪೈಪೋಟಿಯಲ್ಲಿದೆ. ತಾಂತ್ರಿಕ ವಿಶ್ವವಿದ್ಯಾಲಯಗಳು ಹಾಗೂ ಸಂಶೋಧನಾ ಸಂಸ್ಥೆಗಳು ಈ ಕ್ಷೇತ್ರದಲ್ಲಿ ಸಂಶೋಧನೆಯಲ್ಲಿ ತೊಡಗಿಸಿಕೊಳ್ಳಬೇಕು’ ಎಂದು ಸಲಹೆ ನೀಡಿದರು.

‘ವಿಟಿಯು ಇಂಟರ್‌ನ್ಯಾಷನಲ್ ಜರ್ನಲ್ ಆಫ್ ಎಂಜಿನಿಯರಿಂಗ್ ಸೈನ್ಸ್ ಅಂಡ್ ಮ್ಯಾನೇಜ್‌ಮೆಂಟ್’ ಬಿಡುಗಡೆ ಮಾಡಲಾಯಿತು.

ಕುಲಪತಿ ಪ್ರೊ.ಕರಿಸಿದ್ದಪ್ಪ ಸ್ವಾಗತಿಸಿದರು. ಪರೀಕ್ಷಾ ವಿಭಾಗದ ಕುಲಸಚಿವರ ಸತೀಶ ಅಣ್ಣಿಗೇರಿ ವಂದಿಸಿದರು.

Post Comments (+)