ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವೋಟ್ ಮಾಡೋಣ ಬನ್ನಿ

Last Updated 22 ಏಪ್ರಿಲ್ 2019, 12:18 IST
ಅಕ್ಷರ ಗಾತ್ರ

* ಮತದಾನ ನಮಗೆ ಸಿಕ್ಕಿರುವ ಪವಿತ್ರವಾದ ಹಕ್ಕು. ಇದನ್ನು ಉಳಿಸಿಕೊಂಡು ಬೆಳೆಸಿಕೊಂಡು ಹೋಗಬೇಕಾಗಿರುವುದು ನಮ್ಮ ಕರ್ತವ್ಯ. ಈ ಅಂಶವನ್ನು ನಾವು ಅರಿಯಬೇಕು. ಈ ಭಾಗದಲ್ಲಿ ದಕ್ಷಿಣ ಕರ್ನಾಟಕಕ್ಕಿಂತಲೂ ಮತದಾನ ಪ್ರಮಾಣ ಹೆಚ್ಚಾಗಬೇಕು. ಉತ್ತರ ಕರ್ನಾಟಕದವರು ಪ್ರಜಾಪ್ರಭುತ್ವದ ಜೀವಾಳ ಎನ್ನುವುದನ್ನು ತೋರಿಸಲು ಎಲ್ಲರೂ ಮತ ಚಲಾಯಿಸಬೇಕು.

-ಯ.ರು. ಪಾಟೀಲ, ಸಾಹಿತಿ

* ಕಲಿಯದವರಿಗಿಂತ ಹೆಚ್ಚಾಗಿ ಕಲಿತವರೇ ಮತದಾನದಿಂದ ದೂರ ಉಳಿಯುತ್ತಿದ್ದಾರೆ. ಹೀಗೆ ಮಾಡಿ, ಯಾವ ಸರ್ಕಾರವನ್ನೂ ಪರಿಪೂರ್ಣವಾಗಿ ಕಾಣಲಾಗದು; ಅಭಿವೃದ್ಧಿ ನಿರೀಕ್ಷಿಸಲಾಗದು. ಯಾರಿಗಾದರೂ ಮತ ಹಾಕಿ. ಆದರೆ, ಹಕ್ಕು ಚಲಾಯಿಸುವುದನ್ನು ಮರೆಯಬೇಡಿ. ವ್ಯವಸ್ಥೆ ಬಗ್ಗೆ ಮಾತನಾಡಲು ಅರ್ಹರಾಗಬೇಕಾದರೆ ಮತ ಹಾಕಬೇಕು. ಚುನಾವಣೆಯನ್ನು ಹಬ್ಬದಂತೆ ಪರಿಗಣಿಸಬೇಕು.

-ಚಂದ್ರಶೇಖರ ಶಿವಾಚಾರ್ಯ ಸ್ವಾಮೀಜಿ, ಹುಕ್ಕೇರಿ ಹಿರೇಮಠ

* ನನ್ನ ಮತದಾನ ನನ್ನ ಜವಾಬ್ದಾರಿ ಎಂದು ಎಲ್ಲರೂ ಭಾವಿಸಬೇಕು. ಚುನಾವಣೆ ಎಂದರೆ ಪ್ರಜಾಪ್ರಭುತ್ವದ ಉತ್ಸವ, ಸಂಭ್ರಮ ಎಂದು ತಿಳಿಯಬೇಕು. ಪ್ರಜಾಪ್ರಭುತ್ವ ಗಟ್ಟಿಗೊಳಿಸಲು ಸಿಕ್ಕಿರುವ ಅವಕಾಶವನ್ನು ಸದ್ಬಳಕೆ ಮಾಡಿಕೊಳ್ಳಬೇಕು. ಯಾರೂ ಮತದಾನದಿಂದ ದೂರ ಉಳಿಯಬಾರದು. ಜವಾಬ್ದಾರಿಯಿಂದ ತಪ್ಪಿಸಿಕೊಳ್ಳಬಾರದು.

-ದಿವ್ಯಾ ಶಿವರಾಮ್, ಸಿಇಒ, ದಂಡು ಮಂಡಳಿ

* ಪ್ರಜಾಪ್ರಭುತ್ವದಲ್ಲಿ ಮತದಾನ ಅತ್ಯಂತ ಮಹತ್ವದ್ದಾಗಿದೆ. ಎಲ್ಲರೂ ಮತ ಹಾಕಬೇಕು ಎನ್ನುವುದು ಆಯೋಗದ ಆಶಯ. ಇದಕ್ಕಾಗಿ ವ್ಯಾಪಕ ಜಾಗೃತಿ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ. ಇವಿಎಂ ಹಾಗೂ ವಿವಿಪ್ಯಾಟ್‌ ಯಂತ್ರಗಳ ಪ್ರಾತ್ಯಕ್ಷಿಕೆ ನಡೆಸಲಾಗಿದೆ. ಮುಕ್ತ ಹಾಗೂ ನ್ಯಾಯಸಮ್ಮತ ಚುನಾವಣೆಗೆ ಕ್ರಮ ವಹಿಸಲಾಗಿದೆ. ಆತಂಕವಿಲ್ಲದೇ ಬಂದು ಹಕ್ಕು ಚಲಾಯಿಸಿ.

-ಡಾ.ಆರ್. ವಿಶಾಲ್, ಜಿಲ್ಲಾ ಚುನಾವಣಾಧಿಕಾರಿ

* ಮತದಾರರು ದೇಶದ ಸಮಗ್ರ ಅಭಿವೃದ್ಧಿಗಾಗಿ ತಪ್ಪದೇ ಮತದಾನ ಮಾಡಬೇಕು. ಸಂವಿಧಾನಬದ್ಧ ಹಕ್ಕನ್ನು ಸಮರ್ಥವಾಗಿ ಬಳಸಿಕೊಳ್ಳಬೇಕು. ಎಂತಹ ನೀತಿ, ತೆರಿಗೆ ವ್ಯವಸ್ಥೆ ಇರಬೇಕು ಹಾಗೂ ಆಡಳಿತ ಹೇಗಿರಬೇಕು ಎನ್ನುವುದು ಮತ ಚಲಾಯಿಸುವುದನ್ನು ಅವಲಂಬಿಸಿರುತ್ತದೆ. ಮತ ಹಾಕದಿದ್ದರೆ ಯಾವ ಸರ್ಕಾರ ಬಂದರೂ, ಯಾವುದೇ ನೀತಿ ಜಾರಿಗೊಳಿಸಿದರೂ ಒಪ್ಪಬೇಕಾಗುತ್ತದೆ.

-ಎಸ್. ಜಿಯಾವುಲ್ಲಾ, ವ್ಯವಸ್ಥಾಪಕ ನಿರ್ದೇಶಕ, ಸ್ಮಾರ್ಟ್‌ ಸಿಟಿ ಕಂಪನಿ

* ಪ್ರಜಾಪ್ರಭುತ್ವದಲ್ಲಿ ಪ್ರತಿ ಮತಕ್ಕೂ ಮೌಲ್ಯವಿದೆ. ಹೀಗಾಗಿ, ಪ್ರತಿಯೊಬ್ಬರೂ ಮತ ಹಾಕಬೇಕು. ತಮಗೆ ಬೇಕಾದ ಒಳ್ಳೆಯ ಅಭ್ಯರ್ಥಿ ಆಯ್ಕೆ ಮಾಡಿಕೊಳ್ಳುವ ಅವಕಾಶ ಬೆರಳ ತುದಿಯಲ್ಲಿದೆ. ನನ್ನದೊಂದು ಮತದಿಂದ ಏನಾದೀತು ಎನ್ನುವ ಮನೋಭಾವ ಬೇಡ. ಆಸೆ– ಆಮಿಷಕ್ಕೆ ಬಲಿಯಾಗದೇ ವಿವೇಚನೆಯಿಂದ ಮತ ಚಲಾಯಿಸಬೇಕು. ಪ್ರಶ್ನಿಸುವ ನೈತಿಕತೆ ಉಳಿಸಿಕೊಳ್ಳಬೇಕು.

-ಯಶೋದಾ ಎಸ್. ವಂಟಗೋಡಿ, ಡಿಸಿ‍ಪಿ

ಭಾರತದ ಸಂವಿಧಾನ ಹಾಗೂ ಪ್ರಜಾಪ್ರಭುತ್ವದ ಅಡಳಿತ ವ್ಯವಸ್ಥೆ ವಿಶ್ವಕ್ಕೇ ಮಾದರಿಯಾಗಿದೆ. ಪ್ರಜಾಪ್ರಭುತ್ವದ ಯಶಸ್ಸು ಹಾಗೂ ಸಂವಿಧಾನಕ್ಕೆ ಬದ್ಧತೆ ನಮ್ಮೆಲ್ಲರ ಆದ್ಯ ಕರ್ತವ್ಯ. ಇದನ್ನು ತೋರಿಸಲು ಮತದಾನ ಮಹತ್ವದ್ದಾಗಿದೆ. ನಾವೆಲ್ಲರೂ ಮತದಾನದಲ್ಲಿ ಭಾಗಿಯಾಗಿ ಇಡೀ ವಿಶ್ವಕ್ಕೆ ಸಂದೇಶ ರವಾನಿಸಬೇಕಾಗಿದೆ. ವೋಟ್ ಮಾಡೋಣ; ಪ್ರಜಾಪ್ರಭುತ್ವ ಗೆಲ್ಲಿಸೋಣ.

-ಬಿ.ಜಿ. ಧಾರವಾಡ, ಸಹಾಯಕ ಪ್ರಾಧ್ಯಾಪಕ, ಕ್ರಾಂತಿವೀರ ಸಂಗೊಳ್ಳಿರಾಯಣ್ಣ ಬಿ.ಇಡಿ. ಕಾಲೇಜು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT