ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬೆಳಗಾವಿ: ಮತದಾರರ ಪಟ್ಟಿ ಪರಿಷ್ಕರಣೆ– ಯುವ ಮತದಾರರ ಸೇರ್ಪಡೆಗೆ ಅತೀಕ್ ಸೂಚನೆ

Last Updated 27 ನವೆಂಬರ್ 2021, 13:13 IST
ಅಕ್ಷರ ಗಾತ್ರ


ಬೆಳಗಾವಿ: ‘ಮತದಾರರ ಪಟ್ಟಿ ಪರಿಷ್ಕರಣೆ ಹಾಗೂ ಮಿಂಚಿನ ನೋಂದಣಿ ಅಭಿಯಾನ ಸಂದರ್ಭದಲ್ಲಿ ಅರ್ಹ ಯುವಕ–ಯುವತಿಯರ ಸೇರ್ಪಡೆಗೆ ಆದ್ಯತೆ ನೀಡಬೇಕು’ ಎಂದು ಜಿಲ್ಲೆಯ ಮತದಾರರ ಪಟ್ಟಿ ವಿಶೇಷ ಪರಿಷ್ಕರಣೆ ವೀಕ್ಷಕ ಎಲ್.ಕೆ. ಅತೀಕ್ ಸೂಚಿಸಿದರು.

ಇಲ್ಲಿನ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಶನಿವಾರ ನಡೆದ ಬಿಎಲ್‌ಒಗಳ ಸಭೆಯಲ್ಲಿ ಅವರು ಮಾತನಾಡಿದರು.

‘ಮಿಂಚಿನ ನೋಂದಣಿ ಅಭಿಯಾನದಲ್ಲಿ ಕೇವಲ 11 ದಿನಗಳ ಅವಕಾಶ ಇರುವುದರಿಂದ, ಇತ್ತೀಚೆಗೆ 18 ವರ್ಷ ತಲುಪಿದ ಯುವಜನರನ್ನು ಮತದಾರರ ಒಟ್ಟಿಗೆ ಸೇರ್ಪಡೆಗೊಳಿಸಲು ವಿಶೇಷ ಮುತುವರ್ಜಿ ವಹಿಸಬೇಕು. ಅಂತಹ ಒಂದು ಲಕ್ಷಕ್ಕೂ ಅಧಿಕ ಮಂದಿ ಸದ್ಯಕ್ಕೆ ಜಿಲ್ಲೆಯಲ್ಲಿದ್ದಾರೆ. ಅವರನ್ನು ಕಡ್ಡಾಯವಾಗಿ ಪಟ್ಟಿಗೆ ಸೇರಿಸಬೇಕು. ಪದವಿ ಕಾಲೇಜುಗಳಲ್ಲಿ ಜಾಗೃತಿ ಮೂಡಿಸಬೇಕು’ ಎಂದು ನಿರ್ದೇಶನ ನೀಡಿದರು.

‘18 ವರ್ಷದ ಅಂಗವಿಕಲರು ಮತದಾನದ ಹಕ್ಕಿನಿಂದ‌ ವಂಚಿತಗೊಳ್ಳಬಾರದು. ಪ್ರತಿ ಮತಗಟ್ಟೆ ಮಟ್ಟದಲ್ಲಿ ಮನೆ ಮನೆಗೆ ತೆರಳಿ ಪಟ್ಟಿ ಪರಿಷ್ಕರಣೆ ಮಾಡಬೇಕು. ಸೇರ್ಪಡೆಗೆ ಕ್ರಮ ವಹಿಸಬೇಕು’ ಎಂದರು.

‘ಮುಂಬರುವ ಸಾರ್ವತ್ರಿಕ ಚುನಾವಣೆ ದೃಷ್ಟಿಯಿಂದ ಪಟ್ಟಿ ಪರಿಷ್ಕರಣೆಗೆ ಹೆಚ್ಚಿನ ಮಹತ್ವವಿದೆ. ಒಂದೇ ಮತಗಟ್ಟೆಯಲ್ಲಿ ನೂರಾರು ಜನರ ಹೆಸರು ಸೇರ್ಪಡೆ ಅಥವಾ ಹೆಸರು ಕಡಿಮೆಗೊಳಿಸಿದರೆ ಸಂಶಯಗಳು ಉಂಟಾಗುತ್ತವೆ. ಹೀಗಾಗದಂತೆ ಗಮನಹರಿಸಬೇಕು’ ಎಂದು ಹೇಳಿದರು.

‘ಜಿಲ್ಲೆಯಲ್ಲಿ ಎಲ್ಲ ಮತಗಟ್ಟೆ ಮಟ್ಟದ ಅಧಿಕಾರಿಗಳ (ಬಿಎಲ್ಒ) ಸಭೆ ನಡೆಸಲಾಗಿದೆ. ಯಾವುದೇ ಬೂತ್ ಮಟ್ಟದಲ್ಲಿ ಹೆಸರು ಸೇರ್ಪಡೆ ಅಥವಾ ಕಡಿಮೆಗೊಳಿಸುವಿಕೆ ಪ್ರಮಾಣ ಶೂನ್ಯವಾಗದಂತೆ ನೋಡಿಕೊಳ್ಳಬೇಕು ಎಂದು ಕಟ್ಟುನಿಟ್ಟಾಗಿ ಸೂಚನೆ ನೀಡಲಾಗಿದೆ’ ಎಂದು ಜಿಲ್ಲಾಧಿಕಾರಿ ಆರ್.ವೆಂಕಟೇಶಕುಮಾರ್ ತಿಳಿಸಿದರು.

‘ಮತದಾರರ ಸಾಕ್ಷರತೆ ಕ್ಲಬ್‌ಗಳ ಕಾರ್ಯಚಟುವಟಿಕೆಗಳನ್ನು ಇನ್ನಷ್ಟು ಚುರುಕುಗೊಳಿಸುವ ಮೂಲಕ ಮತದಾರರ ಸೇರ್ಪಡೆ ಪ್ರಮಾಣ ಹೆಚ್ಚಿಸಬೇಕು’ ಎಂದು ತಿಳಿಸಿದರು.

‘ಪಟ್ಟಿ ಪರಿಷ್ಕರಣೆಗೆ ಸಂಬಂಧಿಸಿದಂತೆ ಎಲ್ಲಾ ಅಧಿಕಾರಿಗಳು– ಸಿಬ್ಬಂದಿಗೆ ತರಬೇತಿ ನೀಡಿ, ನಿಗದಿತ ನಮೂನೆಗಳನ್ನು ಕೂಡ ಒದಗಿಸಲಾಗಿದೆ. ರಾಜಕೀಯ ಪಕ್ಷಗಳ ಪ್ರತಿನಿಧಿಗಳ ಸಭೆಯನ್ನೂ ನಡೆಸಲಾಗಿದೆ’ ಎಂದರು.

ಜಿ.ಪಂ. ಸಿಇಒ ಎಚ್‌.ವಿ. ದರ್ಶನ್, ಉಪ ವಿಭಾಗಾಧಿಕಾರಿ ರವೀಂದ್ರ ಕರಲಿಂಗಣ್ಣವರ, ಪಾಲಿಕೆ ಆಯುಕ್ತ ಡಾ.ರುದ್ರೇಶ್ ಘಾಳಿ, ಸ್ವೀಪ್ ಸಮಿತಿಯ ಕಾರ್ಯದರ್ಶಿ ಪರಶುರಾಮ್ ದುಡಗುಂಟಿ ಮತ್ತಿತರರು ಉಪಸ್ಥಿತರಿದ್ದರು.

ವೀಕ್ಷಕರ ಸೂಚನೆಗಳು

* ಮತದಾರರ ಪಟ್ಟಿಯಲ್ಲಿ ಲಿಂಗಾನುಪಾತ ಪ್ರಮಾಣ ಹಾಗೂ ಎಪಿಕ್ ಅನುಪಾತ ಪ್ರಮಾಣದಲ್ಲಿ ಸ್ವಲ್ಪಮಟ್ಟಿಗೆ ವ್ಯತ್ಯಾಸ ಕಂಡುಬರುತ್ತಿದೆ. ಈ ಬಗ್ಗೆ ಬಿಎಲ್ಒಗಳು ಗಮನಹರಿಸಬೇಕು.

* ಪಟ್ಟಿ ಪರಿಷ್ಕರಣೆಗೆ ಸಂಬಂಧಿಸಿದಂತೆ ಸಾರ್ವಜನಿಕರ ದೂರುಗಳನ್ನು ಸ್ವೀಕರಿಸಿ ಅವುಗಳನ್ನು ಪರಿಹರಿಸಬೇಕು.

* ಶೂನ್ಯ ಸೇರ್ಪಡೆ ಮತಗಟ್ಟೆಗಳಿಗೆ ಸಂಬಂಧಿಸಿದಂತೆ ಪ್ರತ್ಯೇಕವಾಗಿ ಪರಿಶೀಲನೆ ‌ನಡೆಸಿ ಕಾರಣಗಳನ್ನು ತಿಳಿದುಕೊಳ್ಳಬೇಕು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT