ಮಂಗಳವಾರ, ಜನವರಿ 26, 2021
28 °C

ಬಾಕಿ ಅರ್ಜಿಗಳ ಇತ್ಯರ್ಥಕ್ಕೆ ಸೂಚನೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಬೆಳಗಾವಿ: ‘ಮತದಾರರ ಪಟ್ಟಿಯಲ್ಲಿ ಹೆಸರು ನೋಂದಣಿ, ತಿದ್ದುಪಡಿ ಸೇರಿದಂತೆ ವಿವಿಧ ನಮೂನೆಗಳಲ್ಲಿ ಸ್ವೀಕರಿಸಲಾಗಿರುವ 77,898 ಅರ್ಜಿಗಳ ಪೈಕಿ ಬಾಕಿ ಉಳಿದಿರುವ 471 ಅರ್ಜಿಗಳನ್ನು ಶೀಘ್ರ ಇತ್ಯರ್ಥಪಡಿಸಬೇಕು’ ಎಂದು ಜಿಲ್ಲಾ ಮತದಾರರ ಪಟ್ಟಿಯ ವೀಕ್ಷಕರಾಗಿರುವ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ರಾಜ್ ಇಲಾಖೆ ಪ್ರಧಾನ ಕಾರ್ಯದರ್ಶಿ ಎಲ್.ಕೆ. ಅತೀಕ್ ಸೂಚಿಸಿದರು.

ಇಲ್ಲಿನ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಗುರುವಾರ ನಡೆದ ಮತದಾರರ ಪಟ್ಟಿ ಪರಿಶೀಲನೆ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

‘ಜಿಲ್ಲೆಯ 18 ವಿಧಾನಸಭಾ ಮತಕ್ಷೇತ್ರಗಳಲ್ಲಿ 2020ರ ಫೆ.8ರಿಂದ ಡಿ.17ರವರೆಗೆ 6, 6ಎ, 7, 8 ಹಾಗೂ 8ಎ ನಮೂನೆಗಳಲ್ಲಿ ಒಟ್ಟಾರೆ 78,898 ಅರ್ಜಿಗಳನ್ನು ಸ್ವೀಕರಿಸಲಾಗಿದೆ. ಇದರಲ್ಲಿ 69,062 ಅರ್ಜಿಗಳನ್ನು ಪರಿಷ್ಕರಣೆಗೆ ಸ್ವೀಕರಿಸಿ ಅವುಗಳ ಪೈಕಿ 68,920 ಅರ್ಜಿಗಳನ್ನು ಅಪ್‌ಡೇಟ್‌ ಮಾಡಲಾಗಿದ್ದು, 471 ಬಾಕಿ ಉಳಿದಿವೆ. ಜಿಲ್ಲೆಯಲ್ಲಿರುವ 67ಸಾವಿರ ಅಂಗವಿಕಲರ ಪೈಕಿ 25ಸಾವಿರ ಜನರು ಮತದಾರರ ಪಟ್ಟಿಯಲ್ಲಿದ್ದಾರೆ. ಒಟ್ಟು ಆಂಗವಿಕಲರ ಪೈಕಿ ಮಕ್ಕಳು ಮತ್ತಿತರರನ್ನು ಹೊರತುಪಡಿಸಿ ಉಳಿದ ಅರ್ಹರನ್ನು ಮತದಾರರ ಪಟ್ಟಿಯಲ್ಲಿ ಹೆಸರು ನೋಂದಣಿಗೆ ಕ್ರಮ ವಹಿಸಬೇಕು’ ಎಂದು ನಿರ್ದೇಶನ ನೀಡಿದರು.

‘ಮತದಾರರ ಪಟ್ಟಿಯಿಂದ ಹೆಸರು ತೆಗೆಯುವುದು, ತಿದ್ದುಪಡಿ, ಸ್ಥಳಾಂತರ, ಬದಲಾವಣೆಗೆ ಸಂಬಂಧಿಸಿದ ಅರ್ಜಿಗಳನ್ನು ಇತ್ಯರ್ಥಪಡಿಸುವಾಗ ಜಾಗರೂಕತೆ ವಹಿಸಬೇಕು. ಯುವ ಹಾಗೂ ಮಹಿಳಾ ಮತದಾರರ ನೋಂದಣಿ ಪ್ರಮಾಣ ಹೆಚ್ಚಿಸಲು ಆದ್ಯತೆ ನೀಡಬೇಕು. ಸಾರ್ವಜನಿಕ ದೂರುಗಳ ನಿವಾರಣೆಗೆ ಚುನಾವಣಾ ಆಯೋಗದ ಮಾರ್ಗಸೂಚಿ ಅನ್ವಯ ವ್ಯವಸ್ಥೆ ಕಲ್ಪಿಸಬೇಕು’ ಎಂದರು.

‘ಮತದಾರರ ಪಟ್ಟಿ ಪರಿಷ್ಕರಣೆಗೆ ಸಂಬಂಧಿಸಿದಂತೆ ಬಹುತೇಕ ಅರ್ಜಿಗಳನ್ನು ಇತ್ಯರ್ಥಪಡಿಸಲಾಗಿದೆ. ಬಾಕಿ ಇರುವ ಅರ್ಜಿಗಳ ಇತ್ಯರ್ಥಕ್ಕೆ ನಿಯಮಾವಳಿ ಪ್ರಕಾರ ಕ್ರಮ ಕೈಗೊಳ್ಳಲಾಗಿದೆ’ ಎಂದು ಜಿಲ್ಲಾಧಿಕಾರಿ ಎಂ.ಜಿ. ಹಿರೇಮಠ ತಿಳಿಸಿದರು.

ಜಿಲ್ಲಾ ಪಂಚಾಯಿತಿ ಸಿಇಒ ದರ್ಶನ್ ಎಚ್.ವಿ., ಹೆಚ್ಚುವರಿ ಜಿಲ್ಲಾಧಿಕಾರಿ ಅಶೋಕ ದುಡಗುಂಟಿ, ಚಿಕ್ಕೋಡಿ ಉಪ ವಿಭಾಗಾಧಿಕಾರಿ ಯುಕೇಶ್‌ಕುಮಾರ್ ಇದ್ದರು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು