ಬೆಳಗಾವಿ: ‘ಬಹುವಿಷಯಕ ಅಧ್ಯಯನ ಮತ್ತು ಸಂಶೋಧನೆ ಕೈಗೊಳ್ಳಲು ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯವು ರಾಜೀವ್ ಗಾಂಧಿ ಆರೋಗ್ಯ ವಿಜ್ಞಾನಗಳ ವಿಶ್ವವಿದ್ಯಾಲಯದೊಂದಿಗೆ ಒಡಂಬಡಿಕೆ ಮಾಡಿಕೊಂಡಿದೆ’ ಎಂದು ಕುಲಪತಿ ಪ್ರೊ.ಎಸ್. ವಿದ್ಯಾಶಂಕರ ಹೇಳಿದರು.
ಇಲ್ಲಿನ ವಿಟಿಯುದಲ್ಲಿ ಮಂಗಳವಾರ ನಡೆದ 23ನೇ ಘಟಿಕೋತ್ಸವದಲ್ಲಿ ಮಾತನಾಡಿದ ಅವರು, ‘ವೈದ್ಯಕೀಯ ಉಪಕರಣಗಳ ತಯಾರಿಕೆಗೆ ವಿಜ್ಞಾನ ಮತ್ತು ತಂತ್ರಜ್ಞಾನದ ಅಗತ್ಯವಿದೆ. ಹಾಗಾಗಿ ಈ ಒಪ್ಪಂದ ಮಾಡಿಕೊಳ್ಳಲಾಗಿದ್ದು, ವೈದ್ಯಕೀಯ ಕ್ಷೇತ್ರದಲ್ಲಿನ ಕೋರ್ಸ್‌ಗಳನ್ನು ಎಂಜಿನಿಯರಿಂಗ್ ವಿದ್ಯಾರ್ಥಿಗಳು ಅಧ್ಯಯನ ಮಾಡಬಹುದು. ಜತೆಗೆ ವೈದ್ಯಕೀಯ ವಿದ್ಯಾರ್ಥಿಗಳೊಂದಿಗೆ ಜಂಟಿಯಾಗಿ ಪ್ರೊಜೆಕ್ಟ್ ಮತ್ತು ಸಂಶೋಧನೆಗಳನ್ನು ಕೈಗೆತ್ತಿಕೊಳ್ಳಬಹುದು’ ಎಂದರು.
‘ಈ ಯೋಜನೆ ಅನುಷ್ಠಾನ ಪ್ರಗತಿಯಲ್ಲಿದ್ದು, ಇದೇ ಶೈಕ್ಷಣಿಕ ವರ್ಷ ಅಧ್ಯಯನ ಆರಂಭವಾಗಬಹುದು. ಇದಕ್ಕೆ ಪೂರಕವಾಗಿ ಎಂಜಿನಿಯರಿಂಗ್ ಕೋರ್ಸ್‌ನ ಪಠ್ಯಕ್ರಮದಲ್ಲಿ ‘ಬಯಾಲಜಿ ಫಾರ್ ಎಂಜಿನಿಯರ್ಸ್’ ಎಂಬ ವಿಷಯವನ್ನೂ ಅಳವಡಿಸಿಕೊಳ್ಳಲಾಗಿದೆ’ ಎಂದು ತಿಳಿಸಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.