7
ಅಥಣಿಯ 11ನೇ ವಾರ್ಡ್‌ ನಿವಾಸಿಗಳ ಬವಣೆ

ಮೂಲಸೌಲಭ್ಯಗಳಿಲ್ಲದೇ ಬಳಲುತ್ತಿರುವ ಬಡಾವಣೆ

Published:
Updated:
ಸಂಗಮೇಶ ನಗರದಲ್ಲಿ ಕೊಳಚೆ ಪ್ರದೇಶ ನಿರ್ಮಾಣವಾಗಿದೆ

ಅಥಣಿ: ಇಲ್ಲಿನ 11ನೇ ವಾರ್ಡ್‌ನಲ್ಲಿ ಮೂಲಸೌಲಭ್ಯಗಳ ಕೊರತೆಯಿಂದ ನಿವಾಸಿಗಳು ತೊಂದರೆ ಅನುಭವಿಸುತ್ತಾರೆ. ಸ್ವಚ್ಛ ಭಾರತ ಅಭಿಯಾನ ಜಾರಿಯಾಗಿದ್ದರೂ, ಇಲ್ಲಿ ಅದು ಸಮರ್ಪಕವಾಗಿ ಅನುಷ್ಠಾನಗೊಂಡಿಲ್ಲ.

ಪಟ್ಟಣದಲ್ಲಿ ಒಟ್ಟು 15 ವಾರ್ಡ್‌ಗಳಿದ್ದವು. ಪುನರ್‌ ವಿಂಗಡಣೆ ನಂತರ 11 ವಾರ್ಡ್‌ಗಳಾಗಿವೆ. ಶಂಕರನಗರ, ಗಸ್ತಿ ಪ್ಲಾಟ್, ಲಕ್ಷ್ಮಿನಾರಾಯಣ ನಗರ, ಕನಕ ನಗರ ಮತ್ತು ಸಂಗಮೇಶ ನಗರ ವ್ಯಾಪ್ತಿಯನ್ನು 11ನೇ ವಾರ್ಡ್‌ ಒಳಗೊಂಡಿದೆ. ಶಂಕರನಗರದಲ್ಲಿ ಮಾತ್ರ ರಸ್ತೆ ಮತ್ತಿತರ ವ್ಯವಸ್ಥೆ ಇದೆ. ಉಳಿದ ಕಡೆಗಳಲ್ಲಿ ದುಸ್ಥಿತಿ ಕಂಡುಬರುತ್ತಿದೆ. ಚರಂಡಿ ವ್ಯವಸ್ಥೆಯೂ ಇಲ್ಲವಾಗಿದೆ.

ಮಳೆಯಾದರೆ ರಸ್ತೆಗಳು ಕೆಸರುಗದ್ದೆಯಂತಾಗುತ್ತವೆ. ಮನೆಗಳ ಹಿಂದೆ, ಮುಂದೆ ಅಥವಾ ಪಕ್ಕದಲ್ಲಿ ಕೊಳಚೆ ನೀರಿನ ಸಮಸ್ಯೆ. ನೀರು ಹರಿಯುವುದಕ್ಕೆ ವ್ಯವಸ್ಥೆ ಇಲ್ಲದಿರುವುದರಿಂದ, ವಾತಾವರಣವೂ ಹಾಳಾಗುತ್ತಿದೆ.

‘ಗಸ್ತಿ ಪ್ಲಾಟ್, ಲಕ್ಷ್ಮಿನಾರಾಯಣ ನಗರ, ಕನಕ ನಗರದಲ್ಲಿ ಬೀದಿ ದೀಪಗಳ ವ್ಯವಸ್ಥೆ ಸರಿಯಾಗಿಲ್ಲ. ಚರಂಡಿಯೂ ಇಲ್ಲ. ಸೌಲಭ್ಯಗಳ ಕೊರತೆ ಇದೆ. ಪುರಸಭೆ ಅಧಿಕಾರಿ ಬಳಿ ಹೋಗಿ ವಿಚಾರಿಸಿದರೆ, ನೀವು ಸಂಕೋನಟ್ಟಿ ಪಂಚಾಯ್ತಿ ವ್ಯಾಪ್ತಿಯಲ್ಲಿ ಬರುತ್ತೀರಿ ಎನ್ನುತ್ತಾರೆ. ನಾವು ಪುರಸಭೆಗೆ ತೆರಿಗೆ ತುಂಬುತ್ತಿದ್ದೇವೆ. ಸೌಲಭ್ಯ ಕಲ್ಪಿಸುವ ವಿಷಯ ಬಂದಾಗ ಪಂಚಾಯ್ತಿ ಕಡೆಗೆ ಕೈ ತೋರುತ್ತಾರೆ. ಇದ್ಯಾವ ನ್ಯಾಯ?’ ಎಂದು ವಕೀಲ ರಾಜಶೇಖರ ಅರಗೊಡ್ಡಿ ಕೇಳಿದರು.

‘ಎರಡು ಬಾರಿ ನಮ್ಮ ದುಡ್ಡಿನಲ್ಲಿ ನಾವೇ ರಸ್ತೆ ಮಾಡಿಸಿಕೊಂಡಿದ್ದೇವೆ. ನಂತರ ಪುರಸಭೆಯಿಂದ 5 ವರ್ಷದಲ್ಲಿ ಐದು ಟಿಪ್ಪರ್‌ನಷ್ಟು ಕಲ್ಲಿನ ಪುಡಿ ಹಾಕಿದ್ದಾರೆ. ಪುರಸಭೆಗೆ ಹಲವು ಬಾರಿ ಮನವಿ ಕೊಟ್ಟರೂ ಪ್ರಯೋಜನವಾಗಿಲ್ಲ. ಸಂಗಮೇಶ ನಗರದಲ್ಲಿ ಚರಂಡಿ ಕಾಮಗಾರಿ ನಡೆದಿಲ್ಲ. ಹಿಂದಿನ ಶಾಸಕರ ಗಮನಕ್ಕೂ ತಂದಿದ್ದೆವು. ಅವರು ಪುರಸಭೆ ಅಧ್ಯಕ್ಷರು, ಪುರಸಭೆ ಮುಖ್ಯಾಧಿಕಾರಿಗೆ ಸೂಚಿಸಿದ್ದರು. ಅಧಿಕಾರಿಗಳು ಪರಿಶೀಲನೆ ನಡೆಸಿದ್ದರಾದರೂ, ಕೆಲಸ ಆಗಿಲ್ಲ’ ಎಂದು ದೂರಿದರು.

‘ವಾರ್ಡ್‌ ನಿವಾಸಿಯಾದ ಪುರಸಭೆ ಸದಸ್ಯರು ಅವರ ಮನೆಯ ಅಕ್ಕಪಕ್ಕದಲ್ಲಿ ಮಾತ್ರ ರಸ್ತೆ ಮಾಡಿಸಿಕೊಂಡಿದ್ದಾರೆ. ಉಳಿದ ಪ್ರದೇಶಗಳನ್ನು ಮರೆತಿದ್ದಾರೆ. ಶಂಕರ ನಗರದ ಕಲ್ಮೇಶ್ವರ ಗುಡಿ ಬಳಿ ರಸ್ತೆ ಬಹಳ ಹದಗೆಟ್ಟು ಹೋಗಿದೆ’ ಎಂದು ನಿವಾಸಿ ಅಭಯ ಸಗರಿ ತಿಳಿಸಿದರು.

‘ಅದು ಅತಿ ದೊಡ್ಡ ವಾರ್ಡ್ ಆಗಿರುವುದರಿಂದ, ಅನುದಾನದ ಕೊರತೆ ಇರುವುದರಿಂದ ಬಹಳ ಕೆಲಸ ಮಾಡಲು ಆಗಿಲ್ಲ. ಬಜೆಟ್‌ನಲ್ಲಿ ಪ್ರಸ್ತಾಪಿಸಿದ ಕೆಲವು ಕಾಮಗಾರಿಗಳು ನಡೆದಿವೆ. ಅನುದಾನದ ಲಭ್ಯತೆ ಆಧರಿಸಿ ಯೋಜನೆಗಳನ್ನು ಕೈಗೊಳ್ಳಲಾಗುವುದು’ ಎಂದು ಪುರಸಭೆ ಮುಖ್ಯಾಧಿಕಾರಿ ಮಹಾಂತೇಶ ಕವಲಾಪುರ ಪ್ರತಿಕ್ರಿಯಿಸಿದರು.

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !