ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ನೀರಿನ ಸಮಸ್ಯೆಗೆ ಶಾಶ್ವತ ಪರಿಹಾರ ಅಗತ್ಯ’

ಜಿಲ್ಲಾ ನೀರು ಮತ್ತು ನೈರ್ಮಲ್ಯ ಮಿಷನ್ ಸಭೆ
Last Updated 24 ಜೂನ್ 2019, 12:40 IST
ಅಕ್ಷರ ಗಾತ್ರ

ಬೆಳಗಾವಿ: ‘ಜಿಲ್ಲೆಯಲ್ಲಿ ನೀರಿನ ಸಮಸ್ಯೆಗೆ ಶಾಶ್ವತ ಪರಿಹಾರ ಕಂಡುಕೊಳ್ಳುವ ಅಗತ್ಯವಿದೆ’ ಎಂದು ಜಿಲ್ಲಾ ಪಂಚಾಯ್ತಿ ಸಿಇಒ ಡಾ.ಕೆ.ವಿ. ರಾಜೇಂದ್ರ ತಿಳಿಸಿದರು.

ಸೋಮವಾರ ನಡೆದ ಜಿಲ್ಲಾ ನೀರು ಮತ್ತು ನೈರ್ಮಲ್ಯ ಮಿಷನ್ ಸಭೆಯಲ್ಲಿ ಅವರು ಮಾತನಾಡಿದರು.

‘ಜಿಲ್ಲೆಯಲ್ಲಿ ಅನೇಕ ಜಲ ಮೂಲಗಳು ಬತ್ತಿ ಹೋಗಿವೆ. ಅದೇ ರೀತಿ ಕೊಳವೆಬಾವಿಗಳೂ ಬರಿದಾಗಿವೆ. ಜಿಲ್ಲೆಯನ್ನು ಬರನಿರೋಧಕ ಮಾಡಬೇಕಾದರೆ ಈಗಿರುವ ಜಲ ಮೂಲಗಳನ್ನು ಬಳಸಿಕೊಂಡು ಎನ್‌ಆರ್‌ಡಬ್ಲ್ಯುಪಿ (ರಾಷ್ಟ್ರೀಯ ಗ್ರಾಮೀಣ ಕುಡಿಯುವ ನೀರಿನ ಯೋಜನೆ)ಯಲ್ಲಿ ಶಾಶ್ವತ ಪರಿಹಾರ ಕಂಡುಹಿಡಿಯಲು ಆದ್ಯತೆ ನೀಡಬೇಕು’ ಎಂದರು.

‘ಜಿಲ್ಲೆಯಲ್ಲಿ ಪ್ರತಿ ವರ್ಷ ಎದುರಾಗುವ ಕುಡಿಯುವ ನೀರಿನ ಸಮಸ್ಯೆಯನ್ನು ನೀಗಿಸಲು, ಶಾಶ್ವತ ಯೋಜನೆಯನ್ನು ರೂಪಿಸಿ ಕೊಳವೆಬಾವಿ ಮತ್ತು ಪೈಪ್‌ಲೈನ್‌ಗಳಿಗೆ ಕೊನೆಯ ಆದ್ಯತೆ ನೀಡಬೇಕು’ ಎಂದು ಹೇಳಿದರು.

ಕಾಲಮಿತಿಯಲ್ಲಿ ಪೂರ್ಣಗೊಳಿಸಿ:‘ಕುಡಿಯುವ ನೀರಿನ ಯೋಜನೆಗಳನ್ನು ಬಾಕಿ ಉಳಿದ (ಮುಂದುವರಿದ) ಕಾಮಗಾರಿಗಳನ್ನು ಜುಲೈ ಅಂತ್ಯದವರೆಗೆ ಪೂರ್ಣಗೊಳಿಸಲು ಸರ್ಕಾರ ನಿರ್ದೇಶನ ನೀಡಿದೆ. ಆದ್ದರಿಂದ ಹಳೆಯ ಕಾಮಗಾರಿಗಳನ್ನು ಕಾಲಮಿತಿಯಲ್ಲಿ ಪೂರ್ಣಗೊಳಿಸಬೇಕು. ಗ್ರಾಮಗಳಲ್ಲಿ ಕುಡಿಯುವ ನೀರಿನ ಯೋಜನೆಗಳನ್ನು ಅವರೇ ನಿರ್ಧರಿಸಲು ಗ್ರಾಮ ಮಟ್ಟದ ನೀರು-ನೈರ್ಮಲ್ಯ ಸಮಿತಿಯಲ್ಲಿ ಚರ್ಚಿಸಿ, ನಿರ್ಧರಿಸಿದ ಬಳಿಕ ಜಿಲ್ಲಾ ಪಂಚಾಯ್ತಿ ಹಂತದಲ್ಲಿ ಅನುಮೋದನೆ ನೀಡಲಾಗುವುದು’ ಎಂದು ತಿಳಿಸಿದರು.

‘ಜಿಲ್ಲೆಯಲ್ಲಿ ಶಿಥಿಲಗೊಂಡಿರುವ, ಕೆಡವಬೇಕಾಗಿರುವ ಓವರ್‌ಹೆಡ್ ಟ್ಯಾಂಕ್‌ಗಳ ಸಮೀಕ್ಷೆ ನಡೆಸಿ, 2 ವಾರಗಳಲ್ಲಿ ವರದಿ ನೀಡಬೇಕು. ಅಂತೆಯೇ ಈಗಾಗಲೇ ನಿರ್ಮಣಗೊಂಡು ಬಳಕೆ ಮಾಡದಿರುವ ಬಗ್ಗೆಯೂ ಪರಿಶೀಲಿಸಿ ಸಮಗ್ರ ವರದಿ ಸಲ್ಲಿಸಬೇಕು’ ಎಂದು ಹೇಳಿದರು.

‘ಓವರ್‌ಹೆಡ್ ಟ್ಯಾಂಕ್‌ಗಳನ್ನು ಕೆಡವಲು ಬೇಕಾದ ಸಂಪನ್ಮೂಲ ಗ್ರಾಮ ಪಂಚಾಯ್ತಿ ಬಳಿ ಇಲ್ಲದಿರುವುದರಿಂದ ಜಿಲ್ಲಾ ಪಂಚಾಯ್ತಿ ವತಿಯಿಂದ ಇದನ್ನು ಕೈಗೊಳ್ಳಬೇಕು’ ಎಂದು ಕಿತ್ತೂರು ಶಾಸಕ ಮಹಾಂತೇಶ ದೊಡ್ಡಗೌಡರ ಸಲಹೆ ನೀಡಿದರು.

ಕ್ರಮ ಕೈಗೊಳ್ಳಬೇಕು:‘ಈಗಾಗಲೇ ನಿರ್ಮಾಣಗೊಂಡು ಜನರ ಬಳಕೆಗೆ ಸಾಧ್ಯವಾಗದಿರುವ ಟ್ಯಾಂಕ್‌ಗಳ ಬಗ್ಗೆಯೂ ಸೂಕ್ತ ಕ್ರಮ ವಹಿಸಬೇಕು’ ಎಂದು ಶಾಸಕಿ ಲಕ್ಷ್ಮಿ ಹೆಬ್ಬಾಳಕರ್ ಹೇಳಿದರು. ‘ನನ್ನ ಕ್ಷೇತ್ರದ ವ್ಯಾಪ್ತಿಯಲ್ಲಿನ ಗ್ರಾಮಗಳಿಗೆ ಶಾಶ್ವತ ಕುಡಿಯುವ ನೀರಿನ ಯೋಜನೆ ಕೈಗೆತ್ತಿಕೊಳ್ಳಬೇಕು’ ಎಂದು ಆಗ್ರಹಿಸಿದರು.

‘ಬೈಲಹೊಂಗಲ ತಾಲ್ಲೂಕಿಗೆ ನಿಗದಿಪಡಿಸುವ ಅನುದಾನವನ್ನು ಕಿತ್ತೂರು ಹಾಗೂ ಬೈಲಹೊಂಗಲ ವಿಧಾನಸಭಾ ಕ್ಷೇತ್ರಗಳ ವ್ಯಾಪ್ತಿಯಲ್ಲಿನ ಗ್ರಾಮಗಳಿಗೆ ಸಮಾನವಾಗಿ ಹಂಚಿಕೆಯಾಗುವ ರೀತಿಯಲ್ಲಿ ಅಧಿಕಾರಿಗಳು ಕ್ರಿಯಾಯೋಜನೆ ರೂಪಿಸಬೇಕು’ ಎಂದು ಶಾಸಕ ಮಹಾಂತೇಶ ಕೌಜಲಗಿ ಸಲಹೆ ನೀಡಿದರು.

‘ನನ್ನ ಕ್ಷೇತ್ರದಲ್ಲಿ ಕುಡಿಯುವ ನೀರಿನ ತೀವ್ರ ಸಮಸ್ಯೆ ಎದುರಿಸುತ್ತಿರುವ ಗ್ರಾಮಗಳಿಗೆ ಹೆಚ್ಚಿನ ಅನುದಾನ ಒದಗಿಸುವ ಮೂಲಕ ಸಮಸ್ಯೆ ಪರಿಹರಿಸಬೇಕು’ ಎಂದು ಕಿತ್ತೂರು ಶಾಸಕ ಮಹಾಂತೇಶ ದೊಡ್ಡಗೌಡರ ಸೂಚಿಸಿದರು.

₹ 93.25 ಕೋಟಿ ಅನುದಾನ:‘ಗ್ರಾಮೀಣ ಕುಡಿಯುವ ನೀರಿನ ಯೋಜನೆಗಳಿಗೆ 2019–20ನೇ ಸಾಲಿಗೆ ಜಿಲ್ಲೆಯ ಬೆಳಗಾವಿ ಹಾಗೂ ಚಿಕ್ಕೋಡಿ ವಿಭಾಗಗಳಿಗೆ ಒಟ್ಟಾರೆ ₹ 93.25 ಕೋಟಿ ಅನುದಾನ ನಿಗದಿಪಡಿಸಲಾಗಿದೆ. ಬೆಳಗಾವಿ ವಿಭಾಗಕ್ಕೆ ₹ 47.03 ಕೋಟಿ ಚಿಕ್ಕೋಡಿಗೆ ₹ 51.02 ಕೋಟಿ ಅನುದಾನವನ್ನು ಸರ್ಕಾರ ನಿಗದಿಪಡಿಸಿದೆ. ಗ್ರಾಮ ಯೋಜನೆ, ಬಹುಗ್ರಾಮ ಯೋಜನೆ ಮತ್ತು ವಿಶೇಷ ಅಭಿವೃದ್ಧಿ ಯೋಜನೆಯಡಿ ಬೆಳಗಾವಿ ವಿಭಾಗದಲ್ಲಿ ಈಗಾಗಲೇ ಕೆಲಸ ಚಾಲ್ತಿಯಲ್ಲಿರುವ 132 ಹಳೆ ಕಾಮಗಾರಿಗಳಿಗೆ ₹ 13.75 ಕೋಟಿ ಮತ್ತು ಹೊಸ ಕಾಮಗಾರಿಗಳಿಗೆ ₹ 33.75 ಕೋಟಿ ಅನುದಾನ ಹಂಚಿಕೆ ಮಾಡಲಾಗಿದೆ. ಅದೇ ರೀತಿ ಚಿಕ್ಕೋಡಿ ವಿಭಾಗದಲ್ಲಿ 551 ಹಳೆ ಕಾಮಗಾರಿಗಳಿಗೆ ₹ 29.55 ಕೋಟಿ ಮತ್ತು ಹೊಸ ಕಾಮಗಾರಿ ಕೈಗೊಳ್ಳಲು ₹ 21.47 ಕೋಟಿ ಒದಗಿಸಲಾಗಿದೆ’ ಎಂದು ಜಿಲ್ಲಾ ಪಂಚಾಯ್ತಿ ಉಪ ಕಾರ್ಯದರ್ಶಿ ಎಸ್.ಬಿ. ಮುಳ್ಳಳ್ಳಿ ಮಾಹಿತಿ ನೀಡಿದರು.

ಈಚೆಗೆ ನಡೆದ ಸಾಮಾನ್ಯ ಸಭೆಗೆ ಗೈರಾಗಿ ಸದಸ್ಯರ ಅಸಮಾಧಾನಕ್ಕೆ ತುತ್ತಾಗಿದ್ದ ಜಿಲ್ಲಾ ಪಂಚಾಯ್ತಿ ಅಧ್ಯಕ್ಷೆ ಆಶಾ ಐಹೊಳೆ ಈ ಸಭೆಯಲ್ಲಿ ಭಾಗವಹಿಸಿದ್ದರು. ಅವರ ಅಧ್ಯಕ್ಷತೆಯಲ್ಲೇ ಸಭೆ ನಡೆಯಿತು. ಕೃಷಿ ಮತ್ತು ಸ್ಥಾಯಿ ಸಮಿತಿ ಅಧ್ಯಕ್ಷ ಶಂಕರ ಮಾಡಲಗಿ, ಶಿಕ್ಷಣ ಮತ್ತು ಆರೋಗ್ಯ ಸ್ಥಾಯಿ ಸಮಿತಿ ಅಧ್ಯಕ್ಷ ರಮೇಶ ಗೋರಲ ತಮ್ಮ ಕ್ಷೇತ್ರ ವ್ಯಾಪ್ತಿಯಲ್ಲಿನ ಕುಡಿಯುವ ನೀರಿನ ಸಮಸ್ಯೆಗಳನ್ನು ಪರಿಹರಿಸಬೇಕು, ಹೆಚ್ಚಿನ ಅನುದಾನ ಹಂಚಿಕೆ ಮಾಡಬೇಕು ಎಂದು ಒತ್ತಾಯಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT