ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಾರದಲ್ಲಿ ಮಳೆ ಸುರಿಯದಿದ್ದರೆ ಅಯೋಮಯ ಪರಿಸ್ಥಿತಿ!

Last Updated 4 ಜೂನ್ 2019, 19:45 IST
ಅಕ್ಷರ ಗಾತ್ರ

ಬೆಳಗಾವಿ: ಜೂನ್‌ ಮೊದಲ ವಾರ ಆರಂಭವಾಗಿದ್ದರೂ, ಮುಂಗಾರು ಮಳೆ ಸುರಿಯುವ ಲಕ್ಷಣ ಕಾಣುತ್ತಿಲ್ಲ. ಆಗಸದಲ್ಲಿ ಮೋಡಗಳು ಕಟ್ಟುತ್ತಿಲ್ಲ. ನಾಲ್ಕು ಹನಿಗಳು ಸುರಿಯುವ ಸಾಧ್ಯತೆಯೂ ಕಾಣುತ್ತಿಲ್ಲ. ಇದೇ ಸ್ಥಿತಿ ಒಂದು ವಾರ ಮುಂದುವರಿದರೆ ನಗರದಲ್ಲಿ ಕುಡಿಯುವ ನೀರಿಗೆ ತೀವ್ರ ಕೊರತೆ ಕಾಡಲಿದೆ.

ನಗರಕ್ಕೆ ಕುಡಿಯುವ ನೀರು ಪೂರೈಸುವ ಪ್ರಮುಖ ಜಲಮೂಲವಾಗಿರುವ ರಕ್ಕಸಕೊಪ್ಪ ಜಲಾಶಯದಲ್ಲಿ ನೀರಿನ ಸಂಗ್ರಹ ಕಡಿಮೆಯಾಗಿದ್ದು, ತಳ ಕಾಣುತ್ತಿದೆ. ಹವಾಮಾನ ತಜ್ಞರ ಮುನ್ಸೂಚನೆಯಂತೆ ಈ ವಾರದಲ್ಲಿ ಮಳೆ ಆರಂಭವಾಗದಿದ್ದರೆ, ಮುಂಬರುವ ದಿನಗಳಲ್ಲಿ ತೀವ್ರ ನೀರಿನ ಸಮಸ್ಯೆ ಎದುರಾಗಲಿದೆ.

ಪ್ರಸ್ತುತ ಜಲಾಶಯದಲ್ಲಿ 0.013 ಟಿಎಂಸಿ ಅಡಿಯಷ್ಟು ನೀರು ಉಳಿದಿದೆ. ಸುಮಾರು 7ರಿಂದ 10 ದಿನಗಳವರೆಗೆ ಸಾಕಾಗಬಹುದು. ಈಗಿರುವ ನೀರನ್ನೇ ಮಳೆ ಬರುವವರೆಗೆ ನಿರ್ವಹಿಸಬೇಕಾದ ಸವಾಲು ಜಲಮಂಡಳಿಯ ಅಧಿಕಾರಿಗಳ ಮೇಲಿದೆ. ಈಗ ಸಾರ್ವಜನಿಕರಿಗೆ ಪೂರೈಲಾಗುತ್ತಿರುವ ನೀರಿನ ಪ್ರಮಾಣದಲ್ಲಿ ಕಡಿತಗೊಳಿಸಲಾಗಿದೆ.

‘ಪ್ರತಿದಿನ ಬೆಳಗಾವಿ ನಗರಕ್ಕೆ 24ರಿಂದ 25 ದಶಲಕ್ಷ ಗ್ಯಾಲನ್‌ ನೀರಿನ ಅವಶ್ಯಕತೆ ಇರುತ್ತದೆ. ಇದರಲ್ಲಿ ರಕ್ಕಸಕೊಪ್ಪ ಜಲಾಶಯದಿಂದ 12 ದಶಲಕ್ಷ ಗ್ಯಾಲನ್‌ ಹಾಗೂ ಹಿಡಕಲ್‌ ಜಲಾಶಯದಿಂದ 12 ದಶಲಕ್ಷ ಗ್ಯಾಲನ್‌ ನೀರು ಪಡೆಯಲಾಗುತ್ತಿತ್ತು. ಆದರೆ, ಈಗ ನೀರಿನ ಕೊರತೆಯಿಂದಾಗಿ ಇಷ್ಟೊಂದು ಪ್ರಮಾಣದಲ್ಲಿ ಪೂರೈಕೆಯಾಗುತ್ತಿಲ್ಲ’ ಎಂದು ಕರ್ನಾಟಕ ನಗರ ನೀರು ಸರಬರಾಜು ಮಂಡಳಿಯ ಕಾರ್ಯನಿರ್ವಾಹಕ ಎಂಜಿನಿಯರ್‌ ವಿ.ಎಲ್‌. ಚಂದ್ರಪ್ಪ ತಿಳಿಸಿದರು.

ರಕ್ಕಸಕೊ‍ಪ್ಪ ಜಲಾಶಯದಿಂದ 8 ದಶಲಕ್ಷ ಗ್ಯಾಲನ್‌ ನೀರು ಮಾತ್ರ ಪೂರೈಸಲಾಗುತ್ತಿದೆ. ಕುಮಾರಸ್ವಾಮಿ ಲೇಔಟ್‌, ಹನುಮಾನ ನಗರ, ಅಜಂ ನಗರ, ಶಾಹು ನಗರ, ರಾಮತೀರ್ಥ ನಗರ, ಮಾಳಮಾರುತಿ ಹಾಗೂ ಸುತ್ತಮುತ್ತಲಿನ ಪ್ರದೇಶಗಳಲ್ಲಿ 4– 5 ದಿನಗಳಿಗೊಮ್ಮೆ ಬಿಡಲಾಗುತ್ತಿದೆ. ಕೆಲವು ಪ್ರದೇಶಗಳಿಗೆ ಟ್ಯಾಂಕರ್‌ ಮೂಲಕವೂ ಪೂರೈಸಲಾಗುತ್ತಿದೆ.

24x7 ಯೋಜನೆಗೂ ಸಮಸ್ಯೆ:

‘ನಗರದ 10 ವಾರ್ಡ್‌ಗಳಲ್ಲಿರುವ 24x7 ನಿರಂತರ ಕುಡಿಯುವ ನೀರು ಪೂರೈಸುವ ಯೋಜನೆಗೂ ಬಿಸಿ ತಟ್ಟಿದೆ. ಎತ್ತರದ ಪ್ರದೇಶಗಳಿಗೆ ನೀರು ಪಂಪ್‌ ಮಾಡಲು ಟ್ಯಾಂಕ್‌ನಲ್ಲಿ ಕನಿಷ್ಠ 2 ಮೀಟರ್‌ ಎತ್ತರದವರೆಗೆ ನೀರನ್ನು ಕಾಯ್ದುಕೊಳ್ಳಬೇಕು. ಆದರೆ, ನೀರಿನ ಕೊರತೆಯಿಂದಾಗಿ ಇದು ಸಾಧ್ಯವಾಗುತ್ತಿಲ್ಲ. ಹೀಗಾಗಿ ಎತ್ತರದ ಪ್ರದೇಶಗಳಿಗೆ ನಿಯಮಿತವಾಗಿ ನೀರು ಪೂರೈಸಲು ಸಾಧ್ಯವಾಗುತ್ತಿಲ್ಲ. 3– 4 ದಿನಗಳಿಗೊಮ್ಮೆ ಪೂರೈಸಲಾಗುತ್ತಿದೆ’ ಎನ್ನುತ್ತಾರೆ ಯೋಜನೆಯನ್ನು ನಿರ್ವಹಿಸುತ್ತಿರುವ ಅಲ್ತಾಫ್‌.

‘ಉತ್ತರ ಭಾಗದ 4 ವಾರ್ಡ್‌ಗಳು ಹಾಗೂ ದಕ್ಷಿಣ ಭಾಗದ 6 ವಾರ್ಡ್‌ಗಳಲ್ಲಿ 24x7 ಯೋಜನೆ ಇದೆ. ಇದರಲ್ಲಿ ಬಹುತೇಕ ಎಲ್ಲ ವಾರ್ಡ್‌ಗಳಲ್ಲಿ ಕಳೆದ 15 ದಿನಗಳಿಂದ ನೀರು ನಿರಂತರವಾಗಿ ಪೂರೈಕೆಯಾಗುತ್ತಿಲ್ಲ. ವೈಭವ ನಗರ, ವಿದ್ಯಾಗಿರಿ ಪ್ರದೇಶದಲ್ಲಿ ಟ್ಯಾಂಕರ್‌ ಮೂಲಕ ನೀರು ಪೂರೈಸಲಾಗುತ್ತಿದೆ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT