ಮಂಗಳವಾರ, 16 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬೆಳಗಾವಿ: ನೀರಿನ ದಾಹ ನೀಗಿಸಲು ಸದಾ ಸನ್ನದ್ಧ

ಕಾಯಕ ಜೀವಿ
Last Updated 9 ಏಪ್ರಿಲ್ 2020, 19:30 IST
ಅಕ್ಷರ ಗಾತ್ರ

ಬೆಳಗಾವಿ: ಲಾಕ್‌ಡೌನ್‌ ಅವಧಿಯಲ್ಲಿ ಮನೆಯಲ್ಲಿ ‘ಬಂಧಿ’ಯಾಗಿರುವ ಲಕ್ಷಾಂತರ ಜನರ ನೀರಿನ ದಾಹ ತಣಿಸಲು ಜಲಮಂಡಳಿಯ ಸಿಬ್ಬಂದಿ ಹಾಗೂ ಕೆಲವು ಖಾಸಗಿ ನೀರು ಶುದ್ಧೀಕರಣ ಘಟಕದ ಕಾರ್ಮಿಕರು ಶ್ರಮಿಸುತ್ತಿದ್ದಾರೆ. ಲಾಕ್‌ಡೌನ್‌ ಜೊತೆಗೆ ಬೇಸಿಗೆ ಆರಂಭವಾಗಿದ್ದರೂ ಎಲ್ಲಿಯೂ ನೀರಿಗೆ ಕೊರತೆ ಉಂಟಾಗದಂತೆ ನೋಡಿಕೊಂಡಿರುವುದು ಪ್ರಶಂಸೆಗೆ ಪಾತ್ರವಾಗಿದೆ.

ಮಾರಕ ರೋಗ ಕೋವಿಡ್‌–19 ಹರಡುವುದನ್ನು ತಡೆಗಟ್ಟುವ ಉದ್ದೇಶದಿಂದ ಕಳೆದ 16 ದಿನಗಳಿಂದ ಲಾಕ್‌ಡೌನ್‌ ಘೋಷಿಸಲಾಗಿದೆ. ತುರ್ತು ಸೇವೆ ನೀಡುವವರನ್ನು ಹೊರತುಪಡಿಸಿದಂತೆ ಯಾರೊಬ್ಬರಿಗೂ ಮನೆಯಿಂದ ಹೊರಬರದಂತೆ ನಿರ್ಬಂಧ ವಿಧಿಸಲಾಗಿದೆ. ನಗರದ ಸುಮಾರು 5 ಲಕ್ಷ ಜನರು ಮನೆಗಳಲ್ಲಿಯೇ ಕಾಲ ಕಳೆಯುತ್ತಿದ್ದಾರೆ.

ಬೆಳಗಾವಿ ಸಮೀಪದ ಹಿಡಕಲ್‌ ಜಲಾಶಯದಿಂದ ಹಾಗೂ ರಕ್ಕಸಕೊಪ್ಪ ಜಲಾಶಯದಿಂದ ನೀರನ್ನು ಪಡೆಯಲಾಗುತ್ತಿದೆ. ಹಿಡಕಲ್‌, ತುಮ್ಮರಗುದ್ದಿ, ಲಕ್ಷ್ಮಿಟೆಕ್‌ ಬಳಿ ನೀರನ್ನು ಶುದ್ಧೀಕರಿಸಿ ಮನೆ ಮನೆಗಳಿಗೆ ಪೂರೈಸಲಾಗುತ್ತಿದೆ. ನಗರದ 10 ವಾರ್ಡ್‌ಗಳಲ್ಲಿ 24x7 ನಿರಂತರ ಕುಡಿಯುವ ನೀರು ಪೂರೈಕೆ ಯೋಜನೆಯು ಚಾಲ್ತಿಯಲ್ಲಿದೆ. ಇನ್ನುಳಿದ 42 ವಾರ್ಡ್‌ಗಳಲ್ಲಿ 2–3 ದಿನಗಳಿಗೊಮ್ಮೆ ಪೂರೈಸಲಾಗುತ್ತಿದೆ. ದಿನಕ್ಕೆ 108 ದಶಲಕ್ಷ ಲೀಟರ್‌ ನೀರಿನ ಅವಶ್ಯಕತೆ ಇದೆ.

ಕಳೆದ ವರ್ಷ ಉತ್ತಮ ಮಳೆಯಾಗಿದ್ದರ ಫಲವಾಗಿ ಜಲಾಶಯಗಳಲ್ಲಿ ನೀರಿನ ಕೊರತೆ ಅಷ್ಟಾಗಿ ಕಂಡುಬಂದಿಲ್ಲ. ಜೊತೆಗೆ ಭೂಮಿಯ ಅಂತರ್ಜಲ ಮಟ್ಟವೂ ಚೆನ್ನಾಗಿರುವುದರಿಂದ ತೆರೆದ ಭಾವಿ ಹಾಗೂ ಕೊಳವೆ ಭಾವಿಗಳಲ್ಲೂ ನೀರಿದೆ. ಹೊಸ ಹೊಸ ಬಡಾವಣೆಗಳಲ್ಲಿ, ನಗರದ ಹೊರವಲಯಗಳಲ್ಲಿರುವ ಜನರು ಈ ನೀರನ್ನು ಬಳಸುತ್ತಿದ್ದಾರೆ.

300 ಸಿಬ್ಬಂದಿ ಕಾರ್ಯಾಚರಣೆ:ಬೆಳಗಾವಿ ಉತ್ತರ ಹಾಗೂ ಬೆಳಗಾವಿ ದಕ್ಷಿಣ ವಲಯದಲ್ಲಿ ಜಲಮಂಡಳಿಯಲ್ಲಿ ಒಟ್ಟು 300 ಜನ ಸಿಬ್ಬಂದಿಗಳು ಕಾರ್ಯನಿರ್ವಹಿಸುತ್ತಿದ್ದಾರೆ. ಲಾಕ್‌ಡೌನ್‌ ಹಿನ್ನೆಲೆಯಲ್ಲಿ ಕಚೇರಿಯ ಸಿಬ್ಬಂದಿಗಳಿಗೆ ಮನೆಯಿಂದಲೇ ಕೆಲಸ ಮಾಡಲು ಸೂಚಿಸಲಾಗಿದೆ. ವಾಟರ್‌ ಮೆನ್‌ಗಳು ಹಾಗೂ ಎಂಜಿನಿಯರ್‌ಗಳು ಫೀಲ್ಡ್‌ನಲ್ಲಿ ಕೆಲಸ ನಿರ್ವಹಿಸುತ್ತಿದ್ದಾರೆ.

ನೀರಿನ ಪೂರೈಕೆಯಲ್ಲಿ ಏನಾದರೂ ತೊಂದರೆಯಾದರೆ ಸಾರ್ವಜನಿಕರು ಎಂಜಿನಿಯರ್‌ (ಬೆಳಗಾವಿ ಉತ್ತರ– 9448998261 ಹಾಗೂ ಬೆಳಗಾವಿ ದಕ್ಷಿಣ– 9448998257) ದೂರವಾಣಿ ಕರೆ ಮಾಡಿ ದೂರು ಸಲ್ಲಿಸುತ್ತಾರೆ. ಈ ದೂರನ್ನು ಆಯಾ ಪ್ರದೇಶದ ವಾಟರ್‌ಮೆನ್‌ಗಳಿಗೆ ತಲುಪಿಸಲಾಗುತ್ತದೆ. ಅವರು ಈ ಸಮಸ್ಯೆಗಳನ್ನು ಬಗೆಹರಿಸುತ್ತಾರೆ.

ಖಾಸಗಿ ಪೂರೈಕೆ:ಶುದ್ಧೀಕರಿಸಿದ ನೀರನ್ನು ಕೆಲವು ಖಾಸಗಿ ಕಂಪನಿಗಳೂ ಪೂರೈಸುತ್ತಿವೆ. ಲಾಕ್‌ಡೌನ್‌ ಹಿನ್ನೆಲೆಯಲ್ಲಿ ಅಂಗಡಿ– ಮುಂಗಟ್ಟುಗಳು, ಖಾಸಗಿ ಕಚೇರಿಗಳು ಬಂದ್‌ ಆಗಿರುವುದರಿಂದ ಇವುಗಳ ಕಾರ್ಯಚಟುವಟಿಕೆ ಕುಂಠಿತವಾಗಿದೆ.

‘ಲಾಕ್‌ಡೌನ್‌ದಿಂದಾಗಿ ಎಲ್ಲರೂ ಮನೆಯಲ್ಲಿಯೇ ಇದ್ದಾರೆ. ಮನೆಯಲ್ಲಿ ವಾಟರ್‌ ಫಿಲ್ಟರ್‌ ಹಾಕಿಕೊಂಡಿದ್ದಾರೆ. ಹೀಗಾಗಿ ಮನೆಗೆ ಶುದ್ಧೀಕರಿಸಿದ ನೀರನ್ನು ತರಿಸುವವರ ಸಂಖ್ಯೆ ಕಡಿಮೆ. ಸದ್ಯಕ್ಕೆ ಬ್ಯಾಂಕ್‌ಗಳು, ಔಷಧಿ ಅಂಗಡಿಗಳು, ಆಸ್ಪತ್ರೆ ಹಾಗೂ ಪೊಲೀಸ್‌ ಠಾಣೆಗಳಿಗೆ ನೀರು ಪೂರೈಸುತ್ತಿದ್ದೇವೆ’ ಎಂದು ಮಾರಾಟ ಪ್ರತಿನಿಧಿ ಕುಮಾರ ಹನಗೋಳಕರ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT