ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನೀರಿನ ಸಮಸ್ಯೆ: ಬಸವ ಕಾಲೊನಿ ನಿವಾಸಿಗಳ ಪ್ರತಿಭಟನೆ

ಸಮರ್ಪಕವಾಗಿ ನೀರು ಪೂರೈಸದ ಹಿನ್ನೆಲೆಯಲ್ಲಿ ಆಕ್ರೋಶ
Last Updated 31 ಮಾರ್ಚ್ 2022, 11:35 IST
ಅಕ್ಷರ ಗಾತ್ರ

ಬೆಳಗಾವಿ: ನಗರದ ವಿವಿಧೆಡೆ ಹಲವು ದಿನಗಳಿಂದ ನೀರು ಪೂರೈಕೆಯಲ್ಲಿ ವ್ಯತ್ಯಯ ಉಂಟಾಗುತ್ತಿರುವುದು ಜನರ ಆಕ್ರೋಶಕ್ಕೆ ಕಾರಣವಾಗಿದೆ.

ಇಲ್ಲಿನ ಬಸವ ಕಾಲೊನಿ ನಿವಾಸಿಗಳು ಬಾಕ್ಸೈಟ್‌ ರಸ್ತೆಯಲ್ಲಿ ವಾಹನಗಳ ಸಂಚಾರವನ್ನು ತಡೆದು ಬುಧವಾರ ಪ್ರತಿಭಟನೆ ನಡೆಸಿದರು. ಎಲ್‌ ಅಂಡ್ ಟಿ ಕಂಪನಿ ಕಾರ್ಯವೈಖರಿ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.

ಖಾಲಿ ಕೊಡಗಳನ್ನು ಪ್ರದರ್ಶಿಸಿ ಮಹಿಳೆಯರು ಮತ್ತು ನಿವಾಸಿಗಳು ಪ್ರತಿಭಟನೆ ನಡೆಸಿದರು. ಇದರಿಂದ ವಾಹನಗಳ ಸಂಚಾರಕ್ಕೆ ತೊಂದರೆಯಾಗಿತ್ತು.

ನೀರು ಸರಬರಾಜಿನಲ್ಲಿ ವ್ಯತ್ಯಯ ಉಂಟಾಗುತ್ತಿರುವ ಹಿನ್ನೆಲೆಯಲ್ಲಿ ಉತ್ತರ ಮತಕ್ಷೇತ್ರದ ಶಾಸಕ ಅನಿಲ್‌ ಬೆನಕೆ ಎಲ್‌ ಅಂಡ್ ಟಿ ಕಂಪನಿಯ ಅಧಿಕಾರಿಗಳ ಸಭೆ ನಡೆಸಿ ಎಚ್ಚರಿಕೆ ನೀಡಿದ್ದರು. ನಿರ್ಲಕ್ಷ್ಯ ಮುಂದುವರಿದರೆ ಕಂಪನಿಯ ಅಧಿಕಾರಿಗಳನ್ನು ಮರಕ್ಕೆ ಕಟ್ಟಿಹಾಕಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದ್ದರು. ಇದಾದ ನಂತರವೂ ಸಮಸ್ಯೆಗೆ ಪರಿಹಾರ ಸಿಕ್ಕಿಲ್ಲ.

ಬಿಗಡಾಯಿಸಿದ ಸಮಸ್ಯೆ:ಕೆಲವೆಡೆ ಟ್ಯಾಂಕರ್‌ನಲ್ಲಿ ನೀರು ಪೂರೈಸಲಾಗುತ್ತಿದೆ. ಯುಗಾದಿ ಹಬ್ಬಕ್ಕೆ ಸಿದ್ಧತೆಯಲ್ಲಿರುವ ಜನರು ಸಮರ್ಪಕವಾಗಿ ನೀರು ಲಭ್ಯವಾಗದೆ ತೊಂದರೆ ಅನುಭವಿಸುತ್ತಿದ್ದಾರೆ; ಪರರದಾಡುತ್ತಿದ್ದಾರೆ. ದಿನದ 24 ಗಂಟೆ ನೀರು ಪೂರೈಕೆ ಪ್ರಾತ್ಯಕ್ಷಿಕೆ ಪ್ರದೇಶಗಳಲ್ಲೂ (10 ವಾರ್ಡ್‌) ಸಮಸ್ಯೆ ಬಿಗಡಾಯಿಸಿದೆ.

‘ಬೇಸಿಗೆ ಆರಂಭದಲ್ಲೇ ನೀರಿಗಾಗಿ ಹಾಹಾಕಾರ ಉಂಟಾಗಿದೆ. ಹಿಡಕಲ್ ಜಲಾಶಯದಲ್ಲಿ ಸಾಕಷ್ಟು ನೀರು ಲಭ್ಯವಿದ್ದರೂ ಪೂರೈಕೆಯಲ್ಲಿ ನಿರ್ಲಕ್ಷ್ಯ ವಹಿಸಲಾಗಿದೆ. ಇದರಿಂದ ನಾವೆಲ್ಲರೂ ಪರದಾಡುತ್ತಿದ್ದೇವೆ. ಪದೇ ಪದೇ ದುರಸ್ತಿ ಮತ್ತು ನಿರ್ವಹಣೆಯ ನೆಪವನ್ನು ಹೇಳಲಾಗುತ್ತಿದೆ’ ಎಂದು ಬಸವ ಕಾಲೊನಿ ನಿವಾಸಿಗಳು ತಿಳಿಸಿದರು.

‘ಬೇಕೇ ಬೇಕು ನೀರು ಬೇಕು’ ಎಂದು ಘೋಷಣೆ ಕೂಗಿದರು. ನಗರದಲ್ಲಿ ನೀರು ಸರಬರಾಜು ಮತ್ತು ನಿರ್ವಹಣೆಯ ಜವಾಬ್ದಾರಿ ಹೊತ್ತಿರುವ ಎಲ್ ಅಂಡ್‌ ಟಿ ಕಂಪನಿ ವಿರುದ್ಧ ಧಿಕ್ಕಾರ ಕೂಗಿದರು.

ಸಮರ್ಪಕ ಪೂರೈಕೆ ಇಲ್ಲ:‘ಎಲ್ ಆಂಡ್ ಟಿ ಕಂಪನಿಗೆ ವಹಿಸಿದ ನಂತರ ನೀರಿನ ಸಮಸ್ಯೆ ಆಗುತ್ತಿದೆ. ಬಸವ ಕಾಲೊನಿಯಲ್ಲಿ ನೀರಿನ ಸಮಸ್ಯೆಗೆ ಶಾಶ್ವತ ಪರಿಹಾರ ಕಲ್ಪಿಸಬೇಕು. ದಿನದ 24 ಗಂಟೆಯೂ ನೀರು ಪೂರೈಸಲಾಗುವುದು ಎನ್ನುವುದು ಅಣಕದಂತಾಗಿದೆ. ಬಸವ ಕಾಲೊನಿ, ವೈಭವ ನಗರ, ಶಾಹುನಗರ ಮೊದಲಾದ ಕಡೆಗಳಲ್ಲಿ ಸಮರ್ಪಕ ನೀರು ಪೂರೈಕೆ ಆಗುತ್ತಿಲ್ಲ’ ಎಂದು ನಿವಾಸಿಗಳು ತಿಳಿಸಿದರು.

‘15 ದಿನಗಳಿಂದ ಸರಿಯಾಗಿ ನೀರು ಪೂರೈಕೆ ಮಾಡುತ್ತಿಲ್ಲ. ಅಧಿಕಾರಿಗಳು ಮೊಬೈಲ್‌ ಫೋನ್‌ ಕರೆ ಸ್ವೀಕರಿಸುವುದಿಲ್ಲ. ನಮ್ಮ ಸಮಸ್ಯೆಗೆ ಸ್ಪಂದನೆ ದೊರೆಯದಿದ್ದರಿಂದ ಬೀದಿಗಿಳಿಯಬೇಕಾಯಿತು’ ಎಂದು ಅವರು ಹೇಳಿದರು.

ಸ್ಥಳಕ್ಕೆ ಬಂದ ಶಾಸಕ ಅನಿಲ್ ಬೆನಕೆ ಜನರ ಸಮಸ್ಯೆ ಆಲಿಸಿದರು. ಅವರ ಸಮ್ಮುಖದಲ್ಲೇ ಎಲ್ ಆಂಡ್ ಟಿ ಕಂಪನಿ ಅಧಿಕಾರಿಗಳಿಗೆ ಜನರು ಮುತ್ತಿಗೆ ಹಾಕಿದರು.

‘ನೀರಿನ ಸಮಸ್ಯೆ ಪರಿಹರಿಸಲು 8 ದಿನಗಳ ಗಡುವು ಕೊಟ್ಟಿದ್ದೇವೆ. ಈಗ 4 ದಿನ ಮುಗಿದಿದೆ. ಇನ್ನು ನಾಲ್ಕು ದಿನಗಳಲ್ಲಿ ಸಮಸ್ಯೆ ಪರಿಹರಿಸದಿದ್ದರೆ ಅಧಿಕಾರಿಗಳನ್ನು ಮರಕ್ಕೆ ಕಟ್ಟಿ ಹಾಕುವುದು ಖಚಿತ. ಶೀಘ್ರವೇ ಈ ಭಾಗದಲ್ಲಿ ನೀರು ಪೂರೈಕೆಗೆ ಕ್ರಮ ವಹಿಸಲಾಗುವುದು’ ಎಂದು ಭರವಸೆ ನೀಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT