ಸಸಿಗಳಿಗೆ ವಾರಕ್ಕೆರಡು ಬಾರಿ ನೀರು

ಶುಕ್ರವಾರ, ಏಪ್ರಿಲ್ 19, 2019
22 °C
5ಸಾವಿರ ಗಿಡಗಳು ಉತ್ತಮ ಸ್ಥಿತಿಯಲ್ಲಿ: ಅಧಿಕಾರಿಗಳು

ಸಸಿಗಳಿಗೆ ವಾರಕ್ಕೆರಡು ಬಾರಿ ನೀರು

Published:
Updated:
Prajavani

ಸವದತ್ತಿ: ತಾಲ್ಲೂಕಿನ ವಿವಿಧೆಡೆ ನೆಡಲಾಗಿರುವ ಸಸಿಗಳಿಗೆ ಅರಣ್ಯ ಇಲಾಖೆ ಸಿಬ್ಬಂದಿಯು ಟ್ಯಾಂಕರ್‌ನಲ್ಲಿ ನೀರು ತಂದು ಹಾಕುತ್ತಿದ್ದಾರೆ.

ತಾಲ್ಲೂಕಿನಲ್ಲಿ ಬಿಸಿಲಿನ ಝಳ ಹೆಚ್ಚುತ್ತಿರುವುದರಿಂದ, ಗಿಡಗಳು ಒಣಗದಂತೆ ನೋಡಿಕೊಳ್ಳಲು ಅಧಿಕಾರಿಗಳು ಈ ಕ್ರಮ ಕೈಗೊಂಡಿದ್ದಾರೆ.

ರಸ್ತೆ ಬದಿಗಳಲ್ಲಿ, ಪಂಚಾಯ್ತಿ, ಪ್ರವಾಸಿ ಮಂದಿರ ಹಾಗೂ ದನದ ಮಾರುಕಟ್ಟೆಯಲ್ಲಿ ನೂರಾರು ಸಸಿಗಳನ್ನು ನೆಡಲಾಗಿದೆ. ಅವುಗಳನ್ನು ಉಳಿಸಿಕೊಳ್ಳುವುದಕ್ಕಾಗಿ ಟ್ಯಾಂಕರ್‌ನಲ್ಲಿ ನೀರು ತರಲಾಗುತ್ತಿದೆ. ವಾರಕ್ಕೆರಡು ಬಾರಿ ನೀರುಣಿಸಲಾಗುತ್ತಿದೆ. ಇದು ಇಲ್ಲಿನ ಪರಿಸರಪ್ರೇಮಿಗಳ ಮೆಚ್ಚುಗೆಗೆ ಪಾತ್ರವಾಗಿದೆ.

‘ಬರಗಾರಲದಿಂದ ತತ್ತರಿಸಿರುವ ತಾಲ್ಲೂಕಿನಲ್ಲಿ ವಿವಿಧ ಜಾತಿಯ ಸಸಿಗಳನ್ನು ಬೆಳೆಸಿ, ವಿತರಿಸಿದ್ದೇವೆ; ನೆಟ್ಟಿದ್ದೇವೆ. ಅವುಗಳು ಹಾಳಾಗದಂತೆ ಖಾತ್ರಿಪಡಿಸಿಕೊಳ್ಳಲು ಇಲಾಖೆಯ ಸಿಬ್ಬಂದಿ ವ್ಯವಸ್ಥಿತವಾಗಿ ಕೆಲಸ ಮಾಡುತ್ತಿದ್ದಾರೆ’ ಎಂದು ವಲಯ ಅರಣ್ಯಾಧಿಕಾರಿ ಸುನೀತಾ ನಿಂಬರಗಿ ‘ಪ್ರಜಾವಾಣಿ’ಗೆ ತಿಳಿಸಿದರು.

‘ಇಲಾಖೆಯಿಂದ ನೆಡಲಾದ ಸಸಿಗಳಲ್ಲಿ ಶೇ 95ರಷ್ಟು ಅಂದರೆ 5ಸಾವಿರಕ್ಕೂ ಹೆಚ್ಚಿನ ಸಸಿಗಳು ಉಳಿದಿವೆ. ಅವುಗಳನ್ನು ಮುಂದೆಯೂ ಸಂರಕ್ಷಿಸಲಾಗುವುದು. ಆಗಾಗ ನೀರು ಪೂರೈಸಲಾಗುವುದು’ ಎಂದು ಮಾಹಿತಿ ನೀಡಿದರು.

‘ಇಲ್ಲಿನ ಸಸ್ಯಪಾಲನಾಲಯದಲ್ಲಿ ಆಲ, ಅರಳಿ, ಬೇವು, ಹುಣಸೆ ಮೊದಲಾದ ಜಾತಿಯ ಸಸಿಗಳನ್ನು ಬೆಳೆಸಲಾಗುತ್ತಿದೆ. ಸವದತ್ತಿಯಿಂದ ಶಿರಸಂಗಿವರೆಗೆ ಹಾಗೂ ಸವದತ್ತಿ ಹೂಲಿಕಟ್ಟಿಯವರೆಗೆ ಸಸಿಗಳನ್ನು ನೆಡಲಾಗಿದೆ. ಅವುಗಳ ಬೆಳವಣಿಗೆ ಬಗ್ಗೆ ಇಲಾಖೆಯ ಅಧಿಕಾರಿಗಳು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ’ ಎಂದರು.

‘ಕೃಷಿ ಅರಣ್ಯ ಯೋಜನೆ ಅಡಿಯಲ್ಲಿ ರೈತರಿಗೆ ತಪಸಿ, ಬೇವು, ರೇನ್‌ಟ್ರೀ, ಮಾವು, ಅರಳಿ, ಹೊಂಗೆ, ನೇರಳೆ, ಹುಣಸೆ, ಬಸರಿ, ಪೇರಲ, ನಿಂಬೆ, ಸೀತಾಫಲ, ಕರಿಬೇವು, ಬಿದಿರು, ಬನ್ನಿ, ಸಾಗವಾನಿ ಮೊದಲಾದ ಸಸಿಗಳನ್ನು ಇಲಾಖೆಯಿಂದ ವಿತರಿಸಲಾಗುವುದು. ರೈತರು ಇದನ್ನು ಸದ್ಬಳಕೆ ಮಾಡಿಕೊಳ್ಳಬೇಕು. ಗಿಡಗಳನ್ನು ನಾಶ ಮಾಡದೇ ಅವುಗಳನ್ನು ಉಳಿಸಿ–ಬೆಳೆಸಬೇಕು. ಈ ಕಾರ್ಯದಲ್ಲಿ ಎಲ್ಲರ ಸಹಕಾರ ಅವಶ್ಯ’ ಎಂದು ಕೋರಿದರು.

Tags: 

ಬರಹ ಇಷ್ಟವಾಯಿತೆ?

 • 2

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !