ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಲ್ಲಂಗಡಿ ಮಾರಾಟಕ್ಕೆ ಕುತ್ತು ತಂದ ಕೊರೊನಾ; ಸಂಕಷ್ಟದಲ್ಲಿ ಕೃಷಿಕ

Last Updated 16 ಏಪ್ರಿಲ್ 2020, 19:30 IST
ಅಕ್ಷರ ಗಾತ್ರ

ಚಿಕ್ಕೋಡಿ: ಮಾರಕ ರೋಗ ಕೋವಿಡ್‌–19 ಕೃಷಿಕರನ್ನು ಹಿಂಡಿ ಹಿಪ್ಪೆ ಮಾಡಿದೆ. ರೋಗ ಹರಡುವ ಭೀತಿಯಿಂದಾಗಿ ಹಣ್ಣು– ತರಕಾರಿಗಳ ಮಾರಾಟವಾಗುತ್ತಿಲ್ಲ. ತಾಲ್ಲೂಕಿನಲ್ಲಿ ನೂರಾರು ಎಕರೆ ಪ್ರದೇಶದಲ್ಲಿ ಕಲ್ಲಂಗಡಿ ಬೆಳೆದಿರುವ ಕೃಷಿಕರು ಹಣ್ಣು ಮಾರಾಟವಾಗದೇ ಇರುವುದರಿಂದ ಕಂಗಾಲಾಗಿದ್ದು, ಸರ್ಕಾರದ ನೆರವಿಗಾಗಿ ಜಾತಕ ಪಕ್ಷಿಯಂತೆ ಕಾಯುತ್ತಿದ್ದಾರೆ.

ಸರ್ಕಾರ ಎರಡನೇ ಹಂತದ ಲಾಕ್‌ಡೌನ್‌ಅನ್ನು ಇನ್ನಷ್ಟು ಕಟ್ಟುನಿಟ್ಟಾಗಿ ಪಾಲಿಸಲು ಆದೇಶ ಹೊರಡಿಸಿದೆ. ಕೃಷಿ ಉತ್ಪನ್ನಗಳ ಸಾಗಾಟ ಮತ್ತು ಮಾರಾಟಕ್ಕೆ ಅನುಮತಿ ನೀಡಿದೆ. ಆದರೆ, ಮಾರುಕಟ್ಟೆಯಲ್ಲಿ ಕೃಷಿ ಉತ್ಪನ್ನಗಳನ್ನು ದಲ್ಲಾಳಿಗಳು ಅಗ್ಗದ ಬೆಲೆಗೆ ಖರೀದಿಸುತ್ತಿರುವುದರಿಂದ ಸಾಗಾಟ ಮತ್ತು ಕಟಾವಿನ ಖರ್ಚೂ ಕೈಗೆ ಬಾರದಂತಾಗಿದೆ. ನೇರವಾಗಿ ಗ್ರಾಹಕರಿಗೆ ಮಾರಾಟ ಮಾಡಬೇಕೆಂದರೆ ಟನ್‌ಗಟ್ಟಲೆ ಕಲ್ಲಂಗಡಿ ಮಾರಾಟವಾಗುವುದಿಲ್ಲ ಎಂದು ಕೃಷಿಕರು ಅಳಲು ತೋಡಿಕೊಂಡಿದ್ದಾರೆ.

ತಾಲ್ಲೂಕಿನ ಬೆಳಕೂಡ ಗ್ರಾಮದ ರೈತ ಬಸವರಾಜ ಶಿವಪುತ್ರ ಕೋಟಗಿ ತಮ್ಮ ಒಂದೂವರೆ ಎಕರೆ ಪ್ರದೇಶದಲ್ಲಿ ಲಕ್ಷಾಂತರ ರೂಪಾಯಿ ಖರ್ಚು ಮಾಡಿ ಕಲ್ಲಂಗಡಿ ಬೆಳೆದಿದ್ದು, ಫಸಲು ಹುಲುಸಾಗಿ ಬಂದಿದೆ. ಕಲ್ಲಂಗಡಿ ಕಟಾವಿಗೆ ಬರುವಷ್ಟರಲ್ಲಿ ಕೊರೊನಾ ಬಂದು ವಕ್ಕರಿಸಿದೆ. ಇದರಿಂದಾಗಿ ಹಣ್ಣು ಮಾರಾಟವಾಗದೇ ಹೊಲದಲ್ಲೇ ಕೊಳೆಯುತ್ತಿದ್ದು, ಕಟಾವಿಗೆ ಅವಧಿ ಮೀರಿ ಹಾಳಾದ ಹಣ್ಣುಗಳನ್ನು ರೈತರು ಹೊಲದ ಬದುವಿನ ಬಳಿ ತಂದು ಸುರಿಯುತ್ತಿದ್ದಾರೆ.

'ಒಂದೂವರೆ ಎಕರೆ ಪ್ರದೇಶದಲ್ಲಿ ಕಲ್ಲಂಗಡಿ ಬೆಳೆದಿದ್ದೇನೆ. ಪ್ರತಿ ಟನ್ ಕಲ್ಲಂಗಡಿಗೆ ಕನಿಷ್ಠ 10 ರಿಂದ 15 ಸಾವಿರ ದರ ದೊರಕುತ್ತಿತ್ತು. ಆದರೆ, ಇಂದು ಕೊರೊನಾದಿಂದ ಮಾರುಕಟ್ಟೆ ಸ್ಥಗಿತಗೊಂಡಿರುವುದರಿಂದ ಪ್ರತಿ ಟನ್ ಕಲ್ಲಂಗಡಿಗೆ ಎರಡರಿಂದ ಎರಡೂವರೆ ಸಾವಿರ ದರವಿದ್ದು, ಅದೂ ಬೇಡಿಕೆ ಇಲ್ಲದಾಗಿದೆ. ನೇರವಾಗಿ ಗ್ರಾಹಕರಿಗೆ ಮಾರಾಟ ಮಾಡಬೇಕಾದರೆ ಟನ್‌ಗಟ್ಟಲೆ ಮಾರಾಟವಾಗುವುದಿಲ್ಲ. ಅಷ್ಟಿಟ್ಟು ಕಲ್ಲಂಗಡಿ ಮಾರಾಟ ಮಾಡುವಷ್ಟರಲ್ಲಿ ಅರ್ಧಕ್ಕೂ ಹೆಚ್ಚು ಬೆಳೆ ನಾಶವಾಗುತ್ತದೆ' ಎಂದು ಕಲ್ಲಂಗಡಿ ಬೆಳೆಗಾರ ಬಸವರಾಜ ಕೊಟಬಾಗಿ ಅಸಹಾಯಕತೆ ವ್ಯಕ್ತಪಡಿಸಿದರು.

'ಕೊರೊನಾ ನಿಯಂತ್ರಣಕ್ಕಾಗಿ ಲಾಕ್‌ಡೌನ್‌ ವಿಧಿಸಿರುವುದು ಸ್ವಾಗತಾರ್ಹ. ಆದರೆ, ಕೃಷಿ ಉತ್ಪನ್ನಗಳ ಮಾರಾಟಕ್ಕೆ ಸರ್ಕಾರ ಅಗತ್ಯ ಅನುಕೂಲತೆಗಳನ್ನು ಕಲ್ಪಿಸಬೇಕು. ಕೃಷಿ ಮತ್ತು ತೋಟಗಾರಿಕೆ ಇಲಾಖೆಗಳ ಮೂಲಕ ರೈತರಲ್ಲಿ ಸಮನ್ವಯತೆ ಸಾಧಿಸಿ ಸಾಮೂಹಿಕ ಮಾರಾಟಕ್ಕೆ ವ್ಯವಸ್ಥೆ ಮಾಡಬೇಕು. ಅಲ್ಲದೇ ಜಾಗತಿಕ ವಿಪತ್ತಾಗಿ ಪರಿಣಮಿಸಿರುವ ಕೊರೊನಾ ಕಂಟಕದಿಂದ ನಷ್ಟ ಅನುಭವಿಸಿರುವ ರೈತರ ಬೆಳೆ ಹಾನಿ ಸಮೀಕ್ಷೆ ನಡೆಸಿ ಸೂಕ್ತ ಪರಿಹಾರ ನೀಡಬೇಕು' ಎಂದು ಕೃಷಿಕ ಸಮಾಜದ ಜಿಲ್ಲಾ ಉಪಾಧ್ಯಕ್ಷ ಟಿ.ಎಸ್.ಮೋರೆ ಆಗ್ರಹಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT