ಸೋಮವಾರ, ಫೆಬ್ರವರಿ 24, 2020
19 °C
ಉಪನ್ಯಾಸ ಕಾರ್ಯಕ್ರಮದಲ್ಲಿ ಸಿ.ಎಸ್. ದ್ವಾರಕಾನಾಥ್

ಸಂವಿಧಾನದ ಆಶಯಗಳಿಗೆ ಮಾರಕವಾದ ಸಿಎಎ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಬೆಳಗಾವಿ: ‘ಕೇಂದ್ರ ಸರ್ಕಾರ ಜಾರಿಗೊಳಿಸುತ್ತಿರುವ ಎನ್ಆರ್‌ಸಿ, ಸಿಎಎ, ಎನ್‌ಪಿಆರ್ ಈ ಮೂರು ಕಾಯ್ದೆಗಳು ಸಂವಿಧಾನದ ಆಶಯಗಳಿಗೆ ಮಾರಕವಾಗಿವೆ. ಇವುಗಳನ್ನು ವಾಪಸ್‌ ಪಡೆಯುವವರೆಗೂ ಹೋರಾಡುವ ಅಗತ್ಯವಿದೆ’ ಎಂದು ಹಿರಿಯ ವಕೀಲ ಡಾ.ಸಿ.ಎಸ್. ದ್ವಾರಕನಾಥ್‌ ತಿಳಿಸಿದರು.

ಇಲ್ಲಿನ ನೆಹರು ನಗರದ ಮಾನವ ಬಂಧುತ್ವ ವೇದಿಕೆ ಕೇಂದ್ರ ಕಚೇರಿಯಲ್ಲಿ ಶನಿವಾರ ನಡೆದ ವಿಶೇಷ ಉಪನ್ಯಾಸ ಕಾರ್ಯಕ್ರಮವನ್ನು ಸಂವಿಧಾನ ಪೀಠಿಕೆ ಓದುವ ಮೂಲಕ ಉದ್ಘಾಟಿಸಿ ಅವರು ಮಾತನಾಡಿದರು.

‘ಲಕ್ಷಾಂತರ ಅಲೆಮಾರಿಗಳು, ಆದಿವಾಸಿಗಳು, ದಲಿತರು ಈ ಕಾಯ್ದೆಗಳಿಂದ ಮತ್ತಷ್ಟು ತೊಂದರೆಗೀಡಾಗಲಿದ್ದಾರೆ. ಧಾರ್ಮಿಕವಾಗಿ  ಜನರನ್ನು ಇಬ್ಭಾಗಿಸುವ ಇವು ಮನುಷ್ಯ ವಿರೋಧಿ ಜತೆಗೆ ಜೀವ ವಿರೋಧಿಯೂ ಆಗಿವೆ’ ಎಂದು ಆರೋಪಿಸಿದರು.

ಉತ್ಪಾದಕರು, ಅನುತ್ಪಾದಕರ ನಡುವಿನ ಸಂಘರ್ಷ

‘ಈ ಮೂರು ಕಾಯ್ದೆಗಳು ಉತ್ಪಾದಕರು ಮತ್ತು ಅನುತ್ಪಾದಕರ ನಡುವಿನ ಸಂಘರ್ಷವಾಗಿದೆ. ಮನುಧರ್ಮ ಶಾಸ್ತ್ರದ ಬ್ರಾಹ್ಮಣ, ಕ್ಷತ್ರಿಯ, ವೈಶ್ಯ ಇವು ಅನುತ್ಪಾದಕ ವರ್ಗಗಳು. ಓದು, ಯುದ್ಧ, ವ್ಯಾಪಾರಗಳು ಉತ್ಪಾದನೆ ಮಾಡುವ ವರ್ಗದ ಉತ್ಪನ್ನಗಳ ಮೇಲೆ ಬದುಕಿರುವಂತಹವು. ಶೂದ್ರ, ದಲಿತ, ಆದಿವಾಸಿ, ಅಲೆಮಾರಿ ಸಮುದಾಯಗಳು ಮಾನವನ ಬದುಕಿಗೆ ಬೇಕಾಗಿರುವ ಸಮಗ್ರವನ್ನೂ ಉತ್ಪಾದಿಸುತ್ತವೆ. ಹಾಗಾಗಿ ಅನುತ್ಪಾದಕ ವರ್ಗವು ಉತ್ಪಾದಕ ವರ್ಗವನ್ನು ಹೊರಗಿಟ್ಟು ತಾನು ಮಾತ್ರ ಅಧಿಕಾರ ಸೂತ್ರ ಹಿಡಿದಿಟ್ಟುಕೊಳ್ಳುವ ತಂತ್ರದ ಭಾಗವಾಗಿಯೇ ಸಿಎಎ, ಎನ್‌ಆರ್‌ಸಿ, ಎನ್‌ಪಿಆರ್ ಜಾರಿಗೆ ಮುಂದಾಗಿದ್ದಾರೆ’ ಎಂದು ದೂರಿದರು.

‘ಬುದ್ಧ, ಬಸವಣ್ಣ, ಅಂಬೇಡ್ಕರ್, ತತ್ವ ಪದಕಾರರ, ದಾರ್ಶನಿಕರ ವಿಚಾರಧಾರೆಗಳ ಸಂಗಮವಾಗಿರುವ ಸಂವಿಧಾನ ವಿರೋಧಿಯಾದ ಈ ಕಾಯ್ದೆಗಳನ್ನು ನಾವೆಲ್ಲರೂ ವಿರೋಧಿಸದಿದ್ದರೆ ನಮಗೆ ಉಳಿಗಾಲವಿಲ್ಲ. ಒಂದೆಡೆ ಗೃಹ ಸಚಿವ ಅಮಿತ್ ಶಾ ಎನ್ಆರ್‌ಸಿ ಜಾರಿಗೆ ತರುತ್ತೇವೆ ಎಂದು ಹೇಳುತ್ತಾರೆ. ಮತ್ತೊಂದೆಡೆ, ಪ್ರಧಾನಿ ನರೇಂದ್ರ ಮೋದಿ ಎನ್ಆರ್‌ಸಿ ಜಾರಿಗೊಳಸಲ್ಲ ಎನ್ನುತ್ತಾರೆ. ಕಾಯ್ದೆ ಬಗ್ಗೆ ಅವರಿಗೂ ಸಂಪೂರ್ಣ ಮಾಹಿತಿ ಇಲ್ಲ’ ಎಂದು ಟೀಕಿಸಿದರು.

ಉದ್ಯಮಗಳು ಬಾಗಿಲು ಹಾಕುತ್ತಿವೆ

‘ಕೇಂದ್ರ ಸರ್ಕಾರದ ಬೇಜವಾಬ್ದಾರಿ ನಡೆಯಿಂದ ದೇಶದ ಆರ್ಥಿಕತೆ ನೆಲಕಚ್ಚಿದೆ. ಸಣ್ಣಪುಟ್ಟ ಉದ್ಯಮಗಳು ಬಾಗಿಲು ಮುಚ್ಚುತ್ತಿವೆ. ನಿರುದ್ಯೋಗ ಸಮಸ್ಯೆ ತಾಂಡವಾಡುತ್ತಿದೆ. ಪ್ರಮುಖ ಸಮಸ್ಯೆಗಳನ್ನು ಮರೆ ಮಾಚಲು, ಎಲ್ಲೆಡೆ ಅಶಾಂತಿಯ ವಾತಾವರಣ ನಿರ್ಮಾಣ ಮಾಡಲಾಗುತ್ತಿದೆ. ಬಿಜೆಪಿ ಆರ್ಥಿಕ ನೀತಿ ಇಲ್ಲದ ಪಕ್ಷ’ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಮಾನವ ಬಂಧುತ್ವ ವೇದಿಕೆ ವಿಭಾಗೀಯ ಸಂಚಾಲಕ ಮಹಾಲಿಂಗಪ್ಪ ಆಲಬಾಳ ಮಾತನಾಡಿದರು. ರಾಜ್ಯ ಸಂಚಾಲಕ ರವೀಂದ್ರ ನಾಯ್ಕರ್, ಬಂಡಾಯ ಸಾಹಿತಿ ಡಾ.ಯಲ್ಲಪ್ಪ ಹಿಮ್ಮಡಿ, ಬಿ.ಎಸ್. ನಾಡಕರ್ಣಿ, ಪ್ರೊ.ಅಡಿವೆಪ್ಪ ಇಟಗಿ, ಗೋಪಿಕಾ ಹೇರಗೆ, ಸಂಚಾಲಕರಾದ ದೀಪಕ ಕಾಂಬಳೆ, ಜೀವನ್ ಮಾಂಜರೇಕರ, ರಾಜು ನಾಯಕ, ಮಹೇಶ ಡಾಲೆ, ರಾಮಕೃಷ್ಣ ಪಾನಬುಡೆ, ಬಾಲಕೃಷ್ಣ ನಾಯಕ, ಯುವರಾಜ ತಳವಾರ, ಪ್ರಶಾಂತ ಪೂಜಾರಿ, ಪ್ರಕಾಶ ಬೊಮ್ಮನವರ ಇದ್ದರು.

ಪ್ರೊ.ಮಂಜುನಾಥ ಪಾಟೀಲ ಸ್ವಾಗತಿಸಿದರು. ಬೆಳಗಾವಿ ಜಿಲ್ಲಾ ಘಟಕದ ಸಂಚಾಲಕಿ ನೇಮಿಚಂದ್ರಾ ಢರಗೆನ್ನವರ ವಂದಿಸಿದರು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು