ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಿಜೆಪಿಯವರ ಅಪಪ್ರಚಾರಕ್ಕೆ ತಕ್ಕ ಉತ್ತರ: ಸತೀಶ ಜಾರಕಿಹೊಳಿ

ಕಾರ್ಯಕರ್ತರಿಗೆ ಕೆಪಿಸಿಸಿ ಕಾರ್ಯಾಧ್ಯಕ್ಷ
Last Updated 10 ಜುಲೈ 2021, 16:04 IST
ಅಕ್ಷರ ಗಾತ್ರ

ರಾಯಬಾಗ/ ಮುಗಳಖೋಡ (ಬೆಳಗಾವಿ ಜಿಲ್ಲೆ): ‘ಬಿಜೆಪಿಯವರು ಸುಳ್ಳು ಹೇಳಿ ಅಧಿಕಾರಕ್ಕೆ ಬಂದಿದ್ದು ಮತ್ತು ಅಪಪ್ರಚಾರ ಮಾಡುತ್ತಿರುವುದಕ್ಕೆ ತಕ್ಕ ಉತ್ತರ ನೀಡಲು ಕಾಂಗ್ರೆಸ್ ಕಾರ್ಯತಕರ್ತರು ಸಜ್ಜಾಗಬೇಕು’ ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ ಜಾರಕಿಹೊಳಿ ತಿಳಿಸಿದರು.

ರಾಯಬಾಗ ತಾಲ್ಲೂಕು ಕುಡಚಿ ಬ್ಲಾಕ್ ಕಾಂಗ್ರೆಸ್ ವತಿಯಿಂದ ಯಬರಟ್ಟಿ ಗ್ರಾಮದಲ್ಲಿ ಶನಿವಾರ ಹಮ್ಮಿಕೊಂಡಿದ್ದ ಕಾಂಗ್ರೆಸ್ ಕಾರ್ಯಕರ್ತರ ಸಮಾಲೋಚನಾ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.

‘ಪ್ರಧಾನಿ ನರೇಂದ್ರ ಮೋದಿ ಹಾಗೂ ಬಿಜೆಪಿ ಪರ ಪ್ರಚಾರ ಮಾಡಲು ಮತ್ತು ಕಾಂಗ್ರೆಸ್ ಪಕ್ಷದ ವಿರುದ್ಧ ಅಪಪ್ರಚಾರ ಮಾಡಲು ಬಿಜೆಪಿವರು ಸಾಮಾಜಿಕ ಮಾಧ್ಯಮದಲ್ಲಿ ದೊಡ್ಡ ಪಡೆಯನ್ನೇ ಇಟ್ಟಿದ್ದಾರೆ. ಅವರನ್ನು ಎದುರಿಸಲು ನಮ್ಮ ಕಾರ್ಯಕರ್ತರು ಹಿಂದಿರಬಾರದು. ಅಪಪ್ರಚಾರಗಳಿಗೆ ತಕ್ಕ ತಿರುಗೇಟು ನೀಡಬೇಕು. ಎಲ್ಲ ರೀತಿಯ ಸಾಮಾಜಿಕ ಮಾಧ್ಯಮವನ್ನೂ ಬಳಸಿಕೊಳ್ಳಬೇಕು’ ಎಂದು ಸಲಹೆ ನೀಡಿದರು.

ವರ್ಷದ ಮುಂಚೆಯೇ ಅಭ್ಯರ್ಥಿ ಘೋಷಣೆ:‘ಚುನಾವಣೆ ಇನ್ನೇನು 15 ದಿನಗಳಿವೆ ಎನ್ನುವಾಗ ಅಭ್ಯರ್ಥಿಯನ್ನು ಘೋಷಿಸಿದರೆ ಗೆಲ್ಲಲು ಸಾಧ್ಯವಿಲ್ಲ. ಹೀಗಾಗಿ, ಮುಂಬರುವ ವಿಧಾನಸಭಾ ಚುನಾವಣೆಗೆ ವರ್ಷದ ಮುಂಚೆಯೇ ಅಭ್ಯರ್ಥಿಗಳನ್ನು ಘೋಷಿಸಲಾಗುವುದು. ಕಾರ್ಯಕರ್ತರು ಈಗಿನಿಂದಲೇ ಪಕ್ಷ ಸಂಘಟನೆಯಲ್ಲಿ ತೊಡಗಿಸಿಕೊಳ್ಳಬೇಕು. ತಾಲ್ಲೂಕು ಮತ್ತು ಜಿಲ್ಲಾ ಪಂಚಾಯ್ತಿ ಚುನಾವಣೆಯಲ್ಲಿ ಪಕ್ಷದ ಅಭ್ಯರ್ಥಿಗಳನ್ನು ಗೆಲ್ಲಿಸಲು ಶ್ರಮಿಸಬೇಕು’ ಎಂದು ತಿಳಿಸಿದರು.

ಪಟ್ಟಣದ ಹಲವು ಮಂದಿ ಯುವಕರು ಬಿಜೆಪಿ ತೊರೆದು ಕಾಂಗ್ರೆಸ್ ಸೇರ್ಪಡೆಯಾದರು. ಮುಖಂಡರಾದ ಮಾರುತಿ ಗಲಗಲಿ, ಆನಂದ ಮೊಳೆ, ಹನುಮಂತ ತಳವಾರ, ಸಂಕ್ರೆವ್ವ ಗಾಣಿಗೇರ, ಮಹೇಂದ್ರ ಪಾಲ್ಗೊಂಡಿದ್ದರು.

ಮುಗಳಖೋಡದಲ್ಲಿ ಪ್ರತಿಭಟನೆ:‘ಕಾಂಗ್ರೆಸ್ ಪಕ್ಷ ಆಡಳಿತದಲ್ಲಿದ್ದಾಗ ಪೆಟ್ರೋಲ್ ಮತ್ತು ಡೀಸೆಲ್‌ ತೆರಿಗೆಯನ್ನು ಶೇ 16ರಷ್ಟನ್ನು ಗ್ರಾಹಕರ ಮೇಲೆ ಹಾಕುತ್ತಿತ್ತು. ಆದರೆ, ನರೇಂದ್ರ ಮೋದಿ ನೇತೃತ್ವದ ಈಗಿನ ಸರ್ಕಾರ ಶೇ 65ರಷ್ಟನ್ನು ಗ್ರಾಹಕರ ಮೇಲೆ ಹೇರುತ್ತಿದೆ. ಸಾಮಾನ್ಯ ಜನರ ಆರ್ಥಿಕ ಭದ್ರತೆಗೆ ಧಕ್ಕೆಯನ್ನುಂಟು ಮಾಡಿದೆ’ ಎಂದು ಸತೀಶ ಜಾರಕಿಹೊಳಿ ಆರೋಪಿಸಿದರು.

ತೈಲ ಬೆಲೆ ಏರಿಕೆ ವಿರೋಧಿಸಿ ಪಕ್ಷದಿಂದ ಮುಖಂಡ ಮಹೇಂದ್ರ ತಮ್ಮನ್ನವರ ನೇತೃತ್ವದಲ್ಲಿ ಮುಗಳಖೋಡ ಪಟ್ಟಣದಲ್ಲಿ ಶನಿವಾರ ಹಮ್ಮಿಕೊಂಡಿದ್ದ ಪ್ರತಿಭಟನಾ ಜಾಥಾದಲ್ಲಿ ಅವರು ಮಾತನಾಡಿದರು.

ರೈತ ವಿರೋಧಿ ಸರ್ಕಾರ:‘ಈ ಸರ್ಕಾರ ರೈತ ವಿರೋಧಿಯಾಗಿದೆ. ಅವರ ಹೋರಾಟಕ್ಕೆ ಕಿವಿ ಕೊಡುತ್ತಿಲ್ಲ. ಕೃಷಿಕರ ಆತ್ಮಹತ್ಯೆ ಪ್ರಕರಣಗಳು ವರದಿಯಾಗುತ್ತಲೇ ಇವೆ. ಮಾರಕವಾದ ಕಾಯ್ದೆಗಳನ್ನು ಕೂಡ ಹೇರಲಾಗಿದೆ. ರೈತ ಕುಲಕ್ಕೆ ಮರಣಶಾಸನ ರಚಿಸಿದಂತಾಗಿದೆ’ ಎಂದು ಆರೋಪಿಸಿದರು.

‘ಆಡಂಬರವಿಲ್ಲದ ನಾಯಕತ್ವ ನಮ್ಮದು. ಜನರನ್ನು ಮರಳು ಮಾಡುವವರ ಬಗ್ಗೆ ಎಚ್ಚರಿಕೆ ಇರಲಿ. ನಮ್ಮ ನಾಯಕರು ಸಮಯಕ್ಕೆ ತಕ್ಕಂತೆ ಬಣ್ಣ ಬದಲಿಸುವವರಲ್ಲ. ಆದರೆ, ಒಂದೊಂದು ರಾಜ್ಯದಲ್ಲಿ ಒಂದೊಂದು ಉಡುಗೆ–ತೊಡುಗೆ ಧರಿಸಿ ಜನರನ್ನು ಮರಳು ಮಾಡುವ ಕೆಲಸದಲ್ಲಿ ಮೋದಿ ನಿರತವಾಗಿದ್ದಾರೆ. ಇದೊಂದು ಮೋಡಿ ಸರ್ಕಾರವಾಗಿದೆ’ ಎಂದು ವಾಗ್ದಾಳಿ ನಡೆಸಿದರು.

ಚಿಕ್ಕೋಡಿ ಜಿಲ್ಲಾ ಘಟಕದ ಅಧ್ಯಕ್ಷ ಲಕ್ಷ್ಮಣ ಚಿಂಗಳೆ, ಕಿಸಾನ್ ಘಟಕದ ಉಪಾಧ್ಯಕ್ಷ ದಸ್ತಗೀರ್ ಕಾಗವಾಡೆ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ರೇವಣ್ಣ ಸರವ, ಯಲ್ಲಪ್ಪ ಶಿಂಗೆ, ಆಯಿಷಾ ಸನದಿ, ಸಂಜೀವ ಕುಮಾರ ಬಾನೆ, ಅಶೋಕ ಕೊಪ್ಪದ, ಭೀಮಶಿ ಬನಶಂಕರ, ಶಶಿಧರ ಗೊಳಸಂಗಿ, ಪರಶುರಾಮ ಕಡಕೋಳ, ಅಣ್ಣಪ್ಪಸೊಂಟನ್ನವರ, ಆನಂದ ತುಳಜ್ಜಗೋಳ ಇದ್ದರು.

ಚಕಾರ ಎತ್ತುತ್ತಿಲ್ಲ
ನುಡಿದಂತೆ ನಡೆಯುವುದನ್ನೇ ಬಿಜೆಪಿ ಮರೆತಿದೆ. ವಿದೇಶದಲ್ಲಿರುವ ಕಪ್ಪು ಹಣ ತರುತ್ತೇನೆಂದು ಪ್ರಣಾಳಿಕೆಯಲ್ಲಿ ಪ್ರಮುಖ ಅಂಶವನ್ನಾಗಿ ಬಿಂಬಿಸಿ ಜನರನ್ನು ಮರಳು ಮಾಡಿದವರು ಇಂದಿಗೂ ಆ ಬಗ್ಗೆ ಚಕಾರ ಎತ್ತುತ್ತಿಲ್ಲ.
– ಸತೀಶ ಜಾರಕಿಹೊಳಿ, ಕಾರ್ಯಾಧ್ಯಕ್ಷ, ಕೆಪಿಸಿಸಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT