ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಮುರಿದು ಕಟ್ಟುವ ಕಾರ್ಯ ನಾವೇ ಮಾಡಬೇಕು’

ಮಹಿಳಾ ಸಂವೇದನೆ, ಬವಣೆ ತೆರೆದಿಟ್ಟ ಗೋಷ್ಠಿ
Last Updated 31 ಜನವರಿ 2021, 14:29 IST
ಅಕ್ಷರ ಗಾತ್ರ

ಮಿರ್ಜಿ ಅಣ್ಣಾರಾಯ ವೇದಿಕೆ (ಕಾಗವಾಡ): ‘ನಾವು ನಡೆಯುವ ದಾರಿಯನ್ನು ನಾವೇ ಕಂಡುಕೊಳ್ಳಬೇಕು. ನಮ್ಮ ಕಥೆಯನ್ನು ನಾವೇ ಮುರಿದು ಕಟ್ಟಿಕೊಳ್ಳಬೇಕು’.

– ಹೀಗೆ ಧೈರ್ಯ ತುಂಬುವ ಜೊತೆಗೆ ದಾರಿ ತೋರಿದವರು ಕೇಂದ್ರ ಸಾಹಿತ್ಯ ಅಕಾಡೆಮಿ ಕನ್ನಡ ಸಲಹಾ ಸಮಿತಿ ಸದಸ್ಯೆ ಡಾ.ಪದ್ಮಿನಿ ನಾಗರಾಜು.

ಇಲ್ಲಿನ ಮಲ್ಲಿಕಾರ್ಜುನ ವಿದ್ಯಾಲಯದ ಆವರಣದಲ್ಲಿ ಭಾನುವಾರ ನಡೆದ ಮಹಿಳಾ ಗೋಷ್ಠಿಯಲ್ಲಿ ‘ಕನ್ನಡ ಸಾಹಿತ್ಯದಲ್ಲಿ ಮಹಿಳಾ ಸಂವೇದನೆ’ ವಿಷಯ ಕುರಿತು ಅವರು ಮಾತನಾಡಿದರು.

‘ತೃತೀಯ ಲಿಂಗಿಗಳ ಸಂಕಟದ ಸಂವೇದನೆಯನ್ನು ಯಾವ ನೆಲೆಯಲ್ಲಿ ಅರ್ಥ ಮಾಡಿಕೊಳ್ಳಬೇಕು? ಎಲ್ಲ ಸಂವೇದನೆಗಳನ್ನೂ ಮಾನವೀಯತೆಯಿಂದ ನೋಡಬೇಕು. ರಾಜರ ಅರಮನೆಯಲ್ಲಿದ್ದ ರಾಣಿಯರ ನೋವು ಇತಿಹಾಸದಿಂದನ ನಮಗೆ ಸಿಗುವುದಿಲ್ಲ. ಹೀಗಾಗಿ ಮುರಿದುಕಟ್ಟುವ ಕೆಲಸವನ್ನು ನಾವು ಮಾಡಬೇಕಾಗುತ್ತದೆ’ ಎಂದು ಪ್ರತಿಪಾದಿಸಿದರು.

‘ಗೊಲ್ಲ ಸಮಾಜದಲ್ಲಿ ಇಂದಿಗೂ ಮೌಢ್ಯ ಹಾಸುಹೊಕ್ಕಾಗಿದೆ. ಮುಟ್ಟಾದರೆ ಮನೆಯಲ್ಲಿರುವಂತಿಲ್ಲ ಎಂಬ ಪದ್ಧತಿ ಇದೆ. ಬುಡಕಟ್ಟು ಜನಾಂಗದವರು ಬಹಳ ನೋವನ್ನು ಅನುಭವಿಸುತ್ತಿದ್ದಾರೆ. ಅದರಲ್ಲೂ ಮಹಿಳೆಯರ ಪಾಡ ಹೇಳತೀರದು. ಈ ಸಂದರ್ಭದಲ್ಲಿ ಸ್ತ್ರೀ ಸಂವೇದನೆಗೆ ನಾವು ಹೇಗೆ ಸ್ಪಂದಿಸುತ್ತಿದ್ದೇವೆ ಎಂದು ಪ್ರಶ್ನೆ ಮಾಡಿಕೊಳ್ಳಬೇಕಾಗಿದೆ. ಸ್ವ ಮರುಕಗಳನ್ನು ಬಿಟ್ಟು ಸಂವೇದನೆಗಳನ್ನು ದಾಖಲಿಸುವ ಕೆಲಸ ಮಾಡಬೇಕು’ ಎಂದು ಹೇಳಿದರು.

‘ಇಂದಿಗೂ ಅತ್ಯಾಚಾರಗಳು ನಡೆಯುತ್ತಿವೆ. ಬಾಲ್ಯವಿವಾಹಗಳು ನಿಂತಿಲ್ಲ’ ಎಂದು ಕವಳಳ ವ್ಯಕ್ತಪಡಿಸಿದರು.

ಪ್ರಸಾರ ಭಾರತಿ ದೂರದರ್ಶನ ಕೇಂದ್ರದ ಸಹ ನಿರ್ದೇಶಕಿ ಡಾ.ನಿರ್ಮಲಾ ಯಲಿಗಾರ ‘ಆಕಾಶವಾಣಿಯ ಪ್ರಸ್ತುತತೆ’ ಬಗ್ಗೆ ಮಾತನಾಡಿದರು.

ಅಧ್ಯಕ್ಷತೆ ವಹಿಸಿದ್ದ ಮಾಜಿ ಸಚಿವೆ ಲೀಲಾವತಿ ಆರ್. ಪ್ರಸಾದ್, ‘ಅನೇಕ ಸಮ್ಮೇಳನಗಳನ್ನು ‌ನೋಡಿದ್ದೇನೆ. ಗೋಷ್ಠಿಗಳಲ್ಲಿ ಚರ್ಚಿಸುತ್ತೇವೆ. ಆದರೆ, ಮಹಿಳೆಯರ ಸಮಸ್ಯೆಗಳಿಗೆ ಇಂದಿಗೂ ಪರಿಹಾರ ಸಿಕ್ಕಿಲ್ಲ. ಬದುಕಿನಲ್ಲಿ ಬದಲಾವಣೆಗಳು ಆಗಿಲ್ಲ’ ಎಂದು ವಿಷಾದಿಸಿದರು.

‘ಸಾಹಿತ್ಯ ನಮ್ಮ ಬದುಕಿನ ಪ್ರತೀಕ ಹಾಗೂ ಬೆಳಕಾಗಬೇಕು. ಸಾಹಿತ್ಯ ಕೆಲವರ ಸ್ವತ್ತಲ್ಲ. ಸತ್ಯವಾದ ಸಾಹಿತ್ಯ ಬರೆಯುವ ಶಕ್ತಿ ಬರುತ್ತಿಲ್ಲ. ಏನೆಂದುಕೊಳ್ಳುತ್ತಾರೆಯೋ ಎಂಬ ಭಯ ನಮಗಿದೆ. ಮನಸ್ಸು ಬಿಚ್ಚಿ ಬರೆಯುವ ಶಕ್ತಿ ಬಂದಿಲ್ಲ’ ಎಂದು ವಿಶ್ಲೇಷಿಸಿದರು.

‘ಮಹಿಳೆಯರಿಗಿಂತಲೂ ಹತ್ತು ಪಟ್ಟು ಹೆಚ್ಚಿನ ಸಮಸ್ಯೆಗಳು ಪುರುಷರಿಗೂ ಇವೆ. ಪುರುಷರ ಜೊತೆಯಲ್ಲಿದ್ದುಕೊಂಡೇ ನಾವು ಮುಂದೆ ಬರಬೇಕು. ಪುರುಷರು ನಮ್ಮನ್ನು ಜೊತೆ ಜೊತೆಯಲ್ಲೇ ಕರೆದುಕೊಂಡು ಹೋಗಬೇಕು’ ಎಂದು ಆಶಿಸಿದರು.

ಕಸಾಪ ಜಿಲ್ಲಾ ಘಟಕದ ಅಧ್ಯಕ್ಷೆ ಮಂಗಲಾ ಮೆಟಗುಡ್ಡ ಇದ್ದರು. ವಿದ್ಯಾವತಿ ಜನವಾಡೆ ಸ್ವಾಗತಿಸಿದರು. ರೋಹಿಣಿ ಯಾದವಾಡ ಹಾಗೂ ಲಲಿತಾ ಕ್ಯಾಸನ್ನವರ ನಿರೂಪಿಸಿದರು. ಕಸಾಪ ಜಿಲ್ಲಾ ಘಟಕದ ಕಾರ್ಯದರ್ಶಿ ಜ್ಯೋತಿ ಬದಾಮಿ ವಂದಿಸಿದರು.

***

‘ನೆಮ್ಮದಿಯಿಂದ ಇರುವವರು ಯಾರಿದ್ದಾರೆ?’

‘ಸಂವಿಧಾನವು ಎಲ್ಲರಿಗೂ ಸಮಾನತೆ ನೀಡಿದೆ. ಮಹಿಳೆಯನ್ನು ಪೂಜಿಸುವ ಸಂಸ್ಕೃತಿ ನಮ್ಮದು. ಆದರೂ ಮಹಿಳೆ ಹೋರಾಟ ಮಾಡುತ್ತಿರುವುದೇಕೆ?’ ಎಂದು ಕೇಳಿದವರು ಅಥಣಿಯ ಸಂತರಾಮ ಪಿಯು ಕಾಲೇಜಿನ ಪ್ರಾಚಾರ್ಯೆ ಡಾ.ಭಾರತಿ ವಿಜಾಪುರ.

‘ಮಹಿಳೆ ಮತ್ತು ಹೋರಾಟ’ ವಿಷಯದ ಕುರಿತು ಮಾತನಾಡಿ, ‘ಬೊಗಸೆಯಷ್ಟು ಮಹಿಳೆಯರು ಮಾತ್ರ ನೆಮ್ಮದಿ ಹಾಗೂ ಸುಖದಿಂದ ಇರಬಹುದು. ಸಂಪೂರ್ಣ ನೆಮ್ಮದಿಯಿಂದ ಇದ್ದೇನೆ ಎಂದು ಹೇಳುವ ಮಹಿಳೆ ಇದ್ದಾಳೆಯೇ’ ಎಂದು ಪ್ರಶ್ನೆ ಮುಂದಿಟ್ಟರು.

‘ಮಹಿಳೆಯನ್ನು ರಕ್ಷಿಸುವ ಸಲುವಾಗಿ ಅಲ್ಲ, ಆಕೆಯ ಪಾವಿತ್ರ್ಯತೆ ರಕ್ಷಿಸಲು ಸನಾತನ ಧರ್ಮ ಮತ್ತು ಎಲ್ಲ ಧರ್ಮದ ಸನಾತನಿಗಳು ಹಲವು ಸಮಸ್ಯೆಗಳನ್ನು ನಮಗೆ ಹುಟ್ಟು ಹಾಕಿದ್ದಾರೆ. ಬಾಲ್ಯವಿವಾಹ ಇಲ್ಲ, ಭ್ರೂಣ ಹತ್ಯೆ ಇಲ್ಲ ಎಂದೇ ಇಲಾಖೆ ವರದಿ ಕೊಡುತ್ತದೆ. ಆದರೆ, ವಾಸ್ತವ ಪರಿಸ್ಥಿತಿ ಬೇರೆಯೇ ಇದೆ. ಮಗಳನ್ನು ಓದಿಸಲಾಗದೆ ಹೊಳೆಗೆ ತಳ್ಳುವ ನಿರ್ಧಾರಕ್ಕೆ ಬಂದಿದ್ದೇನೆ ಎಂದು ಈಚೆಗೆ ಮಹಿಳೆ ಕಣ್ಣಿರಿಟ್ಟರು. ಇದೊಂದು ಉದಾಹರಣೆ ಮಾತ್ರ. ಇಂಥವು ಬಹಳಷ್ಟಿವೆ’ ಎಂದರು.

‘ಮಹಿಳಾ ಕಳ್ಳಸಾಗಣೆ ಇಂದಿಗೂ ನಡೆಯುತ್ತಿದೆ. ಪಂಚಾಯ್ತಿ ಸದಸ್ಯರು ಏನು ಮಾಡುತ್ತಿದ್ದಾರೆಯೋ ಗೊತ್ತಿಲ್ಲ’ ಎಂದು ಆಕ್ರೋಶ ವ್ಯಕ್ತಪಡಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT