ಸೋಮವಾರ, ಮೇ 16, 2022
22 °C
ದಸಂಸ ರಾಜ್ಯ ಸಂಚಾಲಕ ಮಾವಳ್ಳಿ ಶಂಕರ್‌

ಷಡ್ಯಂತ್ರಗಳ ವಿರುದ್ಧ ಶೋಷಿತರು ಹೋರಾಡಬೇಕು: ಮಾವಳ್ಳಿ ಶಂಕರ್‌

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಬೆಳಗಾವಿ: ‘ಡಾ.ಬಿ.ಆರ್. ಅಂಬೇಡ್ಕರ್ ವಿಚಾರಗಳನ್ನು ವಿರೋಧಿಸಲು ಷಡ್ಯಂತ್ರ ನಡೆಸುತ್ತಿರುವ ಕೆಲವು ಸಂಘಟನೆಗಳು ಮತ್ತು ಹಿತಾಸಕ್ತಿಗಳಿಗೆ ಶೋಷಿತರೆಲ್ಲರೂ ಸಂಘಟಿತರಾಗಿ ತಕ್ಕ ಉತ್ತರ ನೀಡಬೇಕು’ ಎಂದು ದಸಂಸ ರಾಜ್ಯ ಸಂಚಾಲಕ ಮಾವಳ್ಳಿ ಶಂಕರ್‌ ತಿಳಿಸಿದರು.

ನಗರದ ಕನ್ನಡ ಸಾಹಿತ್ಯ ಭವನದಲ್ಲಿ ಭಾನುವಾರ ನಡೆದ ದಸಂಸ ವಿಭಾಗೀಯ ಮಟ್ಟದ ಸಭೆಯಲ್ಲಿ ಅವರು ಮಾತನಾಡಿದರು.

‘ದೇಶದಲ್ಲಿ ಹಿಂದುಳಿದವರು, ಪರಿಶಿಷ್ಟರಿಗೆ ತೊಂದರೆ ಕೊಡಲು ಷಡ್ಯಂತ್ರ ನಡೆಯುತ್ತಿದೆ. ಅಂಬೇಡ್ಕರ್ ರಚಿಸಿದ ಸಂವಿಧಾನಕ್ಕೂ ಧಕ್ಕೆ ಮಾಡಲಾಗುತ್ತಿದೆ. ಈ ಎಲ್ಲ ಷಡ್ಯಂತ್ರಗಳ ಹಿಂದೆ ಆರ್‌ಎಸ್‍ಎಸ್ ಕೈವಾಡವಿದೆ. ಅದಕ್ಕಾಗಿ ನಾವು ಒಗ್ಗಟ್ಟಾಗಬೇಕು. ಸಂವಿಧಾನ, ಮೀಸಲಾತಿ ಉಳಿಸಿಕೊಳ್ಳಲು ಮತ್ತು ಸಂವಿಧಾನಬದ್ಧ ಹಕ್ಕುಗಳನ್ನು ಪಡೆದುಕೊಳ್ಳಲು ಹೋರಾಟ ಮಾಡಬೇಕು’ ಎಂದು ಹೇಳಿದರು.

ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ಆನಂದ ಸದ್ರೆಮನಿ, ಬಸವರಾಜ ರಾಯಗೋಳ, ಅಶೋಕ ಮನ್ನಿಕೇರಿ, ಕಲ್ಲಪ್ಪ ರಾಮಚನ್ನವರ, ಮಹಾದೇವ ರಾಮಚನ್ನವರ, ಮಹಾಂತೇಶ ಕೋಲ್ಕಾರ ಅವರನ್ನು ಸನ್ಮಾನಿಸಲಾಯಿತು.

ಜಿಲ್ಲಾ ಘಟಕದ ಅಧ್ಯಕ್ಷ ಗೌತಮ ಪಾಟೀಲ, ಮುಖಂಡರಾದ ಸಿದ್ದಪ್ಪ ಕಾಂಬಳೆ, ಕೆಂಪಣ್ಣ ಕಾಂಬಳೆ, ಶಶಿಕಾಂತ ಸಾಳ್ವೆ, ಮೂರ್ತಿ ಬಿಲಾರೆ, ಜಿತೇಂದ್ರ ಕಾಂಬಳೆ, ನಾರಾಯಣ ಬಡಗಾವಿ, ಬಲರಾಜ ಅರವಾರ, ನಾಗರಾಜ ತಳವಾರ ಮತ್ತು ಲಕ್ಷ್ಮಣ ದೊಡ್ಡಮನಿ ಪಾಲ್ಗೊಂಡಿದ್ದರು.

ಇದಕ್ಕೂ ಮುನ್ನ ಅಂಬೇಡ್ಕರ್‌ ಉದ್ಯಾನದಲ್ಲಿ ಪ್ರತಿಭಟಿಸಲಾಯಿತು. ಬಳಿಕ ಪತ್ರಕರ್ತರೊಂದಿಗೆ ಮಾತನಾಡಿದ ಮುಖಂಡ ಸಿದ್ದಣ್ಣ ಕಾಂಬಳೆ, ‘ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ರೈತರಿಗೆ ಮಾರಕವಾಗಿರುವ ಕೃಷಿ ಕಾಯ್ದೆಗಳನ್ನು ತಕ್ಷಣ ಕೈಬಿಡಬೇಕು’ ಎಂದು ಒತ್ತಾಯಿಸಿದರು.

‘ರಾಜ್ಯದಲ್ಲಿ ನಾಲ್ಕೂವರೆ ಲಕ್ಷ ಪರಿಶಿಷ್ಟ ಜಾತಿ ಹಾಗೂ ಪಂಗಡದವರು ಭೂಮಿ ಉಳುಮೆ ಮಾಡುತ್ತಿದ್ದಾರೆ. ಅವರಿಗೆ ಇದುವರೆಗೂ ಹಕ್ಕುಪತ್ರ ಸಿಕ್ಕಿಲ್ಲ. ಭೂ ಸುಧಾರಣೆ ಕಾಯ್ದೆಗೆ ತಿದ್ದುಪಡಿ ತರುವ ಮೂಲಕ ರಿಯಲ್ ಎಸ್ಟೇಟ್‍ನವರು ಮತ್ತು ಬಂಡವಾಳಶಾಹಿಗಳಿಗೆ ಅನುಕೂಲ ಮಾಡಿಕೊಡಲು ಸರ್ಕಾರ ಹೊರಟಿರುವುದು ಖಂಡನೀಯ. ಅವರಿಗೆ ರೈತರ ಭೂಮಿಯನ್ನು ಪರಭಾರೆ ಮಾಡುವ ಸಾಧ್ಯತೆಗಳಿವೆ. ಇದನ್ನು ಎಲ್ಲರೂ ವಿರೋಧಿಸಬೇಕು’ ಎಂದರು.

‘ಹಲವು ವರ್ಷಗಳಿಂದ ಭೂಮಿಯಲ್ಲಿ ಮಾಡುತ್ತಿರುವವರಿಗೆ ಭೂಮಿ ಹಸ್ತಾಂತರಿಸಬೇಕು. ಮುಚ್ಚಿರುವ ಶಾಲೆಗಳನ್ನು ಕೂಡಲೇ ತೆರೆದು ಶೋಷಿತರು ಶಿಕ್ಷಣದಿಂದ ವಂಚಿತವಾಗದಂತೆ ನೋಡಿಕೊಳ್ಳಬೇಕು’ ಎಂದು ಆಗ್ರಹಿಸಿದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು