ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹೂಡಿಕೆ ಆಕರ್ಷಿಸಲು ಜವಳಿ ನೀತಿಯಲ್ಲಿ ತಿದ್ದುಪಡಿ; ಜವಳಿ ಸಚಿವ ಮುನೇನಕೊಪ್ಪ ಮಾಹಿತಿ

ಜವಳಿ ಸಚಿವ ಮುನೇನಕೊಪ್ಪ ಮಾಹಿತಿ
Last Updated 28 ಸೆಪ್ಟೆಂಬರ್ 2021, 16:31 IST
ಅಕ್ಷರ ಗಾತ್ರ

ಬೆಳಗಾವಿ: ‘ಬಂಡವಾಳ ಹೂಡಿಕೆ ಹೆಚ್ಚಿಸುವ ಸಲುವಾಗಿ ನೂತನ ಜವಳಿ ಮತ್ತು ಸಿದ್ಧ ಉಡುಪು ನೀತಿ 2019–24ರಲ್ಲಿ ಕೆಲವು ತಿದ್ದುಪಡಿಗಳನ್ನು ಮಾಡಲಾಗುವುದು’ ಎಂದು ಕೈಮಗ್ಗ ಮತ್ತು ಜವಳಿ ಸಚಿವ ಶಂಕರ ಪಾಟೀಲ ಮುನೇನಕೊಪ್ಪ ತಿಳಿಸಿದರು.

‘ಕೋವಿಡ್–19 ಸಮಯದಲ್ಲಿ ಗಮನಾರ್ಹ ಬಂಡವಾಳ ಹೂಡಿಕೆ ಆಗಿಲ್ಲ. ಹೀಗಾಗಿ, ಮುಂದಿನ ದಿನಗಳಲ್ಲಿ ಹೂಡಿಕೆಗೆ ಆಕರ್ಷಿಸಲಾಗುವುದು. ಜವಳಿ ಮತ್ತು ಸಿದ್ಧ ಉಡುಪು ಕ್ಷೇತ್ರದಲ್ಲಿ ಹೆಚ್ಚಿನ ಹೂಡಿಕೆಗಾಗಿ ರಾಜ್ಯ ಹಾಗೂ ಹೊರ ರಾಜ್ಯಗಳ ಉದ್ದಿಮೆದಾರರೊಂದಿಗೆ ಚರ್ಚಿಸಿ ಪ್ರೋತ್ಸಾಹಿಸಲಾಗುವುದು’ ಎಂದು ಇಲ್ಲಿ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದರು.

‘ಕ್ಷೇತ್ರವು 10 ಲಕ್ಷ ಜನರಿಗೆ ಉದ್ಯೋಗ ನೀಡಿದೆ. ಈ ಪ್ರಮಾಣ ಹಚ್ಚಿಸಲು ಕ್ರಮ ವಹಿಸಲಾಗುವುದು. ಇದಕ್ಕಾಗಿ ಇಲಾಖೆಯ ಪುನಶ್ಚೇತನಕ್ಕೂ ಆದ್ಯತೆ ಕೊಡಲಾಗುವುದು’ ಎಂದರು.

‘ನೀತಿಯಲ್ಲಿ ನೇಯ್ಗೆ, ಸ್ಪಿನ್ನಿಂಗ್, ಸಂಯೋಜಿತ ಘಟಕ, ಸಂಸ್ಕರಣ ಮತ್ತು ಜವಳಿ ಘಟಕಗಳನ್ನು ಆದ್ಯತಾ ವಲಯವೆಂದು ಗುರುತಿಸಿ, ಹೆಚ್ಚಿನ ಸಹಾಯಧನ ನೀಡಲಾಗುವುದು. ಹೂಡಿಕೆ ಮೇಲೆ ಶೇ 30ರವರೆಗೆ ಸಾಲಾಧಾರಿತ ಬಂಡವಾಳ ಸಹಾಯಧನ ಒದಗಿಸಲಾಗುವುದು. ಮೆಗಾ ಜವಳಿ ಘಟಕಗಳ ಸ್ಥಾಪನೆಗೆ ಪ್ರತ್ಯೇಕ ಪ್ರೋತ್ಸಾಹಧನ ಮತ್ತು ರಿಯಾಯಿತಿ ಸೌಲಭ್ಯ ಕೊಡಲಾಗುವುದು’ ಎಂದು ತಿಳಿಸಿದರು.

ತರಬೇತಿ:

‘ಮಾನವ ಸಂಪನ್ಮೂಲ ಅಭಿವೃದ್ಧಿ ಮತ್ತು ಕೌಶಲ ಉನ್ನತೀಕರಣಕ್ಕೆ ಹೆಚ್ಚು ಒತ್ತು ಕೊಡಲಾಗುತ್ತಿದೆ. ಇಲಾಖೆಯಿಂದ ಸ್ಥಾಪಿತಗೊಂಡಿರುವ 145 ಎಸ್‌ಡಿಸಿ ತರಬೇತಿ ಕೇಂದ್ರಗಳು ಮತ್ತು 180 ಖಾಸಗಿ ತರಬೇತಿ ಸಂಸ್ಥೆಗಳ ಮೂಲಕ ವಿವಿಧ ತರಬೇತಿಗಳನ್ನು ಕೊಡಲಾಗುತ್ತಿದೆ’ ಎಂದರು.

‘ಅಧಿಕಾರಿಗಳು ಕೇವಲ ಬೆಂಗಳೂರಿನಲ್ಲಿದ್ದರೆ ಸಾಲದು. ಹೀಗಾಗಿ, ಅವರನ್ನು ಜಿಲ್ಲೆಗಳಿಗೂ ಕರೆಸಿ ನೇಕಾರರ ಸಮಸ್ಯೆಗಳ ಪರಿಹಾರಕ್ಕೆ ಕ್ರಮ ವಹಿಸಿದ್ದೇನೆ. ಆಗಾಗ ಸುವರ್ಣ ವಿಧಾನಸೌಧದಲ್ಲಿ ಸಭೆ ನಡೆಸಿ, ಕುಂದುಕೊರತೆಗಳನ್ನು ಆಲಿಸಲಾಗುವುದು’ ಎಂದು ತಿಳಿಸಿದರು.

‘ಬೆಳಗಾವಿಗೆ ಸಕ್ಕರೆ ಆಯುಕ್ತರ ಕಚೇರಿ ಸ್ಥಳಾಂತರಿಸುವುದಾಗಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಘೋಷಿಸಿದ್ದಾರೆ. ಅವರ ನಿರ್ಧಾರಕ್ಕೆ ಬದ್ಧವಿದ್ದೇನೆ’ ಎಂದು ಪ್ರತಿಕ್ರಿಯಿಸಿದರು.

‘ಮೂರು ವರ್ಷಗಳಲ್ಲಿ ನೇಕಾರರ ₹ 112 ಕೋಟಿ ಸಾಲ ಮನ್ನಾ (ಕ್ರೆಡಿಟ್ ಸಾಲ ಹೊರತುಪಡಿಸಿ) ಮಾಡಿದ್ದೇವೆ. ಅವರವರ ಖಾತೆಗಳಿಗೆ ನೇರವಾಗಿ ಜಮಾ ಮಾಡಲಾಗಿದೆ. ಅ.2ರಂದು ಕಾರ್ಯಕರ್ತರೊಂದಿಗೆ ಕೈಮಗ್ಗ ಘಟಕಗಳಿಗೆ ಭೇಟಿ ಕೊಡಲಿದ್ದೇನೆ. ಅಲ್ಲಿ ಸಿದ್ಧವಾದ ಬಟ್ಟೆ, ಉಡುಪು ಮೊದಲಾದವುಗಳ ಖರೀದಿಗೆ ಜಾಗೃತಿ ಮೂಡಿಸುವುದು ನನ್ನ ಉದ್ದೇಶವಾಗಿದೆ’ ಎಂದರು.

‘12 ಮಂದಿ ನೇಕಾರರ ಆತ್ಮಹತ್ಯೆ’

‘ಬೆಳಗಾವಿ ಜಿಲ್ಲೆಯಲ್ಲಿ 10, ಬಾಗಲಕೋಟೆ ಹಾಗೂ ಧಾರವಾಡದಲ್ಲಿ ತಲಾ ಒಬ್ಬರು ಸೇರಿ 12 ಮಂದಿ ನೇಕಾರರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. 12 ಪ್ರಕರಣಗಳಲ್ಲೂ ಮುಖ್ಯಮಂತ್ರಿ ಪರಿಹಾರ ನಿಧಿಯಿಂದ ಪರಿಹಾರಕ್ಕೆ ಶಿಫಾರಸು ಮಾಡಲಾಗಿದೆ. 3 ಕುಟುಂಬಗಳಿಗೆ ಒದಗಿಸಲಾಗಿದೆ. ಮೂವರಿಗೆ ಜಿಲ್ಲಾಧಿಕಾರಿ ಕಚೇರಿಯಿಂದ ಬಿಡುಗಡೆ ಆಗಬೇಕಿದೆ. 6 ಪ್ರಕರಣಗಳಿಗೆ ಮಂಜೂರಾತಿ ಬಾಕಿ ಇದೆ’ ಎಂದು ಸಚಿವರು ಮಾಹಿತಿ ನೀಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT