ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮತಾಂತರ ನಿಷೇಧ ಕಾಯ್ದೆ: ನಮ್ಮ ಸರ್ಕಾರ ಬಂದಾಗ ವಾಪಸ್ ತಗೊತೀವಿ– ಸಿದ್ದರಾಮಯ್ಯ

Last Updated 17 ಡಿಸೆಂಬರ್ 2021, 6:58 IST
ಅಕ್ಷರ ಗಾತ್ರ

ಬೆಳಗಾವಿ: 'ಮತಾಂತರ ನಿಷೇಧ ಕಾಯ್ದೆಗೆ ವಿಧಾನ ಸಭೆಯಲ್ಲಿ ಅನುಮೋದನೆ ಪಡೆದುಕೊಳ್ಳುವುದಕ್ಕೆ ನಾವು ಬಿಡುವುದಿಲ್ಲ. ಹಾಗೊಂದು ವೇಳೆ ದುಸ್ಸಾಹಸ ಮಾಡಿದರೆ, 2023ಕ್ಕೆ ನಮ್ಮ‌ ಸರ್ಕಾರ ಬಂದ ಕೂಡಲೇ ವಾಪಸ್ ತೆಗೆದುಕೊಳ್ಳುತ್ತೇವೆ' ಎಂದು ವಿಧಾನಸಭೆ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಹೇಳಿದರು.

ಮತಾಂತರ ನಿಷೇಧ ಕಾಯ್ದೆ ವಿರೋಧಿಸಿ ಸುವರ್ಣ ವಿಧಾನ ಸೌಧದ ಬಳಿ ಭಾರತೀಯ ಕ್ರೈಸ್ತ ಒಕ್ಕೂಟದಿಂದ ಕ್ರೈಸ್ತರು ಶುಕ್ರವಾರ ಹಮ್ಮಿಕೊಂಡಿರುವ ಸಾಂಕೇತಿಕ‌ ಉಪವಾಸ ಸತ್ಯಾಗ್ರಹದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.

'ಈಗಾಗಲೇ ನಾವು ನಮ್ಮ ಶಾಸಕಾಂಗ ಪಕ್ಷದ ಸಭೆಯಲ್ಲಿ ಚರ್ಚೆ ಮಾಡಿದ್ದೇವೆ. ಬಿಜೆಪಿಯವರು ಮತಾಂತರ ನಿಷೇಧ ಕಾಯ್ದೆ ಜಾರಿಗೆ ತರುತ್ತೇವೆ ಎಂದಿದ್ದಾರೆ. ಮುಂದಿನ ವಾರ ತರುತ್ತಾರೆ ಎಂದುಕೊಂಡಿದ್ದೇನೆ. ನಮ್ಮ ಪಕ್ಷವು ಈ ಕಾಯ್ದೆಯನ್ನು ತೀವ್ರವಾಗಿ ವಿರೋಧ ಮಾಡುತ್ತದೆ' ಎಂದು ತಿಳಿಸಿದರು.

'ಇದು ಗಂಭೀರ ವಿಚಾರ. ದೇಶದಲ್ಲಿ ಕೋಮು ಸೌಹಾರ್ದ ಹಾಳು ಮಾಡಲು, ಒಂದು ಧರ್ಮವನ್ನು ಗುರಿಯಾಗಿಟ್ಟುಕೊಂಡು ಕಾಯ್ದೆ ತರುತ್ತಿದ್ದಾರೆ. ಇದರಲ್ಲಿ ರಾಜ್ಯದ ಹಿತ ಇಲ್ಲ. ನಿಮ್ಮ (ಕ್ರೈಸ್ತರ) ಜೊತೆ ಯಾವಾಗಲೂ ಇರುತ್ತೇವೆ. ಯಾವುದೇ ಸರ್ಕಾರ ಸಂವಿಧಾನ ಏನು ಹೇಳಿದೆಯೋ ಅದರಂತೆ ನಡೆದುಕೊಳ್ಳಬೇಕು' ಎಂದರು.

'ಯಾವುದೇ ಧರ್ಮವನ್ನು ಆಯ್ಕೆ ಮಾಡಿಕೊಳ್ಳುವುದು, ಒಪ್ಪಿ ಪೂಜಿಸುವುದು ಹಾಗೂ ಪ್ರಚಾರದ ಹಕ್ಕನ್ನು ಸಂವಿಧಾನವು ಪ್ರತಿಯೊಬ್ಬರಿಗೂ ಕೊಟ್ಟಿದೆ. ಯಾವುದೇ ಧರ್ಮದ ಆಧಾರದ ಮೇಲೆ ಸಂವಿಧಾನ ರಚನೆಯಾಗಿಲ್ಲ. ಎಲ್ಲ ಧರ್ಮದವರಿಗೂ ಸಮಾನವಾದ ಸ್ಥಾನ ಕೊಟ್ಟಿದೆ. ನಾವೆಲ್ಲರೂ ಮೊದಲಿಗೆ ಭಾರತೀಯರು. ನಂತರ ಜಾತಿ, ಧರ್ಮ ಬರುತ್ತದೆ. ಜಾತಿ ನಾವು ಮಾಡಿಕೊಂಡಿದ್ದಲ್ಲ. ದೇವರು ಮಾಡಿಲ್ಲ. ಸ್ವಾರ್ಥಕ್ಕೋಸ್ಕರ ಹುಟ್ಟಿಕೊಂಡದ್ದು' ಎಂದರು.

'ದೇಶಕ್ಕೆ ಕ್ರೈಸ್ತ ಧರ್ಮದ ಕೊಡುಗೆ ಅಪಾರವಾಗಿದೆ. ಶಿಕ್ಷಣ ಹಾಗೂ ಆರೋಗ್ಯ ಕ್ಷೇತ್ರಕ್ಕೆ ಅಪಾರ ಕೊಡುಗೆ ನೀಡಿದೆ. ಹಾಗಾದರೆ ಆ ಕಾಲೇಜಿಗೆ ಅಥವಾ ಆಸ್ಪತ್ರೆಗೆ ಹೋದವರು ಮತಾಂತರ ಆಗಬಹುದಾಗಿತ್ತಲ್ಲಾ? ಬಲವಂತವಾಗಿ ಏನನ್ನೂ ಮಾಡುವುದಕ್ಕೆ ಬರುವುದಿಲ್ಲ. ಮತಾಂತರ ನಿಷೇಧ ಎನ್ನುವುದೇ ಸರಿ ಇಲ್ಲ' ಎಂದು ಹೇಳಿದರು.

'ಈ ದೇಶದಲ್ಲಿ ಇಚ್ಛೆ ಇರುವ ಧರ್ಮ ಪಾಲನೆ ಮಾಡಬಹುದು. ಅದು ಅವರ ಸ್ವಾತಂತ್ರ್ಯ. ಅದನ್ನು ಕಿತ್ತಕೊಳ್ಳಬಾರದು. ಕಿತ್ತುಕೊಂಡರೆ ಅದು ಸಂವಿಧಾನ ವಿರೋಧಿಯಾಗುತ್ತದೆ. ನಾನು ಮುಖ್ಯಮಂತ್ರಿ ಆಗಿದ್ದಾಗ ಚರ್ಚ್ ಮೇಲೆ ಒಂದೇ ಒಂದು ದಾಳಿಯೂ ನಡೆಯದಂತೆ ನೋಡಿಕೊಂಡಿದ್ದೆ. ಆಗಲೂ ಇದ್ದ ಪೊಲೀಸರೇ ಈಗಲೂ ಇದ್ದಾರೆ. ಅವರನ್ನು ಹೇಗೆ ಬಳಸಿಕೊಳ್ಳಬೇಕು ಎನ್ನುವುದನ್ನು ಆಡಳಿತ ನಡೆಸುವವರು ವಿವೇಚನೆಯಿಂದ ನಿರ್ಧರಿಸಬೇಕು' ಎಂದರು.

'ಸಂವಿಧಾನ ಒಳ್ಳೆಯವರ ಕೈಯಲ್ಲಿ ಇದ್ದರೆ ಒಳ್ಳೆಯದಾಗುತ್ತದೆ. ಕೆಟ್ಟವರ ಕೈಯಲ್ಲಿ ಇದ್ದರೆ ಕೆಟ್ಟದ್ದಾಗುತ್ತದೆ. ಅಸ್ಪೃಶ್ಯತೆ, ಸಾಮಾಜಿಕ ಹಾಗೂ ಆರ್ಥಿಕ ಅಸಮಾನತೆ ಸರಿಪಡಿಸುವುದು ಸರ್ಕಾರದ ಕೆಲಸ. ಅದನ್ನು ಬಿಟ್ಟು ಅನಗತ್ಯವಾಗಿ ಕಾಯ್ದೆ ತರುವುದು‌ ಒಳ್ಳೆಯದು' ಎಂದರು.

'ಈ ಬಿಜೆಪಿ ಸರ್ಕಾರದವರು ನಿಮ್ಮನ್ನು (ಕ್ರೈಸ್ತರನ್ನು) ಗುರಿಯಾಗಿಟ್ಟುಕೊಂಡು ಕಾಯ್ದೆ ಮಾಡುತ್ತಿದ್ದಾರೆ. ಪ್ರಧಾನಿ ನರೇಂದ್ರ ಮೋದಿ ಬಂದು ದೇಶ ಹಾಳು ಮಾಡಿದರು. ಇಲ್ಲಿನ ಸರ್ಕಾರ ರಾಜ್ಯ ಹಾಳುಗೆಡವುತ್ತಿದೆ. ಇದು ಆರ್‌ಎಸ್‌ಎಸ್ ಹುನ್ನಾರ. ಬಿಜೆಪಿ ಕುತಂತ್ರ. ಅದೆಲ್ಲವೂ ನಮಗೆ ಗೊತ್ತಾಗಿದೆ. ಕ್ರೈಸ್ತರು ಕೇಳಲಿ ಬಿಡಲಿ ನಾವು ವಿರೋಧಿಸಿ ತೋರಿಸುತ್ತೇವೆ. ಎಷ್ಟು ಸಾಧ್ಯವಾಗುತ್ತದೆಯೋ ಅಷ್ಟು ವಿರೋಧಿಸುತ್ತೇವೆ' ಎಂದು ತಿಳಿಸಿದರು.

'ಅಂಥಾದ್ದೆಲ್ಲ ಮಾಡುವುದಕ್ಕೆ ಬಿಡುವುದಿಲ್ಲ ನಾವು ಎಂದಿಗೂ ಮನುಷ್ಯರಾಗಿ ಬದುಕಬೇಕು. ಮನುಷ್ಯತ್ವ ಇಲ್ಲವಾದರೆ ಅದ್ಯಾವ ಸಮಾಜ? ದಯವೇ ಧರ್ಮದ ಮೂಲ ಎಂದು ಬಸವಣ್ಣ ಹೇಳಿದ್ದಾರೆ. ಇದು ಈ ಸರ್ಕಾರದವರಿಗೆ ಅರ್ಥ ಆಗಿಲ್ಲ. ನಿಮ್ಮ ಜೊತೆ ನಾವಿದ್ದೀವೆ. ಆತಂಕ ಪಡಬೇಡಿ' ಎಂದು ಅಭಯ ನೀಡಿದರು.

ಧರ್ಮ ಪ್ರಾಂತ್ಯದ ಬಿಷಪ್ ಡೆರಿಕ್ ಫರ್ನಾಂಡೀಸ್, ಮುಖಂಡರಾದ ಐವನ್‌ ಡಿಸೋಜಾ, ನಂದಕುಮಾರ್, ಕೆ.ಜೆ. ಜಾರ್ಜ್ ಪಾಲ್ಗೊಂಡಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT